
ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ರಾಜ್ಯಗಳ ಆಡಳಿತ ವ್ಯವಸ್ಥೆ, ವ್ಯವಸ್ಥೆಯಲ್ಲಿನ ಸುಧಾರಣೆಗಳ ಮೇಲೆ ಬೆಳಕು ಚೆಲ್ಲುವ ಉತ್ತಮ ಆಡಳಿತ ಸೂಚ್ಯಂಕ 2021 ವರದಿಯನ್ನು ಕೇಂದ್ರ ಸರ್ಕಾರವು ಉತ್ತಮ ಆಡಳಿತ ದಿನವಾದ ಡಿ.25ರ ಶನಿವಾರ ಬಿಡುಗಡೆ ಮಾಡಿದೆ.
ಸಮಗ್ರ ಪಟ್ಟಿಯಲ್ಲಿ, ಕಳೆದ ವರ್ಷ 3ನೇ ಸ್ಥಾನದಲ್ಲಿದ್ದ ಕರ್ನಾಟಕ ಈ ಬಾರಿ 5.109 ಅಂಕಗಳೊಂದಿಗೆ 6ನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಗುಜರಾತ್ (5.662), ಮಹಾರಾಷ್ಟ್ರ(5.425) ಹಾಗೂ ಗೋವಾ(5.348) ರಾಜ್ಯಗಳು ಮೊದಲ 3 ಸ್ಥಾನ ಪಡೆದುಕೊಂಡಿವೆ.
2019ರಲ್ಲಿ ಸಮಗ್ರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದ ಕರ್ನಾಟಕ ಇದೀಗ ಬಿಡುಗಡೆಯಾದ ವರದಿಯಲ್ಲಿ ಶೇ.0.2ರಷ್ಟು ಏರಿಕೆ ಕಂಡಿದ್ದರೂ, ಒಟ್ಟಾರೆ 3 ಸ್ಥಾನ ಕುಸಿತ ಕಂಡು 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದಿದೆ. ಕೃಷಿ ಮತ್ತು ಸಂಬಂಧಿತ ವಲಯ, ಸಾರ್ವಜನಿಕ ಮೂಲಸೌಕರ್ಯ ಮತ್ತು ಸೇವೆಗಳು ಹಾಗೂ ಸಮಾಜ ಕಲ್ಯಾಣ ಮತ್ತು ಅಭಿವೃದ್ಧಿ ವಲಯದಲ್ಲಿ ಕರ್ನಾಟಕ ಪ್ರಗತಿ ತೋರಿಸಿದೆ.
ಒಟ್ಟು 10 ವಲಯಗಳಲ್ಲಿನ 58 ವಿಷಯಗಳನ್ನು ಆಧರಿಸಿ ಕೇಂದ್ರ ಸರ್ಕಾರವು ಈ ಸೂಚ್ಯಂಕವನ್ನು ಬಿಡುಗಡೆ ಮಾಡುತ್ತದೆ. ಈ ಬಾರಿ 4 ವಿಭಾಗದಲ್ಲಿ ರಾರಯಂಕಿಂಗ್ ಪ್ರಕಟಿಸಲಾಗಿದೆ. ದೊಡ್ಡ ರಾಜ್ಯಗಳ ಪಟ್ಟಿ1 (ಗ್ರೂಪ್ ಎ- 10 ರಾಜ್ಯ), ದೊಡ್ಡ ರಾಜ್ಯಗಳ ಪಟ್ಟಿ2 (ಗ್ರೂಪ್ ಬಿ- 8 ರಾಜ್ಯ), ಗುಡ್ಡಗಾಡು ರಾಜ್ಯಗಳು (11 ರಾಜ್ಯ), ಕೇಂದ್ರಾಡಳಿತ ಪ್ರದೇಶಗಳು (7) ಎಂದು ರಾಜ್ಯಗಳನ್ನು ವಿಂಗಡಿಸಲಾಗಿದೆ.
ಕೃಷಿ ಮತ್ತು ಸಂಬಂಧಿತ ಕ್ಷೇತ್ರ, ವಾಣಿಜ್ಯ ಮತ್ತು ಉದ್ಯಮ, ಮಾನವ ಸಂಪನ್ಮೂಲ ಅಭಿವೃದ್ಧಿ, ಸಾರ್ವಜನಿಕ ಆರೋಗ್ಯ, ಸಾರ್ವಜನಿಕ ಮೂಲಸೌಕರ್ಯ, ಆರ್ಥಿಕ ಆಡಳಿತ, ಸಾಮಾಜಿಕ ಕಲ್ಯಾಣ ಮತ್ತು ಅಭಿವೃದ್ಧಿ, ನ್ಯಾಯಾಂಗ ಮತ್ತು ಸಾರ್ವಜನಿಕ ಸುರಕ್ಷತೆ, ಪರಿಸರ, ನಾಗರಿಕ ಉದ್ದೇಶಿತ ಆಡಳಿತದಲ್ಲಿನ ರಾಜ್ಯಗಳನ್ನು ಸಾಧನೆ ಆಧರಿಸಿ ವರದಿ ತಯಾರಿಸಲಾಗಿದೆ.
Advertisement