ಬಂಕರ್ ನೊಳಗೆ ಅಡಗಿ ಕುಳಿತಿದ್ದೆ, ಎರಡು ದಿನ ಆಹಾರವಿರಲಿಲ್ಲ: ಅಫ್ಘಾನಿಸ್ತಾನದ ಪರಿಸ್ಥಿತಿ ವಿವರಿಸಿದ ಮಂಗಳೂರಿನ ಮೆಲ್ವಿನ್

ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ಕಾಬುಲ್ ನಗರವನ್ನು ಪ್ರವೇಶಿಸುವ ಸಂದರ್ಭದಲ್ಲಿ ಅಲ್ಲಿಂದ ಬಿಟ್ಟು ಸ್ವದೇಶಕ್ಕೆ ಆಗಮಿಸಿದ ಕೆಲವು ಅದೃಷ್ಟವಂತರದಲ್ಲಿ ಮಂಗಳೂರಿನ ಮೆಲ್ವಿನ್ ಮಾಂಟೆರೋ ಕೂಡ ಒಬ್ಬರು.
ಮೆಲ್ವಿನ್ ಮಾಂಟೆರೋ
ಮೆಲ್ವಿನ್ ಮಾಂಟೆರೋ
Updated on

ಮಂಗಳೂರು: ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ಕಾಬುಲ್ ನಗರವನ್ನು ಪ್ರವೇಶಿಸುವ ಸಂದರ್ಭದಲ್ಲಿ ಅಲ್ಲಿಂದ ಬಿಟ್ಟು ಸ್ವದೇಶಕ್ಕೆ ಆಗಮಿಸಿದ ಕೆಲವು ಅದೃಷ್ಟವಂತರದಲ್ಲಿ ಮಂಗಳೂರಿನ ಮೆಲ್ವಿನ್ ಮಾಂಟೆರೋ ಕೂಡ ಒಬ್ಬರು.

ಕಾಬುಲ್ ವಿಮಾನ ನಿಲ್ದಾಣದಿಂದ ಭಾರತೀಯ ವಾಯುಪಡೆಯ ವಿಮಾನದಲ್ಲಿ ಏರಿ ಗುಜರಾತ್ ನ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಬಂದಿಳಿದರು. ಭಾರತೀಯ ರಾಯಭಾರಿಗಳು, ಸಿಬ್ಬಂದಿ ಮತ್ತು ಅಧಿಕಾರಿಗಳೊಂದಿಗೆ ಮೆಲ್ವಿನ್ ತವರಿಗೆ ಮೊನ್ನೆ ಬುಧವಾರ ಆಗಮಿಸಿದರು.

45 ವರ್ಷದ ಮೆಲ್ವಿನ್ ಮಂಗಳೂರಿನ ಉಳ್ಳಾಲ ಸಮೀಪದವರು. ಕಾಬುಲ್ ನಲ್ಲಿ ಕಳೆದ 10 ವರ್ಷಗಳಿಂದ ನ್ಯಾಟೊ ಮಿಲಿಟರಿ ಮೂಲ ಶಿಬಿರದಲ್ಲಿ ಎಲೆಕ್ಟ್ರಿಕ್ ನಿರ್ವಹಣಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಮಿಲಿಟರಿ ಪಡೆಯಡಿ ಅವರು ಸುರಕ್ಷಿತವಾಗಿದ್ದರೂ ಕೂಡ ಕಳೆದೊಂದು ವಾರದಿಂದ ಪರಿಸ್ಥಿತಿ ಉದ್ವಿಗ್ನವಾಗಿದ್ದರಿಂದ ಅವರ ಕುಟುಂಬಸ್ಥರೂ ಆತಂಕಗೊಂಡಿದ್ದರಿಂದ ಅಫ್ಘಾನ್ ಸ್ತಾನ್ ತೊರೆದು ಮಂಗಳೂರಿಗೆ ಬಂದಿದ್ದಾರೆ. ಕಳೆದೊಂದು ವಾರದ ಅಲ್ಲಿನ ಪರಿಸ್ಥಿತಿಯಯನ್ನು ವಿವರಿಸಿದ ಅವರು ಎರಡು ದಿನ ನಮಗೆ ತಿನ್ನಲು ಏನೂ ಆಹಾರವಿರಲಿಲ್ಲ ಎಂದಿದ್ದಾರೆ.

ಭಾರತಕ್ಕೆ ಮರಳಿ ಬರಲು ಸಿದ್ಧವಾಗಿದ್ದ ಅನೇಕ ಭಾರತೀಯರು ಅಡುಗೆ ಕೆಲಸವನ್ನು ಮಾಡುತ್ತಿದ್ದರಿಂದ ನಮಗೆ ಕೊನೆಗೆ ಊಟ ಸಿಗಲಿಲ್ಲ. ತಾಲಿಬಾನೀಯರು ಕಾಬೂಲ್‌ಗೆ ಹತ್ತಿರವಾಗುತ್ತಿದ್ದಂತೆ, ನಮ್ಮ ದೇಹದ ರಕ್ಷಾಕವಚಗಳನ್ನು ಹತ್ತಿರ ಇರಿಸಿಕೊಳ್ಳಲು ನಮ್ಮನ್ನು ಹೇಳಿದರು. ಕಳೆದ ಒಂದು ವಾರದಿಂದ, ನಾವೆಲ್ಲರೂ ಭಯಭೀತರಾಗಿದ್ದೆವು. ತಾಲಿಬಾನಿಗಳು ಎಷ್ಟು ಕ್ರೂರ ಎಂಬುದು ನಮಗೆ ಗೊತ್ತು. ನಮ್ಮ ಕಂಪೆನಿ ಕಡೆಯಿಂದ ಏರ್ ಲಿಫ್ಟ್ ಮಾಡಲು ವ್ಯವಸ್ಥೆ ಮಾಡಿದರು. ನಮ್ಮ ಮಿಲಿಟರಿ ಪಡೆ ಕೂಡ ಸಹಾಯ ಮಾಡಿತು. ತಾಲಿಬಾನಿಯರು ನಗರಕ್ಕೆ ನುಗ್ಗಿದಾಗ ಅಲ್ಲಿನ ಪರಿಸ್ಥಿತಿ ಚಿಂತಾಜನಕವಾಯಿತು ಎಂದರು.

ಜನರು ರನ್ ವೇಯಲ್ಲಿ ನಿಂತಿದ್ದನ್ನು ಮತ್ತು ವಿಮಾನಕ್ಕೆ ಜಿಗಿಯುವುದನ್ನು ನಾವು ನೋಡಿದ್ದೇವೆ. ನಾವು ಗುಜರಾತ್‌ನ ಜಾಮ್‌ನಗರ ಸೇನಾ ಕಂಟೋನ್ಮೆಂಟ್ ತಲುಪಿ ಬುಧವಾರ ಸಂಜೆ ದೆಹಲಿ ಮೂಲಕ ಮಂಗಳೂರನ್ನು ತಲುಪಿದೆವು. ಕೆಲವು ಮಂಗಳೂರಿಯನ್ನರನ್ನು ಒಳಗೊಂಡಂತೆ ಕೆಲವು ಭಾರತೀಯರನ್ನು ನಾರ್ವೆ, ಲಂಡನ್ ಮತ್ತು ಕತಾರ್‌ಗೆ ಯುಎಸ್/ಯುಕೆ ಮಿಲಿಟರಿ ವಿಮಾನಗಳಲ್ಲಿ ಕಳುಹಿಸಲಾಗಿದೆ, ಕ್ವಾರಂಟೈನ್ ಮುಗಿದ ಮೇಲೆ ಅವರು ಹಿಂತಿರುಗಲಿದ್ದಾರೆ ಎಂದರು.

ತಾಲಿಬಾನ್ ಅಫ್ಘಾನಿಸ್ತಾನವನ್ನು ಹಿಡಿತಕ್ಕೆ ತೆಗೆದುಕೊಳ್ಳುತ್ತದೆ ಎಂದು ಸುದ್ದಿ ಸಿಕ್ಕಿ ರಾಕೆಟ್ ದಾಳಿ ನಡೆಸಬಹುದು ಎಂಬ ಸುದ್ದಿ ಕೇಳಿ ಭೀತಿಯಿಂದ ನಾವು ಕಾಂಕ್ರೀಟ್ ಬಂಕರ್ ಒಳಗಡೆ ಅಡಗಿ ಕುಳಿತಿದ್ದೆವು ಎನ್ನುತ್ತಾರೆ.

ಜೂನ್ ಅಂತ್ಯದವರೆಗೆ ಎಲ್ಲವೂ ಸಾಮಾನ್ಯವಾಗಿದ್ದರಿಂದ ತಾಲಿಬಾನ್ ದೇಶವನ್ನು ವಶಪಡಿಸಿಕೊಳ್ಳುತ್ತದೆ ಎಂದು ಭಾವಿಸಿರಲಿಲ್ಲ. ನಾನು ಕಳೆದ ಜೂನ್ ನಲ್ಲಿ ಮಂಗಳೂರಿಗೆ ಬಂದು ಹೋಗಿದ್ದೆ. ಜುಲೈ ಅಂತ್ಯದ ವೇಳೆಗೆ ಎಲ್ಲವೂ ಬದಲಾಯಿತು. ಮುಂದಿನ ಕೆಲವು ತಿಂಗಳುಗಳ ಪರಿಸ್ಥಿತಿಯನ್ನು ನೋಡಿಕೊಂಡು ಸಹಜ ಸ್ಥಿತಿಗೆ ಬಂದರೆ ಮತ್ತೆ ಅಲ್ಲಿಗೆ ಕೆಲಸಕ್ಕೆ ಹೋಗುತ್ತೇನೆ ಎಂದರು.

ಮೆಲ್ವಿನ್ ಅವರ ಪತ್ನಿ ಎಡ್ವಿನ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿ, ನಮ್ಮ ಪ್ರಾರ್ಥನೆಗೆ ಫಲ ಸಿಕ್ಕಿದೆ. ತಾಲಿಬಾನಿಗಳು ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ನಿರಂತರ ಸಂಪರ್ಕದಲ್ಲಿದ್ದೆವು, ಸಂದೇಶ ಮಾತ್ರ ಕಳುಹಿಸಬೇಕಾಗಿತ್ತು, ಕರೆ ಮಾಡುವಂತಿರಲಿಲ್ಲ ಎನ್ನುತ್ತಾರೆ.

ಅಫ್ಘಾನಿಸ್ತಾನದಲ್ಲಿ ಸುರಕ್ಷಿತವಾಗಿರುವ ಫಾದರ್ ರಾಬರ್ಟ್: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ಫಾದರ್ ರಾಬರ್ಟ್ ಅವರ ಕುಟುಂಬವು ಅಫ್ಘಾನಿಸ್ತಾನದಲ್ಲಿ ಸುರಕ್ಷಿತವಾಗಿದೆ ಎಂದು ಅವರಿಂದ ಕರೆ ಬಂದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಅವರು ಅಫ್ಘಾನಿಸ್ತಾನದ ಮಧ್ಯ ಪ್ರಾಂತ್ಯದ ಬಾಮಿಯಾನ್‌ನಲ್ಲಿರುವ ಒಂದು ಚರ್ಚಿನಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರು ಸುರಕ್ಷಿತವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಮೂಲಗಳ ಪ್ರಕಾರ, ಅಫ್ಘಾನಿಸ್ತಾನದಲ್ಲಿರುವ ಎಲ್ಲಾ ಭಾರತೀಯರ ಸುರಕ್ಷತೆಗಾಗಿ ಪ್ರಾರ್ಥಿಸುವಂತೆ ಅವರು ತಮ್ಮ ಕುಟುಂಬಕ್ಕೆ ಸಂದೇಶದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com