ಸ್ಥಳೀಯ ಸಂಸ್ಥೆ ಚುನಾವಣೆ ಮುಂದೂಡಿದ ಬಗ್ಗೆ ಅಫಿಡವಿಟ್ ಸಲ್ಲಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ
ಬೆಂಗಳೂರು: ಕೋವಿಡ್ -19 ಅನ್ನು ಉಲ್ಲೇಖಿಸಿ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಡಿಸೆಂಬರ್ 2021 ರವರೆಗೆ ಮುಂದೂಡಿರುವ ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ರಾಜ್ಯ ಸಚಿವ ಸಂಪುಟದ ನಿರ್ಧಾರ ಸಮರ್ಥಿಸುವ ಅಫಿಡವಿಟ್ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಸಾಂವಿಧಾನಿಕ ಆದೇಶದ ಪ್ರಕಾರ, ಸ್ಥಳೀಯ ಸಂಸ್ಥೆಗಳ ಅವಧಿ ಮುಗಿಯುವ ಮುನ್ನ ಚುನಾವಣೆ ನಡೆಸದಿರುವುದರ ಸ್ವಯಂ ಪ್ರೇರಿತ ಅರ್ಜಿ ದಾಖಲಿಸಿಕೊಂಡಿರುವ ಮುಖ್ಯ ನ್ಯಾಯಮೂರ್ತಿ ಎಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರ ಧಾರ್ಮಿಕ ಸ್ಥಳಗಳಿಗೆ ಜನರು ಭೇಟಿ ನೀಡಲು ಅವಕಾಶ ನೀಡಿದೆ. ಆದರೆ ಮತಗಟ್ಟೆಗಳಿಗೆ ಬರಲು ಅವಕಾಶ ಇಲ್ಲ ಎಂದರೆ ಏನರ್ಥ? ಎಂದು ರಾಜ್ಯ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದೆ. ಅಲ್ಲದೆ ಸಂವಿಧಾನದ ಆದೇಶವನ್ನು ಪಾಲಿಸದ ಏಕೈಕ ರಾಜ್ಯ ಇದು ಎಂದು ಆಕ್ರೋಶ ವ್ಯಕ್ತಪಡಿಸಿದೆ.
ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಡಿಸೆಂಬರ್ 2021 ರವರೆಗೆ ಮುಂದೂಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಅದರಂತೆ ರಾಜ್ಯ ಚುನಾವಣಾ ಆಯೋಗಕ್ಕೆ(ಎಸ್‌ಇಸಿ) ಚುನಾವಣೆ ಮುಂದೂಡಲು ಮನವಿ ಮಾಡಿದೆ ಎಂದು ಸರ್ಕಾರಿ ವಕೀಲರು ಸರ್ಕಾರದ ನಿರ್ಧಾರವನ್ನು ಕೋರ್ಟ್ ಗೆ ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ