ಕೊರೋನಾ ಮೂರನೇ ಅಲೆ, ಓಮಿಕ್ರಾನ್ ರೂಪಾಂತರಿ ಬಗ್ಗೆ ಆರೋಗ್ಯ ಸಚಿವ ಡಾ ಸುಧಾಕರ್ ಏನು ಹೇಳಿದರು? ಸಂದರ್ಶನ

ಭಾರತದಲ್ಲಿ ಅದರಲ್ಲೂ ಕರ್ನಾಟಕದ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕಾಲಿಟ್ಟ ಓಮಿಕ್ರಾನ್ ರೂಪಾಂತರಿ ಕೊರೋನಾ ವೈರಸ್(SARS-CoV2) ಜೊತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿ ಹಲವು ಸ್ಥಳಗಳು ಕ್ಲಸ್ಟರ್ ಗಳಾಗಿ ಪರಿವರ್ತನೆಯಾಗುತ್ತಿವೆ.
ಡಾ ಕೆ ಸುಧಾಕರ್
ಡಾ ಕೆ ಸುಧಾಕರ್
Updated on

ಬೆಂಗಳೂರು: ಭಾರತದಲ್ಲಿ ಅದರಲ್ಲೂ ಕರ್ನಾಟಕದ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕಾಲಿಟ್ಟ ಓಮಿಕ್ರಾನ್ ರೂಪಾಂತರಿ ಕೊರೋನಾ ವೈರಸ್(SARS-CoV2) ಜೊತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿ ಹಲವು ಸ್ಥಳಗಳು ಕ್ಲಸ್ಟರ್ ಗಳಾಗಿ ಪರಿವರ್ತನೆಯಾಗುತ್ತಿವೆ. ಈ ಸಂದರ್ಭದಲ್ಲಿ ಸರ್ಕಾರದ ಆರೋಗ್ಯ ಇಲಾಖೆ ಯಾವ ರೀತಿ ಸಜ್ಜಾಗಿದೆ ಎಂಬ ಬಗ್ಗೆ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರನ್ನು ಮಾತನಾಡಿಸಿದಾಗ:

ಓಮಿಕ್ರಾನ್ ರೂಪಾಂತರಿ ಕೊರೋನಾ ಪತ್ತೆಯಾದ ನಂತರ ಮೂರನೇ ಅಲೆ ಎಷ್ಟು ಅಪಾಯಕಾರಿಯಾಗಿದೆ?
-ರಾಜ್ಯದಲ್ಲಿ ಇದುವರೆಗೆ ಇಬ್ಬರಲ್ಲಿ ಓಮಿಕ್ರಾನ್ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದೆ. ಸರ್ಕಾರದ ತಯಾರಿ ಬಗ್ಗೆ ಈಗಲೇ ಹೇಳುವುದು ಕಷ್ಟ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ, ಸರ್ಕಾರ ಪ್ರಯಾಣ ನಿರ್ಬಂಧ ಮತ್ತು ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿ ಮಾಡಿದೆ. ಲಸಿಕೆ ನೀಡಿಕೆಯನ್ನು ಹೆಚ್ಚಿಸಲಾಗುತ್ತಿದೆ. ಬೂಸ್ಟರ್ ಡೋಸ್ ನೀಡುವ ಬಗ್ಗೆ ಕೂಡ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು ಈ ಮೂರನೇ ಅಲೆ ಸಂದರ್ಭದಲ್ಲಿ ಕಾಲೇಜು ಮತ್ತು ಶಾಲಾ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅಂತೂ ಮೂರನೇ ಅಲೆಯನ್ನು ಎದುರಿಸಲು ಸಜ್ಜಾಗಿದ್ದೇವೆ.

ಶಿಕ್ಷಣ ಸಂಸ್ಥೆಗಳಲ್ಲಿ ಕ್ಲಸ್ಟರ್ ನಿರ್ಮಾಣ ಏನು ಸೂಚಿಸುತ್ತದೆ?
-ಇತ್ತೀಚೆಗೆ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಕೊರೋನಾ ಮೂರನೇ ಅಲೆ ತಡೆಗೆ ತಕ್ಷಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಈ ರೀತಿ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ಕ್ಲಸ್ಟರ್ ಗಳನ್ನಾಗಿ ಮಾಡಿ ವಿದ್ಯಾರ್ಥಿಗಳು, ಆಡಳಿತ ಮಂಡಳಿ ಮತ್ತು ಪೋಷಕರು, ಸುತ್ತಮುತ್ತಲಿನ ಜನರಲ್ಲಿ ಎಚ್ಚರಿಕೆ ಮೂಡಿಸಲಾಗುತ್ತದೆ.

ಸದ್ಯ ರಾಜ್ಯದಲ್ಲಿ ಮೂರನೇ ಅಲೆ ಆರಂಭದ ಹಂತದಲ್ಲಿದಿಯೇ?
-ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಧಾರವಾಡದ ಎಸ್ ಡಿಎಂ ಮೆಡಿಕಲ್ ಕಾಲೇಜು, ಬೆಂಗಳೂರಿನ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಬೆಂಗಳೂರು, ಆನೇಕಲ್ ನ ಸ್ಪೂರ್ತಿ ನರ್ಸಿಂಗ್ ಕಾಲೇಜುಗಳು ಕ್ಲಸ್ಟರ್ ಗಳಾಗಿ ಪರಿವರ್ತನೆಯಾಗಿದ್ದು ನಿರಂತರವಾಗಿ ಅಲ್ಲಿ ಪರಿಸ್ಥಿತಿಯನ್ನು ನಿಗಾವಹಿಸುತ್ತಿದ್ದೇವೆ.

ಓಮಿಕ್ರಾನ್ ಬಹಳ ವೇಗವಾಗಿ ಹರಡುತ್ತದೆ ಎಂಬ ಮಾತಿದೆ, ಸರ್ಕಾರ ಅದನ್ನು ತಡೆಯಲು ಹೇಗೆ ಸಜ್ಜಾಗಿದೆ?
-ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆಹಚ್ಚುವ ಕೆಲಸ ಮಾಡಲಾಗುತ್ತಿದೆ. ಅವರನ್ನು ಪರೀಕ್ಷೆಗೊಳಪಡಿಸಿ ಪ್ರತ್ಯೇಕವಾಗಿರಿಸಲಾಗುತ್ತದೆ. ಜನರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಪದೇ ಪದೇ ಹೇಳುತ್ತೇನೆ. ಕೋವಿಡ್ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು. ಕೋವಿಡ್ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆಯಬೇಕು. ಮಾಸ್ಕ್ ಗಳನ್ನು ಧರಿಸಿಯೇ ಹೊರಗೆ ಬರಬೇಕು, ಸರ್ಕಾರದ ಮಟ್ಟದಲ್ಲಿ ನಾವು ಸಾಧ್ಯವಾದಷ್ಟು ಕೆಲಸ ಮಾಡುತ್ತಿದ್ದೇವೆ.

ಓಮಿಕ್ರಾನ್ ಗೆ ಮಕ್ಕಳು ಒಳಗಾದರೆ ಏನು ಮಾಡಬೇಕು, ನಮ್ಮ ರಾಜ್ಯ ಸಿದ್ದವಾಗಿದೆಯೇ?
ಸೋಂಕಿಗೆ ಒಳಗಾಗಿ ಗಂಭೀರವಾಗಿರುವ ಮಕ್ಕಳಿಗೆ ಐಸಿಯು ಸಿದ್ಧತೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಅಗತ್ಯ ಉಪಕರಣಗಳು ಮತ್ತು ಚಿಕಿತ್ಸೆಗೆ ಇತರ ವ್ಯವಸ್ಥೆಗಳ ಅಗತ್ಯವನ್ನು ಒಗ್ಗೂಡಿಸಲು ಮುಂದಾಗಿದ್ದೇವೆ. ಸ್ಥಳೀಯ ವೈದ್ಯರು ಮತ್ತು ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳ ಸಹಾಯವನ್ನೂ ಪಡೆಯುತ್ತೇವೆ.

ರಾಜ್ಯದಲ್ಲಿ 18 ಸಾವಿರ ಅಂತಿಮ ವರ್ಷದ ನರ್ಸಿಂಗ್ ಮತ್ತು ಪಾರಾ ಮೆಡಿಕಲ್ ಕೋರ್ಸ್ ಓದುವ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ತರಬೇತಿ ನೀಡಿ ಸೋಂಕು ಉಲ್ಬಣಗೊಂಡರೆ ಪರಿಸ್ಥಿತಿ ಎದುರಿಸಲು ಅವರ ಸೇವೆ ಪಡೆದುಕೊಳ್ಳುತ್ತೇವೆ.

 ಚಿಕಿತ್ಸಾ ವಿಧಾನಗಳು ಹೇಗೆ?
ರಾಜ್ಯ ಸರ್ಕಾರ ನಿರಂತರವಾಗಿ ಕೇಂದ್ರ ಸರ್ಕಾರ ಜೊತೆ ಸಂಪರ್ಕದಲ್ಲಿರುತ್ತದೆ. ಚಿಕಿತ್ಸಾ ವಿಧಾನದ ಎಲ್ಲಾ ಮಾಹಿತಿಗಳನ್ನು ಪಡೆದು ಸಜ್ಜಾಗುತ್ತಿದ್ದೇವೆ. ಅದು ಕೊರೋನಾ ಪರೀಕ್ಷೆ, ಸೋಂಕು ಪತ್ತೆಹಚ್ಚುವಿಕೆ ಅಥವಾ ಚಿಕಿತ್ಸಾ ವಿಧಾನಗಳಲ್ಲಿರಬಹುದು.

ಕರ್ನಾಟಕದಲ್ಲಿ ಈಗ ಕೊರೋನಾ ಲಸಿಕೆಯ ಸ್ಥಿತಿಗತಿ ಹೇಗಿದೆ?
ಕೊರೋನಾ ಮೊದಲ ಮತ್ತು ಎರಡನೇ ಡೋಸ್ ಲಸಿಕೆ ವಿತರಣೆಯಲ್ಲಿ ಕರ್ನಾಟಕ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಅರ್ಹ ಜನಸಂಖ್ಯೆಯಲ್ಲಿ ಶೇಕಡಾ 93ರಷ್ಟು ಮಂದಿ ಮೊದಲ ಡೋಸ್ ಪಡೆದಿದ್ದು, ಶೇಕಡಾ 64 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ರಾಜ್ಯದ ಎಲ್ಲಾ ಅರ್ಹ ಜನರು ಸಂಪೂರ್ಣವಾಗಿ ಎರಡೂ ಡೋಸ್ ಲಸಿಕೆ ಪಡೆಯುವುದು ನಮ್ಮ ಗುರಿಯಾಗಿದೆ. ನಮ್ಮ ಗುರಿಯೆಡೆಗೆ ಸಾಗಲು ಶ್ರಮಿಸುತ್ತಿದ್ದೇವೆ.

ಎರಡೂ ಡೋಸ್ ಪಡೆದ ವೈದ್ಯರಿಗೆ ಓಮಿಕ್ರಾನ್ ಪತ್ತೆಯಾದ ನಂತರ, ಆರೋಗ್ಯ ಸೇವೆ ಕಾರ್ಯಕರ್ತರಲ್ಲಿ ಆತಂಕ ಮನೆಮಾಡಿದ್ದು ಬೂಸ್ಟರ್ ಡೋಸ್ ಗೆ ಒತ್ತಾಯಿಸುತ್ತಿದ್ದಾರಲ್ಲವೇ?
ಕೇಂದ್ರ ಸರ್ಕಾರದ ನಿರ್ಧಾರಕ್ಕೆ ನಾವು ಕಾಯುತ್ತಿದ್ದೇವೆ. ಡಿಸೆಂಬರ್ ಅಂತ್ಯದೊಳಗೆ ಎರಡೂ ಡೋಸ್ ಕೊಡುವುದು ನಮ್ಮ ಗುರಿಯಾಗಿದೆ. ಕೇಂದ್ರ ಆರೋಗ್ಯ ಸಚಿವರಿಗೆ ಬೂಸ್ಟರ್ ಡೋಸ್ ನ್ನು ಮುಂಚೂಣಿ ಕಾರ್ಯಕರ್ತರಿಗೆ ನೀಡಲು ಮುಖ್ಯಮಂತ್ರಿಗಳು ಬೇಡಿಕೆಯಿಟ್ಟುಬಂದಿದ್ದಾರೆ. ಕೇಂದ್ರದಿಂದ ಒಪ್ಪಿಗೆ ಸಿಕ್ಕಿದ ಕೂಡಲೇ ನಾವು ಸಜ್ಜಾಗುತ್ತೇವೆ. ಆರೋಗ್ಯ ಕಾರ್ಯಕರ್ತರ ಸುರಕ್ಷತೆಯೇ ನಮಗೆ ಮುಖ್ಯವಾಗಿದೆ. 

ಎಸ್-ಜೀನ್ ಪಿಸಿಆರ್ ಟೆಸ್ಟ್ ಮಾಡಿಸಿದರೆ ಓಮಿಕ್ರಾನ್ ಸೋಂಕು ಬೇಗನೆ ಗೊತ್ತಾಗುತ್ತದೆ. ಅವುಗಳನ್ನು ಖರೀದಿಸುತ್ತೇವೆಯೇ?
-ನಮಗೆ ಎಸ್-ಜೀನ್ ಪಿಸಿಆರ್ ಟೆಸ್ಟ್ ಗಳು ಅತ್ಯಗತ್ಯ ಎಂದು ತಜ್ಞರು ಹೇಳುತ್ತಾರೆ. ಕೇಂದ್ರ ಸರ್ಕಾರದ ನಿರ್ದೇಶನ ಮತ್ತು ನಿರ್ಧಾರಕ್ಕೆ ಕಾಯುತ್ತಿದ್ದೇವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com