ಮತಾಂತರ ಕಾಯ್ದೆ ಚರ್ಚೆ: ಸಿದ್ದರಾಮಯ್ಯ, ಮಾಧುಸ್ವಾಮಿ ನಡುವೆ ವಾಗ್ವಾದ; ಆಗ ಅನುಮೋದನೆ ಈಗ ವಿರೋಧ ಸರಿಯಲ್ಲ ಎಂದ ಯಡಿಯೂರಪ್ಪ

ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಇಂದು ಗುರುವಾರ ಮತಾಂತರ ನಿಷೇಧ ಕಾಯ್ದೆ(Anti conversion bill) ಮೇಲಿನ ಚರ್ಚೆ ಕಾವೇರಿದೆ. 
ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ
ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ

ಬೆಳಗಾವಿ: ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಇಂದು ಗುರುವಾರ ಮತಾಂತರ ನಿಷೇಧ ಕಾಯ್ದೆ(Anti conversion bill) ಮೇಲಿನ ಚರ್ಚೆ ಕಾವೇರಿದೆ. 

ಕಾನೂನು ಸಚಿವ ಮಾಧುಸ್ವಾಮಿ ಕಾಂಗ್ರೆಸ್ ಅವಧಿಯಲ್ಲಿ ಈ ಮಸೂದೆ ಇನಿಷಿಯೇಟ್ ಆಗಿತ್ತು ಎಂದು ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಸ್ಕೂಟನಿ ಕಮಿಷನ್ ಗೆ ಕಾನೂನು ಸಚಿವರು ಅಧ್ಯಕ್ಷರು ಆಗಿರುತ್ತಾರೆ. ಕಾನೂನು ಸಚಿವರು ಸ್ಕೂಟನಿ ಮಾಡಿ, ಶಾಸಕಾಂಗಕ್ಕೆ ಹೋಗಿ, ಅದು ಡ್ರಾಫ್ಟ್ ಆಗಿ, ನಂತರ ಮುಖ್ಯಮಂತ್ರಿ ಹತ್ತಿರ ಬಂದು, ಆಮೇಲೆ ಕ್ಯಾಬಿನೆಟ್ ಗೆ ಹೋಗುತ್ತದೆ. ಅಂದಿನ ಸರ್ಕಾರದಲ್ಲಿ ಜಯಚಂದ್ರ ಅವರು ಕಾನೂನು ಸಚಿವರಾಗಿದ್ದರು. ಅವರಿಗೆ ಫೋನ್ ಮಾಡ್ದೆ, ನಮ್ಮ ಕಾಲದಲ್ಲಿ ಅದು ಇನಿಷಿಯೇಟ್ ಆಗಿಲ್ಲ ಅಂತಾ ಹೇಳಿದರು. ವಿಷಯವನ್ನು ಪರಿಶೀಲನೆ ಮಾಡಿ ಅಂತಾ ಹೇಳಿದರೆ ಇನಿಷಿಯೇಷನ್ ಆಗಲ್ಲ. ಅದಕ್ಕೆ ಒಪ್ಪಿಗೆ ಕೊಟ್ಟರೆ ಮಾತ್ರ ಇನಿಷೇಷಯೇಷನ್ ಆಗುತ್ತೆ ಎಂದು ಸಿದ್ದರಾಮಯ್ಯ ಇಂದು ಸದನದಲ್ಲಿ ವಿವರಿಸಿದರು.

ಉತ್ತರಪ್ರದೇಶ, ಗುಜರಾತ್, ಮಧ್ಯಪ್ರದೇಶ ಮತ್ತು ಕರ್ನಾಟಕ ರಾಜ್ಯಗಳ ಮತಾಂತರ ಮಸೂದೆಯ ಡ್ರಾಫ್ಟ್ ತಯಾರಿ ಮಾಡಿದ್ದು ಒಬ್ಬರೇ. ಒಂದು ರೀತಿಯಲ್ಲಿ ಇದು ಕಟ್ & ಪೇಸ್ಟ್ ಎಂದು ಆರೋಪಿಸಿದರು. ಮಸೂದೆಯ ಸೆಕ್ಷನ್ 3 ವಿವಾಹದ ನಿಬಂಧನೆಗಳನ್ನು ಹೇರಿದೆ. ಇದನ್ನು ಗುಜರಾತ್ ಹೈಕೋರ್ಟ್ ಪ್ರಶ್ನಿಸಿ ಗುಜರಾತ್ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಆ ಸೆಕ್ಷನ್ ತಡೆ ಹಿಡಿದಿದೆ. ಆದರೆ ಆ ಸೆಕ್ಷನ್ ನಮ್ಮ ಮಸೂದೆಯಲ್ಲಿ ಯಥಾವತ್ ಇದೆ ಎಂದರು.

ಕಾನೂನು ಆಯೋಗದ ಡ್ರಾಫ್ಟ್ನಲ್ಲೂ ಇದು ಇರಲಿಲ್ಲ. ಸೆಕ್ಷನ್ 5 ಮತ್ತು 12 ಕೂಡ ಯುಪಿ ಮಸೂದೆಯ ನಕಲುಗಳೇ ಆಗಿವೆ. ಕಾನೂನು ಆಯೋಗದ ಡ್ರಾಫ್ಟ್ಗೆ ಇವೆಲ್ಲ ವಿರುದ್ಧವಾಗಿವೆ. ಬಲವಂತದ, ಆಮಿಷದ ಮತಾಂತರ ತಪ್ಪು ಎಂದು ಸಂವಿಧಾನವೇ ಹೇಳಿದೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ ಕೂಡ ಇದನ್ನು ಅಪರಾಧ ಎಂದು ಹೇಳುತ್ತದೆ. ಹೀಗಿರುವಾಗ ಮತಾಂತರ ತಡೆಗೆ ಪ್ರತ್ಯೇಕ ಕಾಯಿದೆ ಅಗತ್ಯವಿತ್ತೆ? ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ  ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು,  ಕಾನೂನು ಸಚಿವರು ಕೊಟ್ಟ ದಾಖಲೆಯ ಕೊನೆಯ ಎರಡು ಸಾಲುಗಳನ್ನು ಸದನದಲ್ಲಿ ಓದಿದರು. “16/11/2011ರಂದು ಮಧ್ಯಾಹ್ನ 4 ಗಂಟೆಗೆ ಪರಿಶೀಲನಾ ಸಮಿತಿ ಸಭೆ ಕರೆಯುವಂತೆ ಮಾನ್ಯ ಸಚಿವರಿಂದ ಆದೇಶಿತನಾಗಿದ್ದೇನೆ. ಚರ್ಚಿಸಿ ವಿಧೇಯಕ ಅನುಮೋದಿಸಿದೆ ಅಂತಾ ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಸಣ್ಣ ನೀರಾವರಿಗಳ ಸಚಿವ ಟಿ.ಬಿ.ಜಯಚಂದ್ರ ಅವರು ಸಹಿ ಹಾಕಿದ್ದಾರೆ” ಎಂದು ಸಭಾಧ್ಯಕ್ಷ ಕಾಗೇರಿ ಓದಿ ಹೇಳಿದರು.

ಆಗಿನ ಕಾಂಗ್ರೆಸ್ ಸರ್ಕಾರದಲ್ಲಿ ಕರಡು ಅನುಮೋದನೆಗೊಂಡಿರುವ ಬಗ್ಗೆ ಸಭಾಧ್ಯಕ್ಷರು ಪ್ರಸ್ತಾಪಿದಾಗ ಬಿಜೆಪಿ ಸದಸ್ಯರು ಚಪ್ಪಾಳೆ ತಟ್ಟಿ ಸ್ವಾಗತ ಮಾಡಿದರು. ಆಗ ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಸಭಾಧ್ಯಕ್ಷರಿಗೆ ನೀವು ಓದಿದ್ದು ಯಾವ ಬಿಲ್ ಅಂತಾ ಕೇಳಿದರು. ಆಗ ಸಭಾಧ್ಯಕ್ಷರು, “ಕರ್ನಾಟಕ ಕಾನೂನು ಆಯೋಗವು ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ವಿಧೇಯಕವನ್ನು ರೂಪಿಸಲು ಶಿಫಾರಸು ಮಾಡಿದ್ದು, ಇದನ್ನು ಅವಲೋಕಿಸಿ  ಮಾನ್ಯ ಮುಖ್ಯಮಂತ್ರಿಯವರು ಸಚಿವ ಸಂಪುಟದ ಮುಂದೆ ಮಂಡಿಸುವಂತೆ ಖಂಡಿಕೆ 10ರಲ್ಲಿ ಸೂಚಿಸಿರುತ್ತಾರೆ”  ಎಂದು ಸಭಾಧ್ಯಕ್ಷರು ಸದಸ್ಯರಿಗೆ ಓದಿ ಹೇಳಿದರು.

ಕಾಂಗ್ರೆಸ್ ಅವಧಿಯಲ್ಲಿ ವಿಧೇಯಕವನ್ನು ರೂಪಿಸಲು ಶಿಫಾರಸು ಮಾಡಿದ್ದಾರೆ ಹೊರತು ಕ್ಯಾಬಿನೆಟ್ ಗೆ ಆಗ ಬಿಲ್ ಬಂದಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೆ.ಜೆ.ಜಾರ್ಜ್ ಈ ವೇಳೆ ಸಮರ್ಥಿಸಿಕೊಂಡರು.

ಇದಕ್ಕೂ ಮೊದಲು, ಮತಾಂತರ ನಿಷೇಧ ಮಸೂದೆ ಚರ್ಚೆ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಒಟ್ಟಿಗೆ ಮಾತನಾಡಲು ಆರಂಭಿಸಿದಾಗ ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಮಧ್ಯ ಪ್ರವೇಶಿಸಿ ಮಾತನಾಡಿದರು.

ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ನಿಮ್ಮ ಕಾಲದಲ್ಲಿ ಏನಾಯಿತು ಅನ್ನೋದನ್ನು ಹಾಗೂ ಜಯಚಂದ್ರ ಕಾನೂನು ಸಚಿವರಾಗಿದ್ದಾಗ ಏನು ಮಾಡಿದ್ರು ಅನ್ನೋದನ್ನ ಸಭಾಧ್ಯಕ್ಷರು ಓದಿ ಹೇಳಿದ್ದಾರೆ ಮತ್ತು ಅದಕ್ಕೆ ಅನುಮೋದನೆಗೆ ತಾವು ಹೇಳಿರುವ ಬಗ್ಗೆ ದಾಖಲೆ ನೀಡಲಾಗಿದೆ. ನೀವೇ ಮಾಡಿದಂಥ ದಾಖಲೆಯನ್ನು ಒಪ್ಪಲ್ಲ,  ನಂಬಲ್ಲ ಅಂದರೆ ಈ ರಾಜ್ಯವನ್ನು ದೇವರೇ ಕಾಪಾಡಬೇಕು. ಪ್ರಾಮಾಣಿಕವಾಗಿ ನೀವು ಆ ಕಾಲದಲ್ಲಿ ಅವತ್ತಿನ ಪರಿಸ್ಥಿತಿಯಲ್ಲಿ ಮಾಡಿದ್ದೆ ಈಗ ವಿರೋಧ ಮಾಡುತ್ತೇನೆ ಅಂತಾ ಹೇಳಿದ್ರೆ ನಮ್ಮ ಅಭ್ಯಂತರವಿಲ್ಲ ಎಂದು ಹೇಳಿದರು.

ನಿಮ್ಮ (ಕಾಂಗ್ರೆಸ್‌ ಅಧಿಕಾರಾವಧಿ)  ಕಾಲದಲ್ಲಿ ಅನುಮೋದನೆಯಾಗಿರುವುದನ್ನು ಈಗ ನಮ್ಮ ಸರ್ಕಾರ ಜಾರಿಗೆ ತರಲು ಮುಂದಾಗಿದೆ.  ಅದರ ಬಗ್ಗೆ ನಮ್ಮ ಕಾನೂನು ಸಚಿವರು ಹಾಗೂ ಗೃಹ ಸಚಿವರು ಸ್ಪಷ್ಟವಾಗಿ ಸದನದಲ್ಲಿ ಹೇಳಿದ್ದಾರೆ. ದಯಮಾಡಿ ಬಹಳ ಚರ್ಚೆಗೆ ಹೋಗಬಾರದು/ ಸ್ವತಂತ್ರವಾಗಿ ಯಾವುದೇ ಧರ್ಮ ಸೇರಿಸಿಕೊಳ್ಳಲು ಅಡ್ಡಿ ಆತಂಕಗಳು ಇಲ್ಲ. ಬಲವಂತ ಮಾಡುವುದ ಅಕ್ಷಮ್ಯ ಅಪರಾಧ ಎಂದು ಹೇಳಿದ್ದಾರೆ. ದಯಮಾಡಿ ತಾವೇ ಮಾಡಿದ್ದನ್ನು ಈಗ ವಿರೋಧಿಸಿದರೆ ಅಪಹಾಸ್ಯಕ್ಕೀಡಾಗುತ್ತೀರಿ. ಹಾಗಾಗಿ ಸರ್ವಾನುಮತದಿಂದ ಈ ಮಸೂದೆಯನ್ನು ಅಂಗೀಕರಿಸಲು ಅನುಕೂಲ ಮಾಡಿಕೊಡಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com