ಬೀದರ್: ಯಾರದ್ದೋ ಮಾತು ಕೇಳಿ ಮುಷ್ಕರ ನಡೆಸಬೇಡಿ, ಬನ್ನಿ ಕುಳಿತುಕೊಂಡು ಮಾತನಾಡೋಣ, ಇದು ಇಲಾಖೆಗೆ ಸಂಬಂಧಿಸಿದ ಸಮಸ್ಯೆ, ಹೊರಗಿನವರ ಅವಶ್ಯಕತೆ ಇಲ್ಲಿ ಇಲ್ಲ ಎಂದು ಸಾರಿಗೆ ಇಲಾಖೆ ಸಚಿವ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಬೀದರ್ ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ಇಲಾಖೆ ನೌಕರರು ಕೆಲಸಕ್ಕೆ ಬರಲು ಸಿದ್ಧರಿದ್ದಾರೆ, ಅವರ ಮನವೊಲಿಕೆ ಪ್ರಯತ್ನಗಳು ಕೂಡ ನಡೆಯುತ್ತಿವೆ, ಆದರೆ ಹೊರಗಿನ ಸಂಘಟನೆಗಳ ಕುಮ್ಮಕ್ಕಿನಿಂದ ಮುಷ್ಕರ ಮುಂದುವರಿಸಿದ್ದಾರೆ, ಹೊರಗಿನವರ ಆಮಿಷ, ಒತ್ತಡಕ್ಕೆ ಮಣಿಯಬೇಡಿ ಎಂದು ಮನವಿ ಮಾಡಿಕೊಂಡರು.
ಜನಸಾಮಾನ್ಯರಿಗೆ ಮುಷ್ಕರದಿಂದ ಬಹಳ ತೊಂದರೆಯಾಗುತ್ತಿದೆ. ಇವತ್ತು ಕೂಡ ನಾನು ಮುಷ್ಕರ ಹಿಂತೆಗೆದುಕೊಳ್ಳುವಂತೆ ಕೇಳಿಕೊಳ್ಳುತ್ತೇನೆ, ನಮಗೆ ಮುಷ್ಕರ ನಡೆಸಲು ಆಸಕ್ತಿಯಿಲ್ಲ, ವೇತನ ಹೆಚ್ಚಳ ಮಾಡಿದರೆ ಸಾಕು, ಅನೇಕ ಸಂಘಟನೆಯವರು ಅನವಶ್ಯಕವಾಗಿ ನಮಗೆ ತೊಂದರೆಯನ್ನು ಕೊಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಕೆಲಸಕ್ಕೆ ಹೋದವರಿಗೆ ಜೀವಬೆದರಿಕೆ ಹಾಕುವ ಘಟನೆಗಳು ಕೂಡ ರಾಜ್ಯದ ಅನೇಕ ಕಡೆ ನಡೆಯುತ್ತಿದೆ ಎಂದು ತಿಳಿದುಬಂದಿದೆ ಎಂದರು.
ಬಸ್ಸುಗಳ ವ್ಯವಸ್ಥೆ: ರಾಜ್ಯದ ಬೇರೆ ಬೇರೆ ಭಾಗಗಳಿಂದ ಸುಮಾರು 500 ಬಸ್ಸುಗಳ ಓಡಾಟ ಪ್ರಾರಂಭವಾಗಿದೆ. ಇವತ್ತು ಸಾಯಂಕಾಲದೊಳಗೆ ಸಾವಿರ ಬಸ್ಸುಗಳು ನಾಲ್ಕೂ ನಿಗಮಗಳಿಂದ ಬಸ್ಸುಗಳ ಸಂಚಾರ ಪ್ರಾರಂಭಿಸಬಹುದು ಎಂಬ ನಿರೀಕ್ಷೆಯಿದೆ. ಸಾರಿಗೆ ಇಲಾಖೆ ನೌಕರರಿಗೆ ಸಹ ಸಾರ್ವಜನಿಕರ ತೊಂದರೆ ನೋಡಲು ಆಗುತ್ತಿಲ್ಲ. ಅದರ ಜೊತೆಗೆ ನೆರೆ ರಾಜ್ಯಗಳ ಖಾಸಗಿ ಬಸ್ಸುಗಳಿಗೂ ಬಸ್ ಸಂಚಾರವನ್ನು ಹೆಚ್ಚಿಗೆ ಮಾಡುವಂತೆ ಮನವಿ ಮಾಡಿಕೊಂಡಿದ್ದು, ಅದಕ್ಕೆ ಸ್ಪಂದಿಸಿದ್ದಾರೆ. ಬೆಂಗಳೂರು ನಗರದಿಂದ ಜನರ ಸಂಚಾರಕ್ಕೆ ತೊಂದರೆಯಾಗುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಮಿನಿ ಬಸ್ಸುಗಳು, ಟೆಂಪೊ ಇತ್ಯಾದಿಗಳ ಸೇವೆಯಿದೆ. ಸರ್ಕಾರದ ನಿವೃತ್ತ ಚಾಲಕರು ಮತ್ತು ನಿರ್ವಾಹಕರನ್ನು ಸೇವೆಗೆ ಬರುವಂತೆ ಕೇಳಿಕೊಂಡಿದ್ದೇವೆ. ಮಾಜಿ ಸೈನಿಕರಿಗೆ ಕೂಡ ಆಹ್ವಾನ ಕೊಟ್ಟಿದ್ದೇವೆ ಎಂದರು.
ಇಲಾಖೆ ಅಧಿಕಾರಿಗಳ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಲ್ಲ: ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ಇಂದು ಬೆಳಗ್ಗೆ ಸಾರಿಗೆ ಇಲಾಖೆ ಚಾಲಕರು ಆತ್ಮಹತ್ಯೆ ಮಾಡಿಕೊಂಡಿದ್ದು ವರದಿಯಾಗಿದೆ. ಅಲ್ಲಿನ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಜೊತೆಗೆ ಮಾತನಾಡಿ ಮಾಹಿತಿ ಕಲೆ ಹಾಕಿದಾಗ ಸಾಲದ ಹೊರೆಯಿಂದ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ. ಅವರಿಗೆ ಯಾವ ಕಿರುಕುಳ ಇರಲಿಲ್ಲ, ಸಂಘಟನೆಯವರು ಅದನ್ನು ತಿರುಚಿ ಮೇಲಾಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುಳ್ಳುಸುದ್ದಿ ಹಬ್ಬಿಸಿ ಇಲಾಖೆಗೆ, ಸರ್ಕಾರಕ್ಕೆ ಕೆಟ್ಟ ಹೆಸರು ತರಲು ನೋಡುತ್ತಿದ್ದಾರೆ ಎಂದು ಸಚಿವ ಲಕ್ಷ್ಮಣ ಸವದಿ ಆರೋಪಿಸಿದರು.
ಒತ್ತಡ ತರುತ್ತಿಲ್ಲ: ಇಲಾಖೆ ನೌಕರರಿಗೆ ಕೆಲಸಕ್ಕೆ ಹಾಜರಾಗಿ, ಇಲ್ಲದಿದ್ದರೆ ಸರ್ಕಾರ ಸವಲತ್ತು ಬಿಟ್ಟುಕೊಡಿ ಎಂದು ಅವರ ಮನೆ ಮುಂದೆ ನೊಟೀಸ್ ಹಚ್ಚುತ್ತಿದ್ದೇವೆ ಹೊರತು ಯಾವ ಕಿರುಕುಳ, ಒತ್ತಡ ನೀಡುತ್ತಿಲ್ಲ, ಅವರನ್ನು ಕೆಲಸದಿಂದ ತೆಗೆಯುತ್ತಲೂ ಇಲ್ಲ ಎಂದರು.
ಖಾಸಗಿ ಟ್ಯಾಕ್ಸಿ, ಬಸ್ಸುಗಳಿಗೆ ಪ್ರಯಾಣಿಕರಿಂದ ಎಷ್ಟು ದರ ತೆಗೆದುಕೊಳ್ಳಬೇಕೆಂದು ಸೂಚಿಸಲಾಗಿದೆ, ಅದರ ಪ್ರಕಾರವೇ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
Advertisement