ಬೆಳಗಾವಿ: ತೀವ್ರ ಕುತೂಹಲ ಕೆರಳಿಸಿರುವ ವಿವಾದಾತ್ಮಕ ಮತಾಂತರ ನಿಷೇಧ ಮಸೂದೆ ಗುರುವಾರ ಬೆಳಗ್ಗೆ ವಿಧಾನಸಭೆಯಲ್ಲಿ ಚರ್ಚೆಗೆ ಬರಲಿದೆ.
ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯಿದೆ-2021 ವಿಧೇಯಕವನ್ನು ನಿನ್ನೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವಿಧಾನಸಭೆಯಲ್ಲಿ ಮಂಡಿಸಿದ್ದರು. ಈ ಮಸೂದೆ ಪ್ರಸ್ತಾಪಕ್ಕೆ ಕಾಂಗ್ರೆಸ್ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ, ಕದ್ದುಮುಚ್ಚಿ ಏಕೆ ಮಂಡಿಸುತ್ತಿದ್ದೀರಿ ಎಂದು ಘೋಷಣೆ ಕೂಗಿ ಸಭಾತ್ಯಾಗ ಮಾಡಿದ್ದರು.
ಇವತ್ತು ಮಧ್ಯಾಹ್ನದ ಭೋಜನ ವಿರಾಮದ ನಂತರ ಸಭೆ ಸೇರಿದಾಗ ಸಾಯಂಕಾಲ 5 ರಿಂದ 6 ರವರೆಗೆ ಮತಾಂತರ ನಿಷೇಧದ ಬಿಲ್ ಅನ್ನು ಚರ್ಚೆ ಮಾಡೋಣ ಎಂದು ಸಭಾಧ್ಯಕ್ಷರು ಹೇಳಿದರು. ಈ ವೇಳೆ ಕಾನೂನು ಸಚಿವ ಮಾಧುಸ್ವಾಮಿ, ಮತಾಂತರ ನಿಷೇಧ ಮಸೂದೆಯನ್ನು ನಾಳೆ ಮಧ್ಯಾಹ್ನದ ಒಳಗೆ ವಿಧಾನ ಪರಿಷತ್ ಗೆ ಕಳುಹಿಸಿಕೊಡಬೇಕಾಗಿದೆ ಎಂದು ಹೇಳಿದರು.
ಬಳಿಕ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿಜೆಪಿ ಪಕ್ಷದವರು ಹಠ ಬಿಡಲ್ಲ. ಹೀಗಾಗಿ ನಾಳೆ ಬೆಳಗ್ಗೆ ಮತಾಂತರ ನಿಷೇಧ ಮಸೂದೆಯನ್ನು ಚರ್ಚೆಗೆ ತೆಗೆದುಕೊಳ್ಳೋಣ ಹಾಗೂ ನಾಳೆಯ ಪ್ರಶ್ನೋತ್ತರ ಅವಧಿಯನ್ನು ಮುಂದೂಡಲು ಎಲ್ಲ ಸದಸ್ಯರ ಒಪ್ಪಿಗೆ ಇದೆ ಎಂದರು.
ಬಳಿಕ ಮಾತನಾಡಿದ ಸಭಾಪತಿ ಕಾಗೇರಿ, ನಾಳೆ ಬೆಳಗ್ಗೆ 10 ಗಂಟೆಗೆ ಸದನ ಸಭೆ ಸೇರಬೇಕು. ಮೊದಲಿಗೆ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯಿದೆ-2021 ವಿಧೇಯಕದ ಬಗ್ಗೆ ಚರ್ಚೆ ಮಾಡೋಣ. ಮಧ್ಯಾಹ್ನ 2:30ರಿಂದ 5 ರವರೆಗೆ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ನಿಯಮಾವಳಿ 69ರಡಿ ಚರ್ಚೆ ಹಾಗೂ ಸಂಜೆ 5 ರಿಂದ ಪ್ರಶ್ನೋತ್ತರವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
Advertisement