ನಕಲಿ ಫೇಸ್ ಬುಕ್ ಖಾತೆ ತೆರೆದು ಬಿಜೆಪಿ ವಿರುದ್ಧ ಪೋಸ್ಟ್: ಸಚಿವ ಸೋಮಶೇಖರ್ ಆಪ್ತ ಸಹಾಯಕನಿಂದ ದೂರು ದಾಖಲು
ಬೆಂಗಳೂರು: ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಬಿಜೆಪಿ ಹಾಗೂ ಪಕ್ಷದ ನಾಯಕರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಘಟನೆ ನಡೆದಿದ್ದು, ಈ ಕುರಿತು ಸಚಿವರ ಆಪ್ತ ಸಹಾಯಕ ಕೇಂದ್ರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಚಿವ ಸೋಮಶೇಖರ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದಿದ್ದು ಅವರ ಆಪ್ತರಿಗೆ ತುರ್ತು ಹಣ ನೀಡುವಂತೆ ಸಂದೇಶ ರವಾನಿಸಿ ಗೂಗಲ್ ಪೇ ಮಾಡುವಂತೆ ಮೊಬೈಲ್ ನಂಬರ್ ಕೂಡ ನೀಡಿದ್ದಾರೆ. ಈ ವಿಷಯ ಆಪ್ತರೊಬ್ಬರು ಸೋಮಶೇಖರ್‌ಗೆ ಮಾಹಿತಿ ನೀಡಿದ್ದು, ಆಪ್ತ ಸಹಾಯಕ ಜಿ.ಎಸ್. ಚೇತನ್ ಮೂಲಕ ಹಲಸೂರು ಗೇಟ್‌ನಲ್ಲಿರುವ ಕೇಂದ್ರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆಂದು ತಿಳಿದುಬಂದಿದೆ.
ಸಹಕಾರ ಸಚಿವ ಸೋಮಶೇಖರ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದಿದ್ದು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಲಾಗಿದೆ. ಇದಲ್ಲದೇ ಅಪ್ತರ ಬಳಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆಂದು ಹೇಳಲಾಗುತ್ತಿದೆ.
ಸಚಿವರ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ನಕಲಿ ಫೇಸ್ ಬುಕ್ ಖಾತೆ ತೆರೆದು ಮೋಸ ಮಾಡಲಾಗುತ್ತಿದೆ. ಈ ಕುರಿತು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ದೂರಿನಲ್ಲಿ ಕೋರಲಾಗಿದೆ. ದೂರಿನ ಹಿನ್ನೆಲೆಯಲ್ಲಿ ಕೇಂದ್ರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯ ಮೊಬೈಲ್ ನಂಬರ್ ಜಾಡು ಹಿಡಿದು ತನಿಖೆ ನಡೆಸಲಾಗುತ್ತಿದೆ. ಸೈಬರ್ ವಂಚಕರು ಹಣ ಪಡೆಯುವ ಉದ್ದೇಶದಿಂದ ನಕಲಿ ಫೇಸ್ ಬುಕ್ ಖಾತೆ ತೆರೆದಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ