ಒಕ್ಕಲಿಗರ ಸಂಘ ಚುನಾವಣೆ: ಮತದಾರರ ಪಟ್ಟಿ ಪ್ರಶ್ನಿಸಿದ್ದ ಮನವಿ ವಜಾಗೊಳಿಸಿದ ಹೈಕೋರ್ಟ್

ಸದಸ್ಯರ ಪಟ್ಟಿಯನ್ನು ಪರಿಷ್ಕರಿಸಬೇಕಾದರೆ ಸಾಕಷ್ಟು ಸಮಯ ಹಿಡಿಯುತ್ತದೆ ಎಂದು ಆಡಳಿತಾಧಿಕಾರಿ ಏಕಸದಸ್ಯ ಪೀಠದ ಮುಂದೆ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಒಪ್ಪಿಕೊಂಡಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಒಕ್ಕಲಿಗರ ಸಂಘದ ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಗಿಲ್ಲ ಎಂದು ರಾಜ್ಯ ಒಕ್ಕಲಿಗರ ಸಂಘಕ್ಕೆ ನಿಗದಿತ ವೇಳಾಪಟ್ಟಿಯಂತೆ ಡಿಸೆಂಬರ್ 12ರಂದು ಚುನಾವಣೆ ನಡೆಸುವಂತೆ ಏಕಸದಸ್ಯ ಪೀಠ ಆದೇಶಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ. 

ಮತದಾರರ ಪಟ್ಟಿಯನ್ನು ಸಂಘದ ಬೈಲಾದ ಪ್ರಕಾರ ತಯಾರಿಸಲಾಗಿಲ್ಲ. ಸಂಘದ ಸದಸ್ಯರ ಪಟ್ಟಿಯನ್ನು ಪರಿಷ್ಕರಿಸಲಾಗಿಲ್ಲ ಎಂದು ಆಕ್ಷೇಪಿಸಿ ಕೃಷ್ಣೇಗೌಡ ಎಂಬುವರು ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಸದಸ್ಯರ ಪಟ್ಟಿಯನ್ನು ಪರಿಷ್ಕರಿಸಬೇಕಾದರೆ ಸಾಕಷ್ಟು ಸಮಯ ಹಿಡಿಯುತ್ತದೆ ಎಂದು ಆಡಳಿತಾಧಿಕಾರಿ ಏಕಸದಸ್ಯ ಪೀಠದ ಮುಂದೆ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಒಪ್ಪಿಕೊಂಡಿದ್ದಾರೆ. 

ಕಾಲಮಿತಿಯೊಳಗೆ ನಿಯಮಗಳ ಅನುಸಾರ ಮತದಾರರ ಪಟ್ಟಿ ತಯಾರಿಸಲಾಗಿದ್ದು, ಕರಡು ಮತದಾರರ ಪಟ್ಟಿ ಹಾಗೂ ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದಾಗ ಆಕ್ಷೇಪ ಎತ್ತದ ಮೇಲ್ಮನವಿದಾರರು ಈಗ ಪ್ರಶ್ನೆ ಮಾಡುತ್ತಿದ್ದಾರೆ. ಇದು ಕಾನೂನಿನ ದೃಷ್ಟಿಯಲ್ಲಿ ಸಮರ್ಥನೀಯವಲ್ಲ.  ಸಂಘಕ್ಕೆ ಚುನಾವಣೆ ನಡೆಯಬೇಕು ಎಂದು ಇದೇ ಹೈಕೋರ್ಟ್ ಹಲವು ಬಾರಿ ನಿರ್ದೇಶನ ನೀಡಿದೆ.

ಅಲ್ಲದೇ ಚುನಾವಣಾ ಫಲಿತಾಂಶವು ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಏಕಸದಸ್ಯ ಪೀಠ ಸ್ಪಷ್ಟಪಡಿಸಿದೆ. ಹೀಗಾಗಿ, ಮಧ್ಯಪ್ರವೇಶಿಸುವ ಅವಶ್ಯಕತೆ ಕಂಡು ಬರುತ್ತಿಲ್ಲ ಎಂದು ಹೇಳಿದ ಪೀಠವು ಅರ್ಜಿಯನ್ನು ವಜಾಗೊಳಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com