ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಗೊಂದಲ ಬೇಡ; ಇದು ಸಂಪೂರ್ಣ ವಿದ್ಯಾರ್ಥಿ ಕೇಂದ್ರಿತ: ಡಾ. ಸಿ.ಎನ್. ಅಶ್ವತ್ಥ ನಾರಾಯಣ

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ದೇಶದ ಅಭಿವೃದ್ಧಿಗೆ ಪೂರಕವಾಗಿದ್ದರೂ ಇದರ ಬಗ್ಗೆ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ಕಿವಿಗೂಡುವ ಅಗತ್ಯವಿಲ್ಲ. ಸರ್ಕಾರ ಕಲಿಕೆಯಲ್ಲಿ ಸುಧಾರಣೆ ತರುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಡಾ.ಸಿ.ಎನ್. ಅಶ್ವತ್ಥ ನಾರಾಯಣ
ಡಾ.ಸಿ.ಎನ್. ಅಶ್ವತ್ಥ ನಾರಾಯಣ
Updated on

ಮಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ದೇಶದ ಅಭಿವೃದ್ಧಿಗೆ ಪೂರಕವಾಗಿದ್ದರೂ ಇದರ ಬಗ್ಗೆ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ಕಿವಿಗೂಡುವ ಅಗತ್ಯವಿಲ್ಲ. ಸರ್ಕಾರ ಕಲಿಕೆಯಲ್ಲಿ ಸುಧಾರಣೆ ತರುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವರ್ತಮಾನ ಭಾರತದ ಅಗತ್ಯವೇನು?ಶೈಕ್ಷಣಿಕವಾಗಿ ದೇಶ ಎದುರಿಸುತ್ತಿರುವ ಸವಾಲುಗಳೇನು?ಎಂಬುದನ್ನು ಅರಿತು ಸಮಾಜ ಹಾಗೂ ರಾಷ್ಟ್ರೀಯ ಸುಧಾರಣೆಯ ನಿಟ್ಟಿನಲ್ಲಿ ಈ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಆದರೆ, ಕೆಲವರು ಇದರಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.

ನೂತನ ಶಿಕ್ಷಣ ನೀತಿ ವಿದ್ಯಾರ್ಥಿ ಸ್ನೇಹಿ ಹಾಗೂ ವಿದ್ಯಾರ್ಥಿ ಕೇಂದ್ರಿತವಾಗಿದೆ. ಒಂದು ಮಾತಿನಲ್ಲಿ ಹೇಳುವುದಾದರೆ ಭವಿಷ್ಯದ ಭಾರತದ ಎಲ್ಲ ಅಗತ್ಯಗಳನ್ನು ಪೂರೈಸುವ ಪರಿಣಾಮಕಾರಿ ಅಂಶಗಳೆಲ್ಲವೂ ಇದರಲ್ಲೇ ಅಡಕವಾಗಿವೆ. ದೇಶದ ಶತಮಾನೋತ್ಸವ ಸಂದರ್ಭದಲ್ಲಿ ವಿಶ್ವಕ್ಕೆ ವಿಶ್ವ ಗುರುವಾಗಬೇಕಾದರೆ ಈ ನೀತಿಯನ್ನು ಆಮೂಲಾಗ್ರವಾಗಿ ಜಾರಿ ಮಾಡಬೇಕಾಗಿದೆ ಎಂದರು.

ಈಗ ಪಠ್ಯೇತರ ಚಟುವಟಿಕೆ ಕೂಡಾ ಪಠ್ಯದ ಒಂದು ಭಾಗ. ಅಲ್ಲದೇ, ಕುಶಲತೆ ಕಲಿಸುವ ಕೆಲಸವೂ ಈಗ ಆಗಲಿದೆ. ವಿದ್ಯಾರ್ಥಿ ತನಗೆ ಇಷ್ಟವಾಗುವ ವಿಷಯವನ್ನು ಮುಕ್ತವಾಗಿ ಕಲಿಯುವ ಅವಕಾಶ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿದೆ. ವಿದ್ಯಾರ್ಥಿಗಳಿಗೆ ಬಹು ಆಯ್ಕೆಯ ಹಾಗೂ ಬಹು ಶಿಸ್ತೀಯ ಕಲಿಕೆಗೆ ಮುಕ್ತ ಅವಕಾಶವಿದೆ. ತಂತ್ರಜ್ಞಾನ ಮೂಲಕ ಎಲ್ಲಿಂದ ಬೇಕಾದರೂ ಕಲಿಯಬಹುದು. ಮಾಹಿತಿಯನ್ನು ಜ್ಞಾನವಾಗಿ ರೂಪಿಸುವ ಕೆಲಸವಾಗಬೇಕು ಅದು ಈಗ ಆಗುತ್ತಿದೆ ಎಂದು ಸಚಿವರು ಹೇಳಿದರು.

ಹೊಸ ಶಿಕ್ಷಣ ನೀತಿ ಅನುಸಾರ ವಾರ್ಷಿಕ ಮೌಲ್ಯ ಮಾಪನದ ಬದಲಿಗೆ ನಿತ್ಯದ ಕಲಿಕೆ- ಬೋಧನೆಯ ಬಳಿಕ ಮೌಲ್ಯ ಮಾಪನವೂ ಇರುತ್ತದೆ. ಈ ಮೂಲಕ ಕಲಿಕೆಯ ಗುಣಮಟ್ಟ ವೃದ್ಧಿಯಾಗುವುದರ ಜೊತೆಗೆ ಪ್ರತಿ ವಿದ್ಯಾರ್ಥಿಯ ಸಾಮರ್ಥ್ಯವೂ ಹೆಚ್ಚಾಗಲಿದೆ. ಇದರಿಂದ ಜಾಗತಿಕವಾಗಿ ನಮ್ಮ ವಿದ್ಯಾರ್ಥಿಗಳು ಸ್ಪರ್ಧೆ ನಡೆಸಲು ಸುಲಭ ಸಾಧ್ಯವಾಗುತ್ತದೆ ಎಂದು ಡಾ. ಅಶ್ವತ್ಥ ನಾರಾಯಣ ನುಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com