ಕಲಬುರಗಿ: ಭ್ರಷ್ಟಾಚಾರದಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವುದಾಗಿ ರಾಜ್ಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ಲೋಕಾಯುಕ್ತ ಸಂಸ್ಥೆಯ ಅಗತ್ಯತೆ ಹಾಗೂ ಕಾಯ್ದೆಗಳ ಬಗ್ಗೆ ಪ್ರಸ್ತಾಪಿಸಿದರು. ಕೇಸುಗಳಲ್ಲಿ ದೂರು ಮತ್ತು ಆಪಾದನೆ ಎಂಬ ಎರಡು ವಿಧ ಇವೆ. ತನ್ನ ಸಮಸ್ಯೆ ಅಥವಾ ತನಗೆ ಅನ್ಯಾಯವಾದಲ್ಲಿ ಅಂತಹ ವ್ಯಕ್ತಿ ದೂರು ನೀಡಬಹುದು. ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ, ಲೋಪ ಮುಂತಾದವುಗಳ ವಿರುದ್ಧ ಆಪಾದನೆಯ ಕೇಸು ಹಾಕಬಹುದಾಗಿದೆ ಎಂದು ಅವರು ಹೇಳಿದರು.
ಬಹುತೇಕ ಹಳ್ಳಿಗಳಲ್ಲಿ ಇನ್ನೂ ಶೌಚಾಲಯಗಳನ್ನು ಬಳಸದೆ, ಬಯಲು ಬಹಿರ್ದೆಸೆಗೆ ಹೋಗುತ್ತಾರೆ ಎಂದು ಕೆಂಡಕಾರಿದ ಉಪಲೋಕಾಯುಕ್ತರು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ತಾಲ್ಲೂಕಿನ 10 ಗ್ರಾಮ ಪಂಚಾಯ್ತಿಗಳನ್ನು ಆಯ್ಕೆ ಮಾಡಿಕೊಂಡು ಬಯಲು ಬಹಿರ್ದೆಸೆ ಮುಕ್ತ ಗ್ರಾಮವಾಗಿ ಮಾಡಬೇಕು ಎಂದು ಕರೆ ನೀಡಿದ ಅವರು, ಬಯಲು ಬಹಿರ್ದೆಸೆ ಹೋಗುವುದನ್ನು ತಡೆಯದಿದ್ದರೆ ಇಓಗಳ ವಿರುದ್ಧ ಕೇಸ್ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
10 ಗ್ರಾಮ ಪಂಚಾಯ್ತಿಗಳ ಪ್ರತಿಯೊಂದು ಹಳ್ಳಿಗಳಲ್ಲಿ ಎಷ್ಟು ಜನ ಫಲಾನುಭವಿಗಳಿದ್ದಾರೆ. ಎಷ್ಟು ಜನ ಶೌಚಾಲಯ ಕಟ್ಟಿಸಿಕೊಂಡಿದ್ದಾರೆ. ಎಷ್ಟು ಜನ ಕಟ್ಟಿಸಿಕೊಂಡಿಲ್ಲ. ಕಟ್ಟಿಸಿಕೊಂಡವರು ಎಷ್ಟು ಜನ ಬಳಕೆ ಮಾಡುತ್ತಾರೆ, ಎಷ್ಟು ಜನ ಬಳಕೆ ಮಾಡುತ್ತಿಲ್ಲ ಹಾಗೂ ಬಳಕೆ ಮಾಡದಂಥವರ ವಿರುದ್ಧ ಯಾವ ಕ್ರಮಕೈಗೊಂಡಿದ್ದೀರಾ ಎಂಬ ಬಗ್ಗೆ ಸಂಪೂರ್ಣ ವರದಿ ನೀಡಬೇಕು ಎಂದು ಅವರು ತಾಕೀತು ಮಾಡಿದರು. ಈ ಸಂಬಂಧ ನಿರ್ಲಕ್ಷ್ಯ ತೋರುವ ತಾ. ಪಂ. ಇಓ ವಿರುದ್ಧ ಕರ್ತವ್ಯ ಲೋಪ ಮುಂತಾದ ಗಂಭೀರ ಪ್ರಕರಣ ದಾಖಲಿಸಲಾಗುತ್ತದೆ ಎಂದು ಹೇಳಿದರು.
ಈ ಕುರಿತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರನ್ನು ಹೊಣೆಗಾರರನ್ನಾಗಿಸಿದಲ್ಲಿ ಮಾತ್ರ ಯಶ ಸಾಧಿಸಲು ಸಾಧ್ಯ ಎಂದು ಕಿವಿ ಮಾತು ಹೇಳಿದ ಅವರು ಎಲ್ಲರೂ ಕೂಡಿ ಗ್ರಾಮಸ್ಥರಿಗೆ ಶೌಚಾಲಯ ಬಳಕೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ 371ಜೆ ತಿದ್ದುಪಡಿ ತರಲಾಗಿದೆ. ಉಚ್ಚ ನ್ಯಾಯಾಲಯದ ಪೀಠ ಬಂತು ಹತ್ತಾರು ಯೋಜನೆಗಳು-ಅಭಿವೃದ್ಧಿ ಕಾಮಗಾರಿಗಳಾದರೂ ಇಲ್ಲಿನ ಜನರ ಜೀವನ ಮಟ್ಟ ಇನ್ನೂ ಸುಧಾರಿಸಲಿಲ್ಲ ಏಕೆ ಎಂದು ಪ್ರಶ್ನಿಸಿದ ಅವರು 371ಜೆ ಮೀಸಲಾತಿ ಅಡಿ ಆಯ್ಕೆಯಾದ ಇಲ್ಲಿನ ಅಧಿಕಾರಿಗಳು ಪ್ರದೇಶದ ಅಭಿವೃದ್ಧಿಗೆ ಬದ್ಧವಾಗಿರಬೇಕಿದೆ. ಸ್ವ-ಹಿತಾಸಕ್ತಿ ಬದಿಗೊತ್ತಿ ಸಾರ್ವಜನಿಕೆ ಸೇವೆಗೆ ನಿಮ್ಮನು ನೀವು ಅರ್ಪಿಸಿಕೊಳ್ಳಿ ಎಂದರು.
ಕಲಬುರಗಿ ಜಿಲ್ಲೆಯಲ್ಲಿ ಕೆರೆಗಳ ಸಂಖ್ಯೆ, ಅತಿಕ್ರಮಣ, ತೆರವು ಹಾಗೂ ಜೇಣೋದ್ಧಾರಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ ಅವರು ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಾರ್ವಜನಿಕರಿಗೆ ಸ್ವಚ್ಛ ಕುಡಿಯುವ ನೀರು ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಪಂಚಾಯತ್ ಸಿ.ಇ.ಓ. ಡಾ.ದಿಲೀಷ್ ಶಶಿ ಅವರು ನರೇಗಾ ಮತ್ತು ಜಲ ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಾದ್ಯಂತ ಪಾಳುಬಿದ್ದಿದ್ದ 100 ಕಲ್ಯಾಣಿಗಳಲ್ಲಿ ಗುರುತಿಸಿ, ಪುನಶ್ಚೇತನ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಇದೂವರೆಗೆ 40 ಕಲ್ಯಾಣಿಗಳು ಪುನಶ್ಚೇತನದ ಪರಿಣಾಮ ನೀರಿನಿಂದ ಮೈದುಂಬಿಕೊಂಡಿವೆ. ಇದಲ್ಲದೆ ಪ್ರತಿ ಹಳ್ಳಿಯಲ್ಲಿ ಕೆರೆ ನಿರ್ಮಾಣಕ್ಕೆ ಸರ್ಕಾರ ನಿರ್ದೇಶನ ಬಂದಿದ್ದು, ಕ್ರಿಯಾ ಯೋಜನೆ ರೂಪಿಸಿ ಅನುಷ್ಟಾನಕ್ಕೆ ತರಲಾಗುವುದು ಎಂದರು.
2012ರ ಬೇಸ್ಡ್ ಲೈನ್ ಸಮೀಕ್ಷೆಯಿಂದ ಹೊರಗುಳಿದ 52438 ಕುಟುಂಬಗಳನ್ನು ಗುರುತಿಸಿದ್ದು, ಇದೂವರೆಗೆ 48218 ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇನ್ನೂ 2021-22ನೇ ಸಾಲಿನಲ್ಲಿಯೂ 9000 ವೈಯಕ್ತಿಕ ಶೌಚಾಲಯ ನಿರ್ಮಾಣದ ಗುರಿ ಹೊಂದಲಾಗಿದೆ. ಜಿಲ್ಲೆಯಾದ್ಯಂತ 445 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದ್ದು, 350 ಕಾರ್ಯಚರಣೆಯಲ್ಲಿವೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸಿಮಿ ಮರಿಯಮ್ ಜಾರ್ಜ್, ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ ಸುಧಾಕರ ಲೋಖಂಡೆ, ಲೋಕಾಯುಕ್ತ ಎಸ್.ಪಿ. ಸತೀಷ್ ಎಸ್. ಚಿಟಗುಬ್ಬಿ ಸೇರಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿದ್ದರು.
Advertisement