ಸಿಎಂ ಬೊಮ್ಮಾಯಿ ಭೇಟಿ ಮಾಡಿದ ಬ್ರಿಟಿಷ್ ಹೈ ಕಮಿಷನರ್, ಸಹಕಾರ ಕುರಿತು ಚರ್ಚೆ

ಭಾರತದ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಅವರು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರನ್ನು ಭೇಟಿಯಾಗಿ ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಬಲಪಡಿಸುವ ಕುರಿತು ಮಹತ್ವದ ಮಾತುಕತೆ ನಡೆಸಿದರು.
ಅಲೆಕ್ಸ್ ಎಲ್ಲಿಸ್ ಹಾಗೂ ಸಿಎಂ ಬೊಮ್ಮಾಯಿ
ಅಲೆಕ್ಸ್ ಎಲ್ಲಿಸ್ ಹಾಗೂ ಸಿಎಂ ಬೊಮ್ಮಾಯಿ
Updated on

ಬೆಂಗಳೂರು: ಭಾರತದ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಅವರು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರನ್ನು ಭೇಟಿಯಾಗಿ ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಬಲಪಡಿಸುವ ಕುರಿತು ಮಹತ್ವದ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ರಾಜ್ಯದ ಹೂಡಿಕೆದಾರ ಸ್ನೇಹಿ ವಾತಾವರಣದ ಸದುಪಯೋಗ ಪಡೆಯುವಂತೆ ಮುಖ್ಯಮಂತ್ರಿಗಳು ಬ್ರಿಟಿಷ್ ಹೈ ಕಮಿಷನರ್ ಅವರಿಗೆ ಸಲಹೆ ಮಾಡಿದರು.

ಕರ್ನಾಟಕ  ಅತ್ಯಂತ ಪ್ರಗತಿ ಪರ ರಾಜ್ಯವಾಗಿದ್ದು, ಹೂಡಿಕೆಗೆ ಅತ್ಯುತ್ತಮ ಪೂರಕ ವಾತಾವರಣ ಹೊಂದಿದೆ. ಕೈಗಾರಿಕೋದ್ಯಮಗಳ ಸ್ಥಾಪನೆಗೆ ತ್ವರಿತ ಅನುಮೋದನೆ ನೀಡುವ ವ್ಯವಸ್ಥೆ ಜಾರಿಯಲ್ಲಿದೆ. ತಂತ್ರಜ್ಞಾನ, ಶಿಕ್ಷಣದಲ್ಲಿ ಮುನ್ನಡೆ ಸಾಧಿಸಿರುವ ರಾಜ್ಯವಾಗಿದ್ದು, ಅತ್ಯುತ್ತಮ ಕುಶಲ ಮಾನವ ಸಂಪನ್ಮೂಲವನ್ನೂ ಹೊಂದಿದೆ. ಯು.ಕೆ. ಮೂಲದ ಹಲವು ಪ್ರತಿಷ್ಠಿತ ಕಂಪೆನಿಗಳಿಗೆ ನೆಲೆಯಾಗಿದ್ದು, ಯು.ಕೆ. ಮೂಲದ ಕಂಪೆನಿಗಳು ಗಣನೀಯವಾಗಿ ಹೂಡಿಕೆ ಮಾಡಿವೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಆರೋಗ್ಯ, ಸಂಸ್ಕೃತಿ, ಭಾಷಾ ವಿಷಯಗಳು ಹೀಗೆ ವಿವಿಧ ಕ್ಷೇತ್ರಗಳಿಗೆ ಪ್ರತ್ಯೇಕ ವಿಶ್ವವಿದ್ಯಾಲಯಗಳನ್ನು ಹೊಂದಿರುವ ಕರ್ನಾಟಕದಲ್ಲಿ ಅತಿ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ವಿವಿಧ ಬಹುರಾಷ್ಟ್ರೀಯ ಕಂಪೆನಿಗಳ 80ಕ್ಕೂ ಹೆಚ್ಚು ಹೈ-ಟೆಕ್ ಸಂಶೋಧನಾ ಸಂಸ್ಥೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಪೂರ್ವದ ಸಿಲಿಕಾನ್ ವ್ಯಾಲಿ ಎಂದೇ ಖ್ಯಾತವಾಗಿರುವ ಬೆಂಗಳೂರು ನಗರ ದೇಶ, ವಿದೇಶಗಳ ಜನರಿಗೆ ನೆಲೆಯಾಗಿದೆ ಎಂದು ತಿಳಿಸಿದರು.

ಇದರೊಂದಿಗೆ ಆರೋಗ್ಯ, ಶಿಕ್ಷಣ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಪರಸ್ಪರ ಸಹಯೋಗದೊಂದಿಗೆ ಕಾರ್ಯನಿರ್ವಹಿಸುವ ಕುರಿತು ಚರ್ಚಿಸಲಾಯಿತು.

ಬೆಂಗಳೂರು ಸಂಚಾರ ನಿರ್ವಹಣೆಯ ಕುರಿತಂತೆ ಯು.ಕೆ. ಸಹಯೋಗದ ಕುರಿತೂ ಸಭೆಯಲ್ಲಿ ಚರ್ಚಿಸಲಾಯಿತು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವ ಸಂದರ್ಭದಲ್ಲಿ ಪಠ್ಯಕ್ರಮ ರೂಪಿಸುವ ನಿಟ್ಟಿನಲ್ಲಿಯೂ ಯು.ಕೆ. ಸಹಯೋಗ ಪಡೆಯಲು ಇರುವ ಅವಕಾಶಗಳ ಕುರಿತು ಚರ್ಚಿಸಲಾಯಿತು.

ಕರ್ನಾಟಕ ಯು.ಕೆ. ಯೊಂದಿಗೆ ಹೂಡಿಕೆ ಒಪ್ಪಂದಗಳ ಜೊತೆಗೆ ಶಿಕ್ಷಣ, ಆರೋಗ್ಯ ಮತ್ತು ಹವಾಮಾನ ಬದಲಾವಣೆ ಮೊದಲಾದ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ನೀಡುವ ಕುರಿತು ಉಭಯ ನಾಯಕರು ಸಹಮತ  ವ್ಯಕ್ತಪಡಿಸಿದರು.

ಬೆಂಗಳೂರಿನ ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ಜೆರೆಮಿ ಬೆಡ್ ಫೋರ್ಡ್, ಸಚಿವರಾದ ಆರ್. ಅಶೋಕ್, ಡಾ. ಸಿ.ಎನ್. ಅಶ್ವತ್ಥನಾರಾಯಣ, ಮುಖ್ಯಮಂತ್ರಿಗಳ ಕಾರ್ಯದರ್ಶಿ ವಿ. ಪೊನ್ನುರಾಜ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ ಹಾಜರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com