ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರದಿಂದ ಚಳಿಗಾಲದ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು. ಈ ಬಾರಿ ಕಿತ್ತೂರ ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ.
ಸದಾ ತಂಗಾಳಿ ಬೀಸುವ ಎತ್ತರದ ಗುಡ್ಡದಲ್ಲಿ ಭವ್ಯವಾದ ಸುವರ್ಣ ವಿಧಾನಸೌಧ ನಿರ್ಮಾಣವಾಗಿದೆ. ಉತ್ತರ ಕರ್ನಾಟಕ ಭಾಗದ ಜನತೆಯ ಆಶೋತ್ತರಗಳಿಗೆ ದನಿಯಾಗಬೇಕೆಂದೇ ಇದರ ನಿರ್ಮಾಣವಾಗಿದೆ. ಕೋವಿಡ್ ಸೇರಿದಂತೆ ಇತರ ಕಾರಣಗಳಿಂದಾಗಿ ಕಳೆದ ಮೂರು ವರ್ಷಗಳಿಂದ ಇಲ್ಲಿ ವಿಧಾನ ಮಂಡಲ ಅಧಿವೇಶನ ನಡೆದಿರಲಿಲ್ಲ.
ಈ ಬಾರಿಯೂ ಇಲ್ಲಿ ಅಧಿವೇಶನ ನಡೆಯುವುದು ಅನುಮಾನವಾಗಿತ್ತು. ಸಾಕಷ್ಟು ಮಂದಿ ಓಮಿಕ್ರಾನ್ ಆತಂಕದ ನಡುವೆ ಮಹಾರಾಷ್ಟ್ರ ಗಡಿಭಾಗದಲ್ಲಿರುವ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ವಿರೋಧ ವ್ಯಕ್ತಪಡಿಸಿದ್ದರು. ಆದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ದೃಢ ಸಂಕಲ್ಪದಿಂದಾಗಿ ವಿಧಾನಮಂಡಲ ಅಧಿವೇಶನ ಆರಂಭವಾಗಿದೆ.
ಇಂದು ಬೆಳಗ್ಗೆ ಸುವರ್ಣ ವಿಧಾನಸೌಧವನ್ನು ಪಶ್ಚಿಮ ದ್ವಾರದಿಂದ ಪ್ರವೇಶಿಸಿದ ಬಸವರಾಜ ಬೊಮ್ಮಾಯಿ ಅವರು ಕಿತ್ತೂರ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರ ಮುಂದೆ ಗಕ್ಕನೆ ನಿಂತರು. ಒಂದಷ್ಟು ಹೊತ್ತು ಅವರ ಮುಂದೆಯೇ ನಿಂತರು. ನಂತರ ಉತ್ತಮವಾಗಿ ಇವರಿಬ್ಬರ ಕಲಾಕೃತಿಗಳನ್ನು ನಿರ್ಮಿಸಿರುವುದನ್ನು ಪ್ರಶಂಸಿಸಿದರು.
ಪಶ್ಚಿಮ ದ್ವಾರದಿಂದ ಪ್ರವೇಶಿಸುವ ಎಲ್ಲರ ಆಕರ್ಷಣೆ ಕೇಂದ್ರಬಿಂದು ಈ ಇಬ್ಬರು ಸ್ವಾತಂತ್ರ ಸಂಗ್ರಾಮಿಗಳೇ ಆಗಿದ್ದಾರೆ. ಅನೇಕರು ಇವರ ಕಲಾಕೃತಿಗಳ ಮುಂದೆ ನಿಂತು ಪೋಟೋ ತೆಗೆಸಿಕೊಳ್ಳುವುದು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದನ್ನು ಮಾಡುತ್ತಿದ್ದಾರೆ. ಒಂದೇ ದಿನದಲ್ಲಿ ಈ ಕಲಾಕೃತಿಗಳ ಸುಂದರತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
Advertisement