ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರ: ಜೆಡಿಎಸ್‌ನ ಮಂಜೇಗೌಡಗೆ ಗೆಲುವು, ಕೂದಲೆಳೆ ಅಂತರದಲ್ಲಿ ಬಿಜೆಪಿಗೆ ಸೋಲು

ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಲ್ಲಿ ಜೆಡಿಎಸ್‌ನ ಸಿ.ಎನ್‌.ಮಂಜೇಗೌಡ ಗೆಲುವು ಸಾಧಿಸಿದ್ದು, ಕೆಲವೇ ಮತಗಳ ಅಂತರದಲ್ಲಿ ಬಿಜೆಪಿಯ ರಘು ಅವರ ವಿರುದ್ಧ ಜಯಗಳಿಸಿದ್ದಾರೆ.
ಗೆಲುವಿನ ಸಂಭ್ರಮದಲ್ಲಿ ಜೆಡಿಎಸ್ ನ ಮಂಜೇಗೌಡ
ಗೆಲುವಿನ ಸಂಭ್ರಮದಲ್ಲಿ ಜೆಡಿಎಸ್ ನ ಮಂಜೇಗೌಡ
Updated on

ಮೈಸೂರು: ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಲ್ಲಿ ಜೆಡಿಎಸ್‌ನ ಸಿ.ಎನ್‌.ಮಂಜೇಗೌಡ ಗೆಲುವು ಸಾಧಿಸಿದ್ದು, ಕೆಲವೇ ಮತಗಳ ಅಂತರದಲ್ಲಿ ಬಿಜೆಪಿಯ ರಘು ಅವರ ವಿರುದ್ಧ ಜಯಗಳಿಸಿದ್ದಾರೆ.

ಮೊದಲ ಪ್ರಾಶಸ್ತ್ಯ ಮತ ಎಣಿಕೆಯಲ್ಲಿ ಬಿಜೆಪಿಯ ರಘು 1,919 ಮತಗಳೊಂದಿಗೆ ಮುನ್ನಡೆ ಹೊಂದಿದ್ದರು. ಮಂಜೇಗೌಡ 1,780 ಮತ ಪಡೆದಿದ್ದರು. ಆದರೆ, ದ್ವಿತೀಯ ಪ್ರಾಶಸ್ತ್ಯದ ಮತಗಳ ವಿಂಗಡಣೆಯಲ್ಲಿ ಉಭಯ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೊನೆಯಲ್ಲಿ ಮಂಜೇಗೌಡ ಗೆಲುವಿನ ಕೋಟಾ ದಾಟಿ ಮೇಲುಗೈ ಸಾಧಿಸಿದರು.  ಗೆಲುವಿಗಾಗಿ 2,186 ಮತಗಳ ಕೋಟಾ ನಿಗದಿಪಡಿಸಲಾಗಿತ್ತು. ಡಾ.ತಿಮ್ಮಯ್ಯ ಅವರು 2,865  ಮತ ಪಡೆದು ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲುವು ಸಾಧಿಸಿದರು. 

ಬಂಡಾಯದ ನಡುವೆಯೇ ಜೆಡಿಎಸ್ ಗೆಲುವು
ಇನ್ನು ಅತೃಪ್ತ ಚಾಮುಂಡೇಶ್ವರಿ ಶಾಸಕ ಜಿ ಟಿ ದೇವೇಗೌಡ ಮತ್ತು ಹಾಲಿ ಎಂಎಲ್‌ಸಿ ಸಂದೇಶ್ ನಾಗರಾಜ್ ಜೆಡಿಎಸ್ ವಿರುದ್ಧ ಬಂಡಾಯವೆದ್ದರೂ ಹಾಲಿ ಚುನಾವಣೆಯಲ್ಲಿ ಪಕ್ಷವು ಜಯಗಳಿಸುವಲ್ಲಿ ಯಶಸ್ವಿಯಾಗಿದೆ. ಅತ್ತ ಗೆಲುವಿನ ಸುಳಿವು ಸಿಗುತ್ತಿದ್ದಂತೆ ಮತ ಎಣಿಕೆ ಕೇಂದ್ರಕ್ಕೆ ಬಂದ ಶಾಸಕ ಸಾ.ರಾ.ಮಹೇಶ್‌, ಶಾಸಕ ಜಿ.ಟಿ.ದೇವೇಗೌಡ ಹಾಗೂ ವಿಧಾನ ಪರಿಷತ್‌ ಸದಸ್ಯ ಸಂದೇಶ್‌ ನಾಗರಾಜ್‌ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಚುನಾವಣೆ ಗೆಲುವಿಗಾಗಿ ಜೆಡಿಎಸ್‌ ಪಕ್ಷದ ಈ ಇಬ್ಬರನ್ನು ಬಳಸಿಕೊಂಡ ಕಾಂಗ್ರೆಸ್‌ ಹಾಗೂ ಬಿಜೆಪಿ ವಿರುದ್ಧವೂ ಹರಿಹಾಯ್ದರು.

ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಆವರಣದಲ್ಲಿ ಜೆಡಿಎಸ್‌ ಪಕ್ಷದ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ.

ಮರು ಮತಎಣಿಕೆಗೆ ಚುನಾವಣಾಧಿಕಾರಿ ನಕಾರಾ
ಇನ್ನು ಮರು ಮತಎಣಿಕೆ ಮಾಡುವಂತೆ ಬಿಜೆಪಿ ಅಭ್ಯರ್ಥಿ ರಘು ಒತ್ತಾಯಿಸಿದರು. ಆದರೆ ಚುನಾವಣಾಧಿಕಾರಿ ಬಗಾದಿ ಗೌತಮ್ ಅದನ್ನು ತಿರಸ್ಕರಿಸಿದರು. 'ಎಣಿಕೆ ಪ್ರಕ್ರಿಯೆ ಬಹುತೇಕ ಮುಕ್ತಾಯಗೊಂಡಿದ್ದು, ಗೆಲ್ಲುವ ಅಭ್ಯರ್ಥಿ ಕೋಟಾ ತಲುಪಬೇಕು ಎಂಬ ಕಾರಣದಿಂದ ಎಲಿಮಿನೇಷನ್ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಹೇಳಿದರು. 

ಮುಖಂಡರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ: ರಘು
ಇನ್ನು ಚುನಾವಣೆಯಲ್ಲಿನ ಸೋಲಿನ ಕುರಿತು ಮಾತನಾಡಿದ ಬಿಜೆಪಿ ಅಭ್ಯರ್ಥಿ ರಘು, ಚುನಾವಣೆಯಲ್ಲಿ ಶ್ರಮಿಸಿದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಸೋಲಿಗೆ ನಾನೇ ಹೊಣೆಯಾಗುತ್ತೇನೆ. ಯಡಿಯೂರಪ್ಪ ಮತ್ತು ಇತರರು ತಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ ಮತ್ತು ಚುನಾವಣೆಯನ್ನು ಎದುರಿಸಲು ಎಲ್ಲಾ ಬೆಂಬಲವನ್ನು ನೀಡಿದ್ದಾರೆ. ಸೋಲಿನ ಕುರಿತು ಪಕ್ಷದ ನಾಯಕರೊಂದಿಗೆ ಸಮಾಲೋಚಿಸಿದ ನಂತರ ಕಾನೂನು ಮತ್ತು ರಾಜಕೀಯ ಹೋರಾಟವನ್ನು ನಿರ್ಧರಿಸಲಾಗುವುದು ಎಂದು ಹೇಳಿದರು. 

'ಗೆಲುವಿನ ಕನಸು ಕಂಡಿರಲಿಲ್ಲ': ಮಂಜೇಗೌಡ
ಮಂಜೇಗೌಡ ಅವರು ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಯೋಚಿಸಿರಲಿಲ್ಲ. ಆದರೆ ಹೆಚ್.ಡಿ.ದೇವೇಗೌಡ ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರ ಆಶೀರ್ವಾದದಿಂದ ಗೆಲುವು ದಕ್ಕಿದೆ. ವಿಜಯಿಯಾಗಲು ಕಾರಣವಾದ ತಂತ್ರವನ್ನು ರೂಪಿಸಿದ ಶಾಸಕ ಸಾ.ರಾ.ಮಹೇಶ್ ಅವರಿಗೆ ಸಂಪೂರ್ಣ ಕ್ರೆಡಿಟ್ ನೀಡುತ್ತೇನೆ. ಜಿ.ಟಿ.ದೇವೇಗೌಡ ಮತ್ತು ಸಂದೇಶ್ ಅವರಿಗೆ ನಾನು ಶುಭ ಹಾರೈಸುತ್ತೇನೆ ಎಂದು ಮಂಜೇಗೌಡ ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com