ಕೊರೋನಾ ಎರಡನೇ ಅಲೆ ಸ್ಫೋಟ: ತರಕಾರಿ ಬೆಲೆ ತೀವ್ರ ಕುಸಿತ, ಸಂಕಷ್ಟದಲ್ಲಿ ರೈತರು 

ಕಳೆದ ವರ್ಷ ಕೋವಿಡ್ ಮೊದಲನೇ ಅಲೆ ಎದ್ದ ನಂತರ ಲಾಕ್ ಡೌನ್ ಸಮಯದಲ್ಲಿ ಭಾರೀ ನಷ್ಟವಾಗಿ ರಾಜ್ಯದ ತರಕಾರಿ ಬೆಳೆಗಾರರು, ಹಣ್ಣು-ಹಂಪಲು, ಹೂ ಬೆಳೆಗಾರರು ಭಾರೀ ನಷ್ಟ ಅನುಭವಿಸಿದ್ದರು. ಈ ವರ್ಷ ಕೊರೋನಾ ಎರಡನೇ ತಾಂಡವವಾಡುತ್ತಿದೆ. ರೈತರು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಸಾರ್ಸ್-ಕೊರೋನಾ ಎರಡನೇ ಅಲೆ ವೈರಸ್ ನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಂ
ಚಾಮರಾಜನಗರ ಜಿಲ್ಲೆಯ ಜಮೀನಿನಲ್ಲಿ ಟೊಮಾಟೊ ಬೆಳೆಯನ್ನು ನಾಶ ಮಾಡುತ್ತಿರುವ ರೈತರು
ಚಾಮರಾಜನಗರ ಜಿಲ್ಲೆಯ ಜಮೀನಿನಲ್ಲಿ ಟೊಮಾಟೊ ಬೆಳೆಯನ್ನು ನಾಶ ಮಾಡುತ್ತಿರುವ ರೈತರು

ಮೈಸೂರು: ಕಳೆದ ವರ್ಷ ಕೋವಿಡ್ ಮೊದಲನೇ ಅಲೆ ಎದ್ದ ನಂತರ ಲಾಕ್ ಡೌನ್ ಸಮಯದಲ್ಲಿ ಭಾರೀ ನಷ್ಟವಾಗಿ ರಾಜ್ಯದ ತರಕಾರಿ ಬೆಳೆಗಾರರು, ಹಣ್ಣು-ಹಂಪಲು, ಹೂ ಬೆಳೆಗಾರರು ಭಾರೀ ನಷ್ಟ ಅನುಭವಿಸಿದ್ದರು. ಈ ವರ್ಷ ಕೊರೋನಾ ಎರಡನೇ ತಾಂಡವವಾಡುತ್ತಿದೆ. ರೈತರು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಸಾರ್ಸ್-ಕೊರೋನಾ ಎರಡನೇ ಅಲೆ ವೈರಸ್ ನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಮದುವೆ ಸಮಾರಂಭಗಳಲ್ಲಿ ಸೀಮಿತ ಪ್ರಮಾಣದಲ್ಲಿ ಅತಿಥಿಗಳನ್ನು ಸೇರಿಸುವುದು, ಸಾಮಾಜಿಕವಾಗಿ ಜನರು ಗುಂಪು ಸೇರದಂತೆ ತಡೆಗಟ್ಟಿರುವುದು, ಜಾತ್ರೆಗಳು, ಹಬ್ಬಹರಿದಿಗಳನ್ನು ಸಾರ್ವಜನಿಕವಾಗಿ ಆಚರಿಸಲು ಕತ್ತರಿ ಹಾಕಿರುವುದು ರೈತರ ಬೆಳೆಗಳ ಮಾರಾಟಕ್ಕೆ ಕುತ್ತು ತಂದಿದೆ. ಹಣ್ಣು-ತರಕಾರಿಗಳನ್ನು ಮಾರುಕಟ್ಟೆಗೆ ಒಯ್ಯಲು ಪಕ್ಕದ ರಾಜ್ಯಗಳಿಗೆ ಸಾಗಾಟ ಮಾಡಲು ವಾಹನಗಳ ಓಡಾಟ ಕೂಡ ಕಡಿಮೆಯಾಗಿರುವುದು ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯ ಅಭಾವವನ್ನು ಸೃಷ್ಟಿಸಿದೆ.

ಕನಿಷ್ಠ ಕೆಜಿಗೆ 20ರೂಪಾಯಿಗೆ ರೈತರಿಂದ ಮಾರಾಟವಾಗುತ್ತಿದ್ದ ತರಕಾರಿಗಳು ಈಗ 10 ರೂಪಾಯಿಗೆ ಇಳಿದಿದೆ. ಟೊಮಾಟೊ, ಕಲ್ಲಂಗಡಿ ಹಣ್ಣು, ಬೀನ್ಸ್, ಕ್ಯಾಬೇಜ್, ಬೆಂಡೆಕಾಯಿ, ಸೌತೆಕಾಯಿ, ಬಾಳೆ ಮೊದಲಾದ ಬೆಳೆಗೆ ಸಾಕಷ್ಟು ಅಸಲು ಹಾಕಿ ಬೆಳೆದವರು ಈ ವರ್ಷ ಉತ್ತಮ ಬೆಲೆ ಸಿಗಬಹುದೆಂದು ನಿರೀಕ್ಷಿಸಿದ್ದರು. ಆದರೆ ಇಂದು ಕೈಗೆ ಸಿಕ್ಕಿದ ಬೆಲೆಗೆ ರೈತರು ಹಣ್ಣು-ತರಕಾರಿ, ಹೂವುಗಳನ್ನು ಮಾರಬೇಕಾದ ಪರಿಸ್ಥಿತಿ ಬಂದಿದೆ.

ಅನಿವಾರ್ಯವಾಗಿ ಬೆಳೆಗಳ ನಾಶ: ಕಳೆದ ಕೆಲವು ತಿಂಗಳಿನಿಂದ ಕೆಜಿಗೆ ಸರಾಸರಿ 15 ರೂಪಾಯಿಗೆ ಮಾರಾಟ ಮಾಡುತ್ತಿದ್ದ ಟೊಮಾಟೊವನ್ನು ರೈತರು ಈಗ ಮಾರುಕಟ್ಟೆ ನಾಲ್ಕೈದು ರೂಪಾಯಿಗೆ ಮಾರುತ್ತಿದ್ದಾರೆ. ಅದರಲ್ಲಿ ಬೆಳೆದ ರೈತರಿಗೆ 2 ರೂಪಾಯಿ ಕೂಡ ಸಿಗುವುದಿಲ್ಲ. ಬೆಳೆಗೆ ಮತ್ತು ಕಾರ್ಮಿಕರ ಕೂಲಿ ಸಂಬಳ ಕೂಡ ಸಿಗುತ್ತಿಲ್ಲ ಎಂದು ರೈತರು ಮಾರುಕಟ್ಟೆಗೆ ತೆಗೆದುಕೊಂಡು ಹೋಗದೆ ತಮ್ಮ ಜಮೀನಿನಲ್ಲಿಯೇ ನಾಶ ಮಾಡುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯ ಸಿದ್ದಯ್ಯನಪುರ ಕ್ರಾಸ್ ಬಳಿ ಏಳು ಎಕರೆ ಜಮೀನಿನಲ್ಲಿ ಬಂಪರ್ ಟೊಮಾಟೊ ಬೆಳೆದಿದ್ದ ಮಹೇಶ್ ಜಮೀನಿನಲ್ಲಿ ಬೆಳೆದು ನಿಂತ ತರಕಾರಿಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಸಾಕಷ್ಟು ಹಣ ಸಿಗುವುದಿಲ್ಲ ಎಂದು ನಾಶ ಮಾಡಿದ್ದಾರೆ.

ಟೊಮಾಟೊಗೆ ಬೇಡಿಕೆ ಇಲ್ಲದ ಕಾರಣ ನಮಗೆ 15 ಲಕ್ಷಕ್ಕೂ ಹೆಚ್ಚು ಬೆಳೆ ನಷ್ಟವಾಗಿದೆ. ಕೆಜಿಗೆ 5 ರೂಪಾಯಿ ಸಿಗುತ್ತಿದ್ದರೂ ಕೂಡ ನಾನು ಹೂಡಿಕೆ ಮಾಡಿದ ಹಣ ವಾಪಾಸ್ ಬರುತ್ತಿತ್ತು. ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ನಮ್ಮ ಟೊಮಾಟೊವನ್ನು ಕೆಜಿಗೆ 2 ರೂಪಾಯಿ ಕೊಟ್ಟು ಖರೀದಿಸದಿದ್ದರೆ ನಾವು ಹೇಗೆ ಬದುಕುವುದು ಎಂದು ಮಹೇಶ್ ಕೇಳುತ್ತಾರೆ.

ನಾವು ಬೆಳೆದ ಟೊಮಾಟೊವನ್ನು ಕೆಜಿಗೆ 2 ರೂಪಾಯಿಗೆ ಮಾರಾಟ ಮಾಡುವುದು ಬಿಟ್ಟರೆ ನಮಗೆ ಬೇರೆ ಆಯ್ಕೆಗಳಿಲ್ಲ. ಎರಡು ಎಕರೆಯಲ್ಲಿ ಬೆಳೆಯಲು 2 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದ್ದೇವೆ ಎಂದು ಮತ್ತೊಬ್ಬ ರೈತ ರಾಚಪ್ಪ ಹೇಳುತ್ತಾರೆ.

ನೆರೆಯ ತಮಿಳು ನಾಡು, ಕೇರಳ ರಾಜ್ಯಗಳಿಂದ ಬರುವ ತರಕಾರಿ ಟ್ರಕ್ ಗಳಲ್ಲಿ ಶೇಕಡಾ 60ರಷ್ಟು ಕುಸಿತವಾಗಿದೆ. ಇದು ಗಾಯದ ಮೇರೆ ಬರೆ ಎಳೆದಂತಾಗಿದೆ ರೈತರಿಗೆ. ರಾಜ್ಯ ರೈತ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ತಜ್ಞರ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಲು ವಿಫಲವಾಗಿದೆ. ಸರ್ಕಾರ ಆರಂಭದಲ್ಲಿಯೇ ಕ್ರಮ ಕೈಗೊಳ್ಳುತ್ತಿದ್ದರೆ ಕೊರೋನಾ ಎರಡನೇ ಅಲೆಯನ್ನು ತಡೆಗಟ್ಟುತ್ತಿದ್ದರೆ ರೈತರು, ಸಾಮಾನ್ಯ ಜನರು ಇಂದು ಇಷ್ಟೊಂದು ಪರಿತಪಿಸುವ ಅಗತ್ಯವಿರಲಿಲ್ಲ ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com