'ನಿಮ್ಮ ಹೆಸರು, ಊರು, ಜಾತಿ ಹೇಳಿ': ಸ್ವ ಕ್ಷೇತ್ರದಲ್ಲಿ ಬಲವಂತ ಮತಾಂತರ ಬಗ್ಗೆ ವರದಿ ನೀಡಲು ಸ್ವತಃ ಸಮೀಕ್ಷೆಗಿಳಿದ ಶಾಸಕ ಗೂಳಿಹಟ್ಟಿ ಶೇಖರ್!

ಹೊಸದುರ್ಗ ಚರ್ಚ್ ನಲ್ಲಿ ನಿನ್ನೆ ಭಾನುವಾರ ಕ್ರೈಸ್ತ ಧರ್ಮೀಯರು ಸಾಮೂಹಿಕ ಪ್ರಾರ್ಥನೆ ಮುಗಿಸಿಕೊಂಡು ಬರುವ ವೇಳೆ ವಿಚಿತ್ರ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ ಶೇಖರ್ ಮತ್ತು ಅವರ ಬೆಂಬಲಿಗರು ಚರ್ಚ್ ನ ಗೇಟ್ ಮುಂದೆ ನಿಂತು ಚರ್ಚ್ ನಲ್ಲಿ ಪ್ರಾರ್ಥನೆ ಮುಗಿಸಿಕೊಂಡು ಬರುವವರೆಲ್ಲರಲ್ಲಿಯೂ ಅವರ ಹೆಸರೇನು, ಎಲ್ಲಿಂದ ಬಂದಿದ್ದಾರೆ, ಅವರ ಜ
ಶಾಸಕ ಗೂಳಿಹಟ್ಟಿ ಶೇಖರ್
ಶಾಸಕ ಗೂಳಿಹಟ್ಟಿ ಶೇಖರ್

ಚಿತ್ರದುರ್ಗ: ಹೊಸದುರ್ಗ ಚರ್ಚ್ ನಲ್ಲಿ ನಿನ್ನೆ ಭಾನುವಾರ ಕ್ರೈಸ್ತ ಧರ್ಮೀಯರು ಸಾಮೂಹಿಕ ಪ್ರಾರ್ಥನೆ ಮುಗಿಸಿಕೊಂಡು ಬರುವ ವೇಳೆ ವಿಚಿತ್ರ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ ಶೇಖರ್ ಮತ್ತು ಅವರ ಬೆಂಬಲಿಗರು ಚರ್ಚ್ ನ ಗೇಟ್ ಮುಂದೆ ನಿಂತು ಚರ್ಚ್ ನಲ್ಲಿ ಪ್ರಾರ್ಥನೆ ಮುಗಿಸಿಕೊಂಡು ಬರುವವರೆಲ್ಲರಲ್ಲಿಯೂ ಅವರ ಹೆಸರೇನು, ಎಲ್ಲಿಂದ ಬಂದಿದ್ದಾರೆ, ಅವರ ಜಾತಿ ಯಾವುದು, ಮತಾಂತರವಾದವರೇ ಎಂದು ಕೇಳುತ್ತಿದ್ದರು.

ತಮ್ಮ ಕ್ಷೇತ್ರದಲ್ಲಿ ಮತಾಂತರ ನಡೆಯುತ್ತಿದೆ ಎಂಬುದನ್ನು ಸಾಬೀತುಪಡಿಸಲು ಹೊರಟಿರುವ ಶಾಸಕ ಗೂಳಿಹಟ್ಟಿ ಶೇಖರ್ ಹೊಸದುರ್ಗದ ತಹಶಿಲ್ದಾರ್ ವೈ ತಿಪ್ಪೇಸ್ವಾಮಿ ಈ ಹಿಂದೆ ಸಲ್ಲಿಸಿದ್ದ ವರದಿಯಿಂದ ತೃಪ್ತರಾಗಿಲ್ಲ, ಹೊಸದುರ್ಗ ತಾಲ್ಲೂಕಿನಲ್ಲಿ ಬಲವಂತದ ಮತಾಂತರ ನಡೆಯುತ್ತಿಲ್ಲ ಎಂದು ತಹಶಿಲ್ದಾರ್ ವರದಿ ನೀಡಿದ್ದರು. ಆದರೆ ಶಾಸಕ ಗೂಳಿಹಟ್ಟಿ ಶೇಖರ್ ಅದನ್ನು ಒಪ್ಪಲು ಸಿದ್ದರಿಲ್ಲ.

ಹೀಗಾಗಿ ತಾವೇ ಸ್ವತಃ ಕ್ಷೇತ್ರದಲ್ಲಿ ಸಂಚರಿಸಿ ಜನರಲ್ಲಿ ಮಾತನಾಡಿ ಜನರೊಂದಿಗೆ ಮಾತನಾಡುವುದನ್ನು ವಿಡಿಯೊ ಮಾಡಿ ವರದಿ ತಯಾರಿಸಲು ಮುಂದಾಗಿದ್ದಾರೆ.

ನಿನ್ನೆ ಶಾಸಕರು ಜನರಲ್ಲಿ ಮಾತನಾಡಿಸಿದಾಗ ಕೆಲವರು ತಾವು ಏಳೆಂಟು ವರ್ಷಗಳಿಂದ ಚರ್ಚ್ ಗೆ ಬರುತ್ತಿರುವುದಾಗಿ ಹೇಳಿದ್ದು, ಮಹಿಳೆಯೊಬ್ಬರು ತಾವು ಕೋವಿಡ್ ಸಾಂಕ್ರಾಮಿಕ ಬಂದ ನಂತರ ಚರ್ಚಿಗೆ ಬರುತ್ತಿರುವುದಾಗಿ ಹೇಳಿದ್ದಾರೆ. ಇನ್ನು ಕೆಲವರು ಶಾಸಕರಿಗೆ ಉತ್ತರ ನೀಡುವುದಕ್ಕೆ ಒಪ್ಪಿಕೊಂಡಿಲ್ಲ.

ದೇವಾಪುರ ಬೊವಿಹಟ್ಟಿಯ ದಂಪತಿಯೊಬ್ಬರು ಬೋವಿ ಜನಾಂಗಕ್ಕೆ ಸೇರಿದವರಾಗಿದ್ದು ಶಾಸಕರ ಬಳಿ ಮಾತನಾಡಲು ಹೆದರಿ ಏನೂ ಹೇಳದೆ ತಪ್ಪಿಸಿಕೊಂಡು ಹೋದರು. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಗೂಳಿಹಟ್ಟಿ ಶೇಖರ್, ಬಿಜೆಪಿ ಸರ್ಕಾರವಿದ್ದರೂ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಮತಾಂತರದ ಬಗ್ಗೆ ತಹಶಿಲ್ದಾರ್ ಅವರು ನೀಡಿದ ವರದಿ ಸರಿಯಿಲ್ಲ ಎಂದು ಆರೋಪಿಸಿದರು.

ಕಳೆದ ಸೆಪ್ಟೆಂಬರ್ ನಲ್ಲಿ ಸದನ ಕಲಾಪ ವೇಳೆ ಗೂಳಿಹಟ್ಟಿ ಶೇಖರ್ ತಮ್ಮ ತಾಯಿ ಸೇರಿದಂತೆ ಕ್ಷೇತ್ರದಲ್ಲಿ ಹಲವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದು ಸುದ್ದಿಯಾಗಿತ್ತು. ಈ ಬಗ್ಗೆ ತನಿಖೆ ನಡೆಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದರು. 

ಹೊಸದುರ್ಗ ತಹಶೀಲ್ದಾರ್ ಅವರು ಶಾಂತಿನಗರ ಹಾಗೂ ದೇವಾಪುರ ಭೋವಿಹಟ್ಟಿ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿ ಡಿ.1ರಂದು ವರದಿ ಸಲ್ಲಿಸಿದ್ದು, ಯಾವುದೇ ಬಲವಂತದ ಮತಾಂತರ ನಡೆದಿಲ್ಲ ಎಂದು ಕ್ಲೀನ್ ಚಿಟ್ ನೀಡಿದ್ದರು.

ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯದ ಜನರನ್ನು ಬಲವಂತವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲಾಗುತ್ತಿದೆ ಎಂಬ ಶಾಸಕ ಗೂಳಿ ಹಟ್ಟಿ ಶೇಖರ್ ಆರೋಪಕ್ಕೆ ವರದಿ ವ್ಯತಿರಿಕ್ತವಾಗಿತ್ತು. ತಾಲೂಕಿನ ಎರಡು ಗ್ರಾಮಗಳಲ್ಲಿ 46 ಕುಟುಂಬಗಳು ತಾವಾಗಿಯೇ ಕ್ರೈಸ್ತ ಧರ್ಮ ಸ್ವೀಕರಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿತ್ತು. ತಹಶಿಲ್ದಾರ್ ತಿಪ್ಪೇಸ್ವಾಮಿ ಅವರನ್ನು ಕಳೆದ ವಾರ ವರ್ಗಾವಣೆ ಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com