ಸೇವಾ ಸಿಂಧು ಆ್ಯಪ್ ಸಮಸ್ಯೆಗಳ ಆಗರ: ಕೋವಿಡ್ ಪರಿಹಾರ ಅರ್ಜಿ ಸಲ್ಲಿಕೆಗೆ ಸಂತ್ರಸ್ಥರ ಪರದಾಟ!

ಲಾಕ್‌ಡೌನ್‌ ಸಂಕಷ್ಟದಲ್ಲಿರುವ ಕಲಾವಿದರಿಗೆ, ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಿದ್ದು ‘ಸೇವಾಸಿಂಧು’ ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಲಾಕ್‌ಡೌನ್‌ ಸಂಕಷ್ಟದಲ್ಲಿರುವ ಕಲಾವಿದರಿಗೆ, ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಿದ್ದು ‘ಸೇವಾಸಿಂಧು’ ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದೆ. ಆದರೆ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಲು ಪ್ರಮುಖವಾಗಿರುವ ಸೇವಾಸಿಂಧು ಆ್ಯಪ್ ಸಮಸ್ಯೆಗಳ ಆಗರವಾಗಿ ಮಾರ್ಪಟ್ಟಿದ್ದು, ಅರ್ಜಿ ಸಲ್ಲಿಸಲು ಸಂತ್ರಸ್ಥರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. 

ಪರಿಹಾರ ಪಡೆಯಲು ಕಾರ್ಮಿಕರು, ಕಲಾವಿದರು ಮೊಬೈಲ್‌ ಮೂಲಕವೂ ಅರ್ಜಿ ಸಲ್ಲಿಸಬಹುದು. ಆದರೆ ಸೇವಾಸಿಂಧು ಪೋರ್ಟಲ್‌ ತೆರೆದು, ಅಗತ್ಯ ದಾಖಲಾತಿ ಲಗತ್ತಿಸಿ ಅರ್ಜಿ ಸಲ್ಲಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅರ್ಜಿ ಸಲ್ಲಿಸಲು ಸಾಕಷ್ಟು ತಾಂತ್ರಿಕ ದೋಷಗಳು ಎದುರಾಗುತ್ತಿವೆ ಎಂದು ಫಲಾನುಭವಿಗಳಿಗೆ ಸಹಾಯ ಮಾಡುತ್ತಿರುವ ಸ್ವಯಂಸೇವಕರು ಹೇಳಿದ್ದಾರೆ. 

ಸಾಕಷ್ಟು ಫಲಾನುಭವಿಗಳ ಬಳಿ ಸ್ಮಾರ್ಟ್ ಫೋನ್ ಇಲ್ಲದಿರುವುದು ಒಂದು ಸಮಸ್ಯೆಯಾಗಿದ್ದಾರೆ. ಫೋನ್ ಇದ್ದರೂ ಅರ್ಜಿ ಸಲ್ಲಿಸುವುದು ಹೇಗೆ ಎಂಬುದು ಸಾಕಷ್ಟು ಜನರಿಗೆ ತಿಳಿದಿಲ್ಲ. ಇನ್ನು ಅರ್ಜಿ ಸಲ್ಲಿಸಲು ಆನ್'ಲೈನ್ ಗಳಲ್ಲಿರುವ ವಿಡಿಯೋಗಳಲ್ಲಿ ಅರ್ಜಿ ಸಲ್ಲಿಸಲು ಫೋಟೋ ಕೂಡ ಅಗತ್ಯವಿದೆ ಎಂಬ ಮಾಹಿತಿಯನ್ನು ನೀಡಿಲ್ಲ. ಇನ್ನು ನೋಂದಾವಣಿ ಕೇಂದ್ರಗಳಲ್ಲಿ 2 ಸೆಟ್ ದಾಖಲಾತಿಗಳನ್ನು ಕೇಳುತ್ತಿದೆ. ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್, ಬ್ಯಾಂಕ್ ಪಾಸ್'ಪೋರ್ಟ್, ಗೆಜೆಟೆಡ್ ಅಧಿಕಾರಿಯೊಬ್ಬರು ಸಹಿ ಮಾಡಿದ ನೌಕರರ ಪ್ರಮಾಣಪತ್ರ ಕೇಳುತ್ತಿದ್ದಾರೆ. 

ಇದರ ಜೊತೆಗೆ ಕೆಲ ಬಡವರ ಬಳಿ ಬಿಪಿಎಲ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಕೂಡ ಇಲ್ಲಿದಿರುವುದು ಕಂಡು ಬಂದಿದೆ. ಕೆಲವೇ ದಾಖಲಾತಿಗಳೊಂದಿಗೆ ನೋಂದಾವಣಿ ಕೇಂದ್ರಕ್ಕೆ ಬರುವವರು ದಾಖಲಾತಿ ಪತ್ರ ತರಲು ಆಗಾಗ ಓಡಾಡುತ್ತಿರುವುದು ಕಂಡು ಬರುತ್ತಿದೆ. ಹೀಗಾಗಿ ನೋಂದಾವಣಿ ಮಾಡಿಕೊಳ್ಳಲು ಒಂದು ದಿನ ಕಾಲ ಕಳೆಯುವಂತಾಗಿದೆ. ಇದರಿಂದ ಅವರ ಒಂದು ದಿನದ ದಿನಗೂಲಿ ಹಾಳಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಯುವ ಘಟದ ಉಪಾಧ್ಯಕ್ಷೆ ಸಿಂಧು ಮಳವಳ್ಳಿಯವರು ಹೇಳಿದ್ದಾರೆ. 

ಇನ್ನು ಒಟಿಪಿ ಕೂಡ ಮತ್ತೊಂದು ಸಮಸ್ಯೆಯನ್ನು ಎದುರು ಮಾಡಿದೆ. ಸಾಕಷ್ಟು ಫಲಾನುಭವಿಗಳ ಬಳಿ ಆಧಾರ್ ಕಾರ್ಡ್'ಗೆ ಲಿಂಕ್ ಮಾಡದ ಮೊಬೈಲ್ ಸಂಖ್ಯೆಯನ್ನು ಹೊಂದಿದ್ದಾರೆ. ಇನ್ನು ಮೊಬೈಲ್ ಸಂಖ್ಯೆಯಿದ್ದರೂ ಒಟಿಪಿ ಬಂದರೂ ಅದನ್ನು ಯಾವ ರೀತಿ ಪಡೆದುಕೊಳ್ಳಬೇಕೆಂಬುದು ಸಾಕಷ್ಟು ಜನರಿಗೆ ತಿಳಿಯುತ್ತಿಲ್ಲ. ಬೇರೆಯವರ ಸಹಾಯ ಪಡೆದು ತಿಳಿದುಕೊಳ್ಳಲು ಮುಂದಾದರೆ ಅಷ್ಟರಲ್ಲಾಗಲೇ ಒಟಿಪಿ ಸಮಯದ ಅವಧಿ ಮುಗಿದಿರುತ್ತದೆ. ಒಂದೇ ಕುಟುಂಬದಲ್ಲಿ ಇಬ್ಬರು ಫಲಾನುಭವಿಗಳಿದ್ದರೆ ಒಬ್ಬರ ಅರ್ಜಿ ತಿರಸ್ಕರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಆಟೋ ಮತ್ತು ಕ್ಯಾಬ್ ಚಾಲಕರು ಅರ್ಜಿಗಳನ್ನು ಸಲ್ಲಿಸಲು ಸಹಾಯ ಮಾಡುತ್ತಿರುವ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ರಾಷ್ಟ್ರೀಯ ಸಂಯೋಜಕರಾದ ಮೊಹಮ್ಮದ್ ಫಹಾದ್ ಅವರು ಮಾತನಾಡಿ, ಸರ್ವರ್ ಸ್ಲೋ ಆಗಿದ್ದು, ಅರ್ಜಿ ಸಲ್ಲಿಸಿದ ಬಳಿಕ 30 ಸೆಕೆಂಡುಗಳಲ್ಲಿ ಲಾಗ್ಔಟ್ ಆಗುತ್ತದೆ. ಹೀಗಾಗಿ ಮತ್ತೆ ವಿವರಗಳನ್ನು ನಮೂದಿಸಬೇಕಾಗುತ್ತದೆ. ಒಂದು ಅರ್ಜಿಯನ್ನು ಸಲ್ಲಿಸಿದ ನಂತರ ಮುಂದಿನ ಅರ್ಜಿ ಸ್ವೀಕರಿಸಲು ಪೋರ್ಟಲ್ 20-30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇನ್ನು ಇತರರಿಂದ ಬಾಡಿಗೆಗೆ ಆಟೋ ಅಥವಾ ಕ್ಯಾಬ್‌ಗಳನ್ನು ತೆಗೆದುಕೊಳ್ಳುವ ಚಾಲಕರು ಪರಿಹಾರ ಪಡೆದುಕೊಳ್ಳಲು ಅರ್ಹರಾಗಿಲ್ಲ. ಏಕೆಂದರೆ ಅವರು ಪರವಾನಗಿ ಪಡೆದ ಮಾಲೀಕರಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹೆಲ್ಪಿಂಗ್ ಹ್ಯಾಂಡ್ಸ್ ಎಂಬ ಎನ್‌ಜಿಒ ಸದಸ್ಯ ಸಲ್ಮಾನ್ ವಸೀಮ್ ಅವರು ಮಾತನಾಡಿ, ಪಿನ್ ಕೋಡ್ ಹಾಕಿದರೆ, ತಪ್ಪಾಗಿದೆ ಎಂದು ಹೇಳಲಾಗುತ್ತಿದೆ. ಮತ್ತೊಮ್ಮೆ ನಮೂದಿಸಿದರೆ ಸ್ವೀಕರಿಸುತ್ತದೆ. "ನನ್ನನ್ನು ಸಂಪರ್ಕಿಸಿದ 15 ಜನರಲ್ಲಿ ಕೇವಲ ಐದು ಮಂದಿ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅರ್ಜಿ ಸಲ್ಲಿಸಲು ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದ್ದು, ಅರ್ಜಿಗಳನ್ನು ಭರ್ತಿ ಮಾಡುವಂತೆ ಸರ್ಕಾರಿ ಕೇಂದ್ರಗಳಿಗೆ ಸರ್ಕಾರ ನಿರ್ದೇಶಿಸಿದರೆ ಉತ್ತಮವಾಗಿರುತ್ತದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com