ಹೊಸದುರ್ಗ ತಾಲ್ಲೂಕಿನಲ್ಲಿ ಬಲವಂತದ ಮತಾಂತರ: ಶಾಸಕ ಗೂಳಿಹಟ್ಟಿ ಶೇಖರ್ ಆರೋಪ; ಆದರೆ ಸಮೀಕ್ಷೆಯಲ್ಲಿ ಕಂಡುಬಂದಿದ್ದೇ ಬೇರೆ!

ಇತ್ತೀಚೆಗೆ ವಿಧಾನಸೌಧ ಕಲಾಪ ವೇಳೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ತಮ್ಮ ಕ್ಷೇತ್ರದಲ್ಲಿ ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಕೆಲಸ ನಡೆಯುತ್ತಿದೆ, ತಮ್ಮ ತಾಯಿಯೇ ಬಲವಂತ ಮತಾಂತರಕ್ಕೆ ಒಳಗಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶಿವಮೊಗ್ಗ: ಇತ್ತೀಚೆಗೆ ವಿಧಾನಸೌಧ ಕಲಾಪ ವೇಳೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ತಮ್ಮ ಕ್ಷೇತ್ರದಲ್ಲಿ ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಕೆಲಸ ನಡೆಯುತ್ತಿದೆ, ತಮ್ಮ ತಾಯಿಯೇ ಬಲವಂತ ಮತಾಂತರಕ್ಕೆ ಒಳಗಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆದರೆ ಹೊಸದುರ್ಗ ತಹಶಿಲ್ದಾರ್ ಅವರು ನಡೆಸಿರುವ ಅಧಿಕೃತ ಸಮೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಎರಡು ಗ್ರಾಮಗಳಲ್ಲಿ 46 ಕುಟುಂಬಗಳು ತಮ್ಮ ಸ್ವಇಚ್ಛೆಯಿಂದ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ.

ತಮ್ಮನ್ನು ಯಾರೂ ಬಲವಂತ ಮಾಡಿಲ್ಲ, ತಾವೇ ಸ್ವ ಇಚ್ಛೆಯಿಂದ ಕ್ರೈಸ್ತ ಧರ್ಮವನ್ನು ಸ್ವೀಕರಿಸಿರುವುದಾಗಿ ಕುಟುಂಬ ಸದಸ್ಯರು ಹೇಳಿದ್ದಾರೆ. 

ತಮ್ಮ ಕ್ಷೇತ್ರದಲ್ಲಿ ಬಲವಂತ ಮತಾಂತರ ವ್ಯಾಪಕವಾಗಿ ನಡೆಯುತ್ತಿದೆ ಎಂದು ಗೂಳಿಹಟ್ಟಿ ಶೇಖರ್ ಸದನ ಕಲಾಪ ವೇಳೆ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಹೊಸದುರ್ಗ ತಾಲ್ಲೂಕು ಆಡಳಿತ ಸಮೀಕ್ಷೆ ನಡೆಸಿತ್ತು. ತಹಶಿಲ್ದಾರ್ ವೈ ತಿಪ್ಪೇಸ್ವಾಮಿ ಅವರ ತಂಡ ಸಮೀಕ್ಷೆ ನಡೆಸಿದಾಗ ಕ್ರೈಸ್ತ ಧರ್ಮವನ್ನು ಖುಷಿಯಿಂದ ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ತಿಪ್ಪೇಸ್ವಾಮಿ, ಶ್ರೀರಾಂಪುರ ಹೋಬಳಿಯ ಮಾರುತಿ ನಗರಕ್ಕೆ ತಾವು ಭೇಟಿ ನೀಡಿದ್ದ ಸಂದರ್ಭದಲ್ಲಿ ಮತ್ತು ದೇವಾಪುರ ಹೋಬಳಿಯ ಮತ್ತೊಂದು ಗ್ರಾಮಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಜೊತೆ ಕೆಲ ವಾರಗಳ ಹಿಂದೆ ಭೇಟಿಯಾಗಿದ್ದೆ. ಆಗ ಗ್ರಾಮಸ್ಥರ ತಮಗೆ ಯಾರೂ ಬಲವಂತ ಮಾಡಿಲ್ಲ, ಕ್ರೈಸ್ತ ಧರ್ಮಕ್ಕೆ ಮತಾಂತರವಾದ ಮೇಲೆ ತಮಗೆ ಮಾನಸಿಕ ನೆಮ್ಮದಿ ಸಿಕ್ಕಿದೆ. ತಮ್ಮನ್ನು ಯಾರೂ ಬಲವಂತ ಮಾಡಿ ಮತಾಂತರ ಮಾಡಿಲ್ಲ ಎಂದಿದ್ದಾರೆ ಎಂದರು.

ಮಾರುತಿ ನಗರದಲ್ಲಿ 34 ಕುಟುಂಬಗಳ ಜೊತೆ ದೇವಾಪುರ ಗ್ರಾಮದಲ್ಲಿ 12 ಗ್ರಾಮಗಳ ಜನರ ಜೊತೆ ನಾವು ಮಾತನಾಡಿದ್ದೇವೆ. ಕೆಲವು ಕುಟುಂಬದವರನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ ಎಂದು ಗ್ರಾಮಸ್ಥರು ಹೇಳಿದರೆ ಕುಟುಂಬಸ್ಥರು ಇಲ್ಲ ನಾವೇ ಸ್ವ ಇಚ್ಛೆಯಿಂದ ಮತಾಂತರವಾಗಿದ್ದೇವೆ ಎಂದು ಹೇಳಿದರು ಎನ್ನುತ್ತಾರೆ ತಿಪ್ಪೇಸ್ವಾಮಿ.

ಸದನದಲ್ಲಿ ತಮ್ಮ ತಾಯಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂದು ಹೇಳಿದ್ದ ಗೂಳಿಹಟ್ಟಿ ಶೇಖರ್ ನಂತರ ತಮ್ಮ ತಾಯಿ ಮತ್ತು 9 ಮಂದಿ ಇತರ ಗ್ರಾಮಸ್ಥರು ಹಿಂದೂ ಧರ್ಮಕ್ಕೆ ಮರಳಿದ್ದಾರೆ ಎಂದಿದ್ದರು. ಈ ಮಧ್ಯೆ ಬೆಳಗಾವಿ ಅಧಿವೇಶನದಲ್ಲಿ ಬಲವಂತ ಮತಾಂತರ ಮಸೂದೆಯನ್ನು ಮಂಡಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com