

ಬೆಂಗಳೂರು: ಕೋವಿಡ್ ಮೂರನೇ ಅಲೆ ವ್ಯಾಪಿಸುವುದನ್ನು ತಡೆಯಲು ಮತ್ತು ವೈರಸ್ ನ ಕೊಂಡಿಯನ್ನು ತಪ್ಪಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಡ್ಡಾಯ ಲಸಿಕೆ ಆದೇಶ ಹೊರಡಿಸಿದೆ.
ಇತ್ತೀಚೆಗೆ ಬಹುತೇಕ ಚಟುವಟಿಕೆಗಳು ಲಾಕ್ ಡೌನ್ ನಂತರ ಪುನರಾರಂಭಗೊಂಡಿದೆ. ಹೀಗಿರುವಾಗ ಸೋಂಕು ಇನ್ನು ಹೆಚ್ಚು ವ್ಯಾಪಿಸದಂತೆ ತಡೆಗಟ್ಟುವುದು ಕೂಡ ಮುಖ್ಯವಾಗುತ್ತದೆ. ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸಲು ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು, ಹೋಟೆಲ್ ಮತ್ತು ಕಚೇರಿಗಳು ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವುದರ ಜೊತೆಗೆ ತಮ್ಮದೇ ವೆಚ್ಚದಲ್ಲಿ ತಮ್ಮ ಸಿಬ್ಬಂದಿಗೆ ಶೇಕಡಾ 100ರಷ್ಟು ಲಸಿಕೆಯನ್ನು ಕೊಡಿಸಬೇಕು. ಮೊದಲ ಡೋಸ್ ಅನ್ನು ಈ ತಿಂಗಳ 31ರೊಳಗೆ ಎಲ್ಲಾ ಸಿಬ್ಬಂದಿಗೂ ನೀಡಬೇಕು ಎಂದು ಬಿಬಿಎಂಪಿ ಆದೇಶ ಹೊರಡಿಸಿದೆ.
ಈ ಸಂಬಂಧ ವಾಣಿಜ್ಯ ಚಟುವಟಿಕೆ ಸಂಸ್ಥೆಗಳು, ಕೈಗಾರಿಕೆಗಳು, ಕಚೇರಿಗಳು, ಹೊಟೇಲ್ ಗಳಿಗೆ ಬಿಬಿಎಂಪಿ ಸುತ್ತೋಲೆ ಹೊರಡಿಸಿದೆ. ಖಾಸಗಿ ಕಂಪೆನಿಗಳು, ಕೈಗಾರಿಕೆಗಳು, ಹೊಟೇಲ್ ಗಳು ಪಾಲಿಕೆಯ ನಿಯಮ ಪಾಲಿಸಿವೆಯೇ ಎಂದು ತಪಾಸಣೆ ಮಾಡಲು ಬಿಬಿಎಂಪಿ ಮಾರ್ಷಲ್ ಗಳು ಮತ್ತು ಆರೋಗ್ಯಾಧಿಕಾರಿಗಳು ಮುಂದಿನ ತಿಂಗಳಿನಿಂದ ಕಚೇರಿಯ ಅವಧಿಯಲ್ಲಿ ತೆರಳಿ ತಪಾಸಣೆ ಮಾಡುತ್ತವೆ. ಆದೇಶ ಉಲ್ಲಂಘಿಸಿರುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.