ಗ್ರಂಥಾಲಯ ಮರು ನಿರ್ಮಾಣಕ್ಕೆ ಮೈಸೂರು ನಗರ ಪಾಲಿಕೆ ಸಹಾಯದ ಹಸ್ತ!

ಸೈಯದ್ ಇಸಾಕ್ ಅವರ ರಾಜೀವ ನಗರದ ಸಾರ್ವಜನಿಕ ಗ್ರಂಥಾಲಯವನ್ನು ಪುನರ್ ನಿರ್ಮಿಸಲು ಎಲ್ಲೆಡೆ ನೆರವಿನ ಮಹಾಪೂರವೇ ಹರಿದುಬರುತ್ತಿದ್ದು, ಇದೀಗ ಮೈಸೂರು ನಗರ ಪಾಲಿಕೆ ಕೂಡ ಸಹಾಯ ಮಾಡುವುದಾಗಿ ಹೇಳಿದೆ.
ಸ್ಥಳಕ್ಕೆ ಭೇಟಿ ನೀಡಿರುವ ಮೈಸೂರು ನಗರ ಪಾಲಿಕೆ ಅಧಿಕಾರಿಗಳು
ಸ್ಥಳಕ್ಕೆ ಭೇಟಿ ನೀಡಿರುವ ಮೈಸೂರು ನಗರ ಪಾಲಿಕೆ ಅಧಿಕಾರಿಗಳು
Updated on

ಮೈಸೂರು: ಸೈಯದ್ ಇಸಾಕ್ ಅವರ ರಾಜೀವ ನಗರದ ಸಾರ್ವಜನಿಕ ಗ್ರಂಥಾಲಯವನ್ನು ಪುನರ್ ನಿರ್ಮಿಸಲು ಎಲ್ಲೆಡೆ ನೆರವಿನ ಮಹಾಪೂರವೇ ಹರಿದುಬರುತ್ತಿದ್ದು, ಇದೀಗ ಮೈಸೂರು ನಗರ ಪಾಲಿಕೆ ಕೂಡ ಸಹಾಯ ಮಾಡುವುದಾಗಿ ಹೇಳಿದೆ.

ಸೋಮವಾರ ನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಎಂಡಿಎಂ ಆಯುಕ್ತ ಡಾ.ಡಿ.ಬಿ.ನೇಠ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಶಿಲ್ಪಾನಾಗ್ ಅವರು, ಸೈಯದ್‌ ಇಸಾಕ್‌ ಅವರು ಹಲವು ವರ್ಷಗಳಿಂದ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಸಣ್ಣ ಗ್ರಂಥಾಲಯ ನಡೆಸಿಕೊಂಡು ಬರುತ್ತಿದ್ದರು. ಆದರೆ, ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ಇದೀಗ ಇಡೀ ಲೈಬ್ರರಿ ಸುಟ್ಟು ಭಸ್ಮವಾಗಿದೆ. ಎಷ್ಟೋ ಜನರು ಇಲ್ಲಿ ಬಂದು ಪುಸ್ತಕ ಹಾಗೂ ಪತ್ರಿಕೆ ಓದುತ್ತಿದ್ದರು. ಹಾಗಾಗಿ ನಗರ ಪಾಲಿಕೆಯಿಂದ ಯಾವ ರೀತಿ ಸಹಾಯ ಮಾಡಬಹುದು ಎಂಬ ಉದ್ದೇಶದಿಂದ ಸೈಯದ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ. ಈಗಾಗಲೇ ಉದಯಗಿರಿಯಲ್ಲಿ ಸುಸಜ್ಜಿತವಾದ ಗ್ರಂಥಾಲಯ ಇದೆ. ಜೊತೆಗೆ ಇನ್ನೊಂದು ಗ್ರಂಥಾಲಯ ಮಾಡುವ ಪ್ರಸ್ತಾವ ಇದೆ. ಆದರೂ ಸೈಯದ್‌ ಅವರ ಪುಸ್ತಕ ಪ್ರೀತಿಗಾಗಿ ಸುಟ್ಟ ಜಾಗದಲ್ಲೇ ಮತ್ತೊಂದು ಗ್ರಂಥಾಲಯ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

ಇದು ಸಿಎ ಸೈಟ್‌ ಜಾಗ. ಮುಡಾಗೆ ಸೇರಿದೆ. ಈ ಜಾಗವನ್ನು ಜಿಲ್ಲಾ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಕೊಡಲು ಆಯುಕ್ತರು ಒಪ್ಪಿದ್ದಾರೆ. ಮುಡಾ ವತಿಯಿಂದ ಅಳತೆ ನಡೆಯಲಿದೆ. ಮೇಯರ್‌ ಅಧ್ಯಕ್ಷತೆಯಲ್ಲಿ ಈಗಾಗಲೇ ಸಮಿತಿ ಇದೆ. ಸೈಯದ್‌ ಇಸಾಕ್‌ ಅವರನ್ನು ವಿಶೇಷ ಆಹ್ವಾನಿತರು ಎಂದು ನೇಮಕ ಮಾಡಲಾಗುವುದು. ಮುಡಾ ಆಯುಕ್ತರು ಅದರಲ್ಲಿ ಇರಲಿದ್ದಾರೆ. ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಹಾಗೂ ನೆರವಿನ ರೂಪದಲ್ಲಿ ಬರುತ್ತಿರುವ ಹಣ ದುರುಪಯೋಗವಾಗಬಾರದು ಎಂಬ ಕಾರಣಕ್ಕೆ ಗ್ರಂಥಾಲಯ ನಿರ್ಮಾಣಕ್ಕೆ ಬರುವ ಎಲ್ಲಾ ಹಣವನ್ನು ಸಮಿತಿ ವತಿಯಿಂದ ಖಾತೆ ತೆರೆದು ಅಲ್ಲೇ ಇಡಲಾಗುವುದು. ದಾನಿಗಳು ಇನ್ಮುಂದೆ ಅಲ್ಲಿಗೆ ಹಣ ಕಳುಹಿಸಿದರೆ ಆಯಿತು ಎಂದು ತಿಳಿಸಿದ್ದಾರೆ.

ಗ್ರಂಥಾಲಯದ ರೂಪುರೇಷೆ ಶೀಘ್ರದಲ್ಲೇ ಸಿದ್ಧಪಡಿಸಲಾಗುವುದು. ಡಿಜಿಟಲ್‌ ಲೈಬ್ರರಿಯಾಗಿ ಮಾರ್ಪಡಿಸಲಾಗುವುದು. ಪತ್ರಿಕೆ ಓದಲು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಪಟ್ಟ ಪುಸ್ತಕ ಇಡಲು ಪ್ರತ್ಯೇಕ ಕೊಠಡಿ ನಿರ್ಮಾಣ ಮಾಡಲಾಗುವುದು. ಅದನ್ನು ಇಸಾಕ್‌ ಅವರೇ ಮುನ್ನಡೆಸಿಕೊಂಡು ಹೋಗಲಿದ್ದಾರೆ. ಆದಷ್ಟು ಬೇಗ ಗ್ರಂಥಾಲಯ ಕಾಮಗಾರಿ ಶುರುವಾಗಲಿದೆ ಎಂದು ಹೇಳಿದ್ದಾರೆ.

ಮುಡಾ ಆಯುಕ್ತ ನಟೇಶ್‌ ಅವರು ಮಾತನಾಡಿ, ಇಸಾಕ್‌ ಅವರು ನಡೆಸುತ್ತಿದ್ದ ಗ್ರಂಥಾಲಯ ಸಿಎ ಜಾಗಕ್ಕೆ ಒಳಪಟ್ಟಿದೆ. ಈಗಾಗಲೇ ಬೋರ ಅನ್ನೋ ಸಮುದಾಯಕ್ಕೆ ಈ ಜಾಗ ಹಂಚಿಕೆ ಆಗಿತ್ತು. ಹಂಚಿಕೆಯಾದ ಕಡತವನ್ನು ಪರಿಶೀಲಿಸಿ ಬೋರ ಸಮುದಾಯಕ್ಕೆ ಕೊಟ್ಟ ಜಾಗವನ್ನು ಮಾರ್ಪಡಿಸಲು ಸಾಧ್ಯವಿದೆಯಾ ಎಂಬುದನ್ನು ಚರ್ಚಿಸಲಾಗುವುದು. ನಮ್ಮ ಷರತ್ತು ಎಲ್ಲವನ್ನೂ ಅವರು ಪೂರೈಸಿದ್ದರೆ ಗ್ರಂಥಾಲಯದ ಉಳಿಕೆ ಜಾಗವನ್ನು ಅವರಿಗೆ ನೀಡಬಹುದೇ ಎಂಬುದನ್ನು ಪರಿಶೀಲನೆ ಮಾಡಲಾಗುವುದು. ಸುಟ್ಟ ಜಾಗದಲ್ಲೇ ಗ್ರಂಥಾಲಯ ಮಾಡಲು ಅವಕಾಶ ಕೊಡಲಾಗುವುದು. ಕಾನೂನಿನಲ್ಲಿ ತೊಡಕು ಕಂಡು ಬಂದರೆ ಪಾರ್ಕ್‌ನಲ್ಲಿ ಶೇ.5ರಷ್ಟು ಜಾಗವನ್ನು ಗ್ರಂಥಾಲಯಕ್ಕೆ ಕೊಡಲು ಅವಕಾಶವಿದೆ. ಸೈಯದ್‌ ಅವರ ಆಶಯಕ್ಕೆ ಒತ್ತಾಸೆಯಾಗಿ ಮುಡಾ ಹಾಗೂ ಪಾಲಿಕೆ ನಿಲ್ಲಲಿದೆ ಎಂದಿದ್ದಾರೆ.

ಈ ನಡುವೆ ಸೈಯದ್ ಇಸಾಕ್ ಅವನರ್ನು ಸಂಸದ ಪ್ರತಾಪ್ ಸಿಂಹ ಅವರು ಭೇಟಿ ಮಾಡಿದ್ದು, ಗ್ರಂಥಾಲಯ ನಿರ್ಮಾಣಕ್ಕೆ ರೂ.50 ಸಾವಿರ ನೆರವು ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com