ಸಾರ್ವಜನಿಕ ಯೋಜನೆಗಳ ಸ್ಥಳದಿಂದ ರಾಜಕಾರಣಿಗಳ ಫೋಟೋ ತೆಗೆಯಿರಿ, ಇಲ್ಲದಿದ್ದರೇ...

ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಮತ್ತು ರಾಜಕೀಯ ನಾಯಕರ ಚಿತ್ರಗಳು ರಾಜ್ಯದ ಪಟ್ಟಣಗಳು ಮತ್ತು ನಗರಗಳಲ್ಲಿನ ಸರ್ಕಾರಿ ಯೋಜನೆ ತಾಣಗಳಲ್ಲಿ ಪೋಸ್ಟರ್‌ಗಳಿಂದ ಹೊಳೆಯುತ್ತಿರುವುದು ಕೇವಲ ಹಿಂದಿನ ವಿಷಯವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಮತ್ತು ರಾಜಕೀಯ ನಾಯಕರ ಚಿತ್ರಗಳು ರಾಜ್ಯದ ಪಟ್ಟಣಗಳು ಮತ್ತು ನಗರಗಳಲ್ಲಿನ ಸರ್ಕಾರಿ ಯೋಜನೆ ತಾಣಗಳಲ್ಲಿ ಪೋಸ್ಟರ್‌ಗಳಿಂದ ಹೊಳೆಯುತ್ತಿರುವುದು ಕೇವಲ ಹಿಂದಿನ ವಿಷಯವಾಗಿದೆ.

ನಗರಾಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸಾರ್ವಜನಿಕ ಹಣದಿಂದ ಧನಸಹಾಯ ಪಡೆದ ಯೋಜನೆಗಳಿಂದ ರಾಜಕೀಯ ಲಾಭ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವ ರಾಜಕಾರಣಿಗಳ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್‌ಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ವಿವರವಾದ ಆದೇಶವು ಎಲ್ಲಾ ಮಂಡಳಿಗಳು ಮತ್ತು ನಿಗಮಗಳು, ಮಹಾನಗರ ಪಾಲಿಕೆಗಳು, ನಗರಾಭಿವೃದ್ಧಿ ಪ್ರಾಧಿಕಾರಗಳು, ನಗರ ಯೋಜನಾ ಪ್ರಾಧಿಕಾರಗಳು ಮತ್ತು ಇತರ ನಗರ ಸ್ಥಳೀಯ ಸಂಸ್ಥೆಗಳಿಗೆ ಅನ್ವಯಿಸುತ್ತದೆ ಎಂದು ಸೂಚಿಸುತ್ತದೆ. ಆದಾಗ್ಯೂ, ರಾಷ್ಟ್ರಪತಿ, ಪ್ರಧಾನಿ, ಮುಖ್ಯ ನ್ಯಾಯಾಧೀಶರು, ರಾಜ್ಯಪಾಲರು, ಮುಖ್ಯಮಂತ್ರಿಗಳು ಮತ್ತು ಗಾಂಧೀಜಿಯವರ ಫೋಟೋಗಳನ್ನು ಬಳಸಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಈ ಆದೇಶವು ತಕ್ಷಣವೇ ಜಾರಿಗೆ ಬರಲಿದ್ದು, ಯಾವುದೇ ಚುನಾಯಿತ ಪ್ರತಿನಿಧಿಗಳು ಮತ್ತು ರಾಜಕಾರಣಿಗಳ ಫೋಟೋ ಇದ್ದಲ್ಲಿ ಅದನ್ನು ಕೂಡಲೇ ತೆಗೆದು ಹಾಕುವಂತೆ ಸೂಚಿಸಲಾಗಿದೆ.

ಒಂದು ವೇಳೆ ಅನುಷ್ಠಾನಗೊಳಿಸದಿದ್ದರೆ, ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್‌ ನೋಂದಾಯಿಸಬಹುದು ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಹೇಳಲಾಗಿದೆ.

ನವೆಂಬರ್ 2020 ರಲ್ಲಿ, ಆಗಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಬಸ್ ಶೆಲ್ಟರ್‌ಗಳು, ಕುಡಿಯುವ ನೀರಿನ ಘಟಕಗಳು, ಬಸ್‌ಗಳು ಮತ್ತು ಇತರ ಸ್ಥಳಗಳಲ್ಲಿ ಸರ್ಕಾರಿ ಮತ್ತು ಬಿಬಿಎಂಪಿ ಜಾಹೀರಾತುಗಳಲ್ಲಿ ಚುನಾಯಿತ ಪ್ರತಿನಿಧಿಗಳ ಛಾಯಾಚಿತ್ರಗಳನ್ನು ಬಳಸಬಾರದು ಎಂದು ಸುತ್ತೋಲೆ ಹೊರಡಿಸಿದ್ದರು. ಆದರೆ ಆದೇಶವನ್ನು ನಿರ್ಲಕ್ಷಿಸಲಾಗಿತ್ತು, ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ನಂತರ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿಬಿಎಂಪಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬಿಡಬ್ಲ್ಯೂಎಸ್‌ಎಸ್‌ಬಿ, ಬಿಎಂಆರ್‌ಸಿಎಲ್, ಬಿಎಂಆರ್‌ಡಿಎಲ್ ಮತ್ತು ಇತರ ವಿಭಾಗಗಳ ಎಲ್ಲಾ ಅಧಿಕಾರಿಗಳಿಗೆ ಜುಲೈ 2021 ರ ಅಂತ್ಯದೊಳಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಯಾವುದೇ ಸಾರ್ವಜನಿಕ ಯೋಜನೆಯಲ್ಲಿ ರಾಜಕೀಯ ನಾಯಕರ ಫೋಟೋಗಳು ಅಥವಾ ಹೆಸರುಗಳನ್ನು ಹಾಕಬಾರದು ಎಂದು ನ್ಯಾಯಾಲಯವು ನಿರ್ದೇಶನ ನೀಡಿತ್ತು. ಚುನಾಯಿತ ಪ್ರತಿನಿಧಿಗಳ ಫೋಟೋಗಳನ್ನು ಬಳಸುತ್ತಿರುವ ನಿರ್ಮಾಣ ಕಾರ್ಯಗಳ ವಿವರಗಳನ್ನು ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com