ಶೇ. 100 ರಷ್ಟು 1ನೇ ಡೋಸ್ ಲಸಿಕೆ ಗುರಿ ಸಾಧಿಸಿದ ರಾಜ್ಯದ ಮೊದಲ ಜಿಲ್ಲೆ ಬೆಂಗಳೂರು ನಗರ, ಪ್ರತಿ ಬುಧವಾರ ಲಸಿಕಾ ಉತ್ಸವ

ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಲಸಿಕೆ ಅಭಿಯಾನ ವೇಗವಾಗಿ ನಡೆಯುತ್ತಿದ್ದು, ಶೇ. 100 ರಷ್ಟು 1ನೇ ಡೋಸ್ ಲಸಿಕೆ ನೀಡಿದ ರಾಜ್ಯದ ಮೊದಲ ಜಿಲ್ಲೆ ಎಂಬ ಗೌರವಕ್ಕೆ ಬೆಂಗಳೂರು ನಗರ ಪಾತ್ರವಾಗಿದೆ.
ಲಸಿಕೆ ಪಡೆದುಕೊಳ್ಳುತ್ತಿರುವ ಮಹಿಳೆ
ಲಸಿಕೆ ಪಡೆದುಕೊಳ್ಳುತ್ತಿರುವ ಮಹಿಳೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಲಸಿಕೆ ಅಭಿಯಾನ ವೇಗವಾಗಿ ನಡೆಯುತ್ತಿದ್ದು, ಶೇ. 100 ರಷ್ಟು 1ನೇ ಡೋಸ್ ಲಸಿಕೆ ನೀಡಿದ ರಾಜ್ಯದ ಮೊದಲ ಜಿಲ್ಲೆ ಎಂಬ ಗೌರವಕ್ಕೆ ಬೆಂಗಳೂರು ನಗರ ಪಾತ್ರವಾಗಿದೆ.

ಬೆಂಗಳೂರು ನಗರ(ಬಿಬಿಎಂಪಿ ಹೊರತುಪಡಿಸಿ) ಶೇ. 100 ರಷ್ಟು 1ನೇ ಡೋಸ್ ಲಸಿಕೆ ಗುರಿ ಸಾಧಿಸಿದ ಕರ್ನಾಟಕದ ಮೊದಲ ಜಿಲ್ಲೆಯಾಗಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಆರೋಗ್ಯ ಸಚಿವ ಕೆ ಸುಧಾಕರ್ ಅವರು ಟ್ವೀಟ್ ಮಾಡಿದ್ದಾರೆ.

ಇನ್ನು ಪ್ರತಿ ಬುಧವಾರ ಲಸಿಕಾ ಉತ್ಸವ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕೋವಿಡ್ ನಿಯಂತ್ರಣ ಲಸಿಕಾ ವಿಚಾರವಾಗಿ ವಿಕಾಸಸೌಧದಲ್ಲಿ ವೈದ್ಯಕೀಯ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಸಭೆಯ ವಿವರಗಳನ್ನು ಹಂಚಿಕೊಂಡ ಸಚಿವ ಸುಧಾಕರ್, ಸಭೆಯಲ್ಲಿ ಕೋವಿಡ್ ಸ್ಥಿತಿಗತಿ, ಲಸಿಕಾ ವಿಚಾರವಾಗಿ ಮಹತ್ವದ ಚರ್ಚೆ ನಡೆಸಲಾಗಿದೆ. ಕಳೆದ ಆಗಸ್ಟ್ ತಿಂಗಳಿನಲ್ಲಿ 1.10 ಕೋಟಿ ಕೇಂದ್ರದಿಂದ ಲಸಿಕೆ ಬಂದಿದ್ದು, ಈಗ ನೀಡುತ್ತಿರುವ ಲಸಿಕಾ ಪ್ರಮಾಣವನ್ನು ದ್ವಿಗುಣ ಮಾಡುವ ಗುರಿ ಹೊಂದಿದ್ದು, ಪ್ರತಿ ಬುಧವಾರ ಲಸಿಕಾ ಉತ್ಸವ ನಡೆಸಲು ನಿರ್ಧರಿಸಲಾಗಿದೆ ಎಂದರು. 

ಬೆಂಗಳೂರಿನ ಸ್ಲಂಗಳಲ್ಲಿ ಲಸಿಕಾ ಉತ್ಸವ ಮಾಡುತ್ತೇವೆ. ಶೀಘ್ರವಾಗಿ ಈ ಕಾರ್ಯಕ್ರಮ ರೂಪಿಸಲಾಗುವುದು. ಇಂದಿನ ಸಭೆಯಲ್ಲಿ ಲಸಿಕೆ ಹೆಚ್ಚಳಕ್ಕೆ ಹೊಸ ಕಾರ್ಯತಂತ್ರ ರೂಪಿಸುವ ಬಗ್ಗೆ ಚರ್ಚೆಯಾಗಿದೆ. ಪ್ರತಿದಿನ 5 ಲಕ್ಷ ಲಸಿಕೆ ವಿತರಣೆಯಾಗುತ್ತಿದ್ದು, ಕಳೆದೊಂದು ವಾರದಲ್ಲಿ ಒಂದು ದಿನ 10 ಲಕ್ಷ ಲಸಿಕೆ ವಿತರಣೆಯಾಗಿದೆ. ಹೀಗಾಗಿ ಒಂದು ತಿಂಗಳಲ್ಲಿ 1 ಕೋಟಿ ಗುರಿಮುಟ್ಟುವುದಾಗಿ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ದೆಹಲಿಯಲ್ಲಿ ಸಿಎಂ ಜೊತೆಗೂಡಿ ಕೇಂದ್ರದ ಆರೋಗ್ಯ ಸಚಿವರನ್ನು ಇತ್ತೀಚೆಗೆ ಭೇಟಿ ಮಾಡಿ ಇನ್ನಷ್ಟು ಲಸಿಕೆಗೆ ಮನವಿ ಮಾಡಿದ್ದೇವೆ. ಕೇಂದ್ರ ಸಚಿವರು ನೀಡಿದ ಭರವಸೆಯಂತೆ ಹೆಚ್ಚಿನ ಲಸಿಕೆ ರಾಜ್ಯಕ್ಕೆ ಬರಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1 ಕೋಟಿ ಲಸಿಕೆ ಡ್ರೈವ್ ಆಗಿದ್ದು, ಇಲ್ಲಿಯವರೆಗೆ 4 ಕೋಟಿ ಲಸಿಕೆ ವಿತರಣೆಯಾಗಿದೆ. ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಹೆಚ್ಚು ‌ಲಸಿಕೆ ಹಾಕಿದ್ದೇವೆ. ಬೀದರ್,ಯಾದಗಿರಿ, ಕಲಬುರಗಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಈಗಲೂ ಕೂಡ ಲಸಿಕೆ ಬಗ್ಗೆ ತಪ್ಪು ಅಭಿಪ್ರಾಯ ಹೊಂದಿರುವುದರಿಂದ ಜನರು ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿರುವುದನ್ನು ಸರಿಪಡಿಸಬೇಕಿದೆ. ಈ ಜಿಲ್ಲೆಗಳಲ್ಲಿ ಲಸಿಕೆ ವಿತರಣೆ ಹೆಚ್ಚಿಸಲಾಗುವುದು. ಕೇರಳದ ಗಡಿ ಜಿಲ್ಲೆಗಳಲ್ಲಿ ಲಸಿಕೆ ಹೆಚ್ಚು ‌ಮಾಡುತ್ತಿದ್ದೇವೆ. ಮೊದಲ ಪ್ರಾಶಸ್ತ್ಯ ದಲ್ಲಿ ಲಸಿಕೆ ನೀಡುತ್ತೇವೆ. ಬೆಂಗಳೂರಿನ ಕೊಳಗೇರಿಗಳಲ್ಲಿ ಲಸಿಕಾ ಮೇಳ ನಡೆಸಿ ಕೊಳಗೇರಿ ವಾಸಿಗಳಿಗೆ ಪೂರ್ಣಪ್ರಮಾಣದಲ್ಲಿ ಲಸಿಕೆ ನೀಡುತ್ತೇವೆ. ಅದರಂತೆ ಗಡಿಭಾಗದ ಜಿಲ್ಲೆಗಳಲ್ಲಿ ಲಸಿಕೆ ಹೆಚ್ಚಿಸುತ್ತೇವೆ. ಕೇರಳ ಗಡಿಯ 20 ಕಿ.ಮೀ ವ್ಯಾಪ್ತಿಯಲ್ಲಿ ಲಸಿಕೆ ನೀಡಲಾಗುತ್ತಿದ್ದು, ಅಲ್ಲಿರುವ ಜನರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಿ ಡಿಸೆಂಬರ್ 31 ರೊಳಗೆ ಎರಡೂ ಹಂತದ ಲಸಿಕೆ ಮುಗಿಸುತ್ತೇವೆ. ರಾಜ್ಯದ ಎಲ್ಲ ಜನತೆಗೆ ಡಿಸೆಂಬರ್ ಅಂತ್ಯದೊಳಗೆ ಲಸಿಕೆ ನೀಡುವುದಾಗಿ ಸುಧಾಕರ್ ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com