
ಉಡುಪಿ: ರಾಜ್ಯದಲ್ಲಿ ತುಳುವಿಗೆ ಅಧಿಕೃತ ಮಾನ್ಯತೆ ಸಿಗಬೇಕು. ಈ ನಿಟ್ಟಿನಲ್ಲಿ ವಿಧಾನಸಭಾ ಅಧಿವೇಶನದಲ್ಲಿ ಕರಾವಳಿ ಭಾಗದ ಶಾಸಕರಿಗೆ ತುಳುವಿನಲ್ಲೇ ಮಾತನಾಡಲು ಅವಕಾಶ ಕಲ್ಪಿಸುವಂತೆ ಉಡುಪಿ ಶಾಸಕ ರಘುಪತಿ ಭಟ್ ಅವರು ಸ್ಪೀಕರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಜೈತುಳು ನಾಡ್ ಸಂಘಟನೆಯ ವತಿಯಿಂದ ಅಭಿವೃದ್ಧಿ ಪಡಿಸಲಾದ ತುಳು ಲಿಪಿ ಫಾಂಟ್ ‘ತುಳು ಮಂದಾರ’ವನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಸೋಮವಾರ ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ವಿಧಾನಸಭಾ ಅಧಿವೇಶನದಲ್ಲಿ ಕರಾವಳಿ ಭಾಗದ ಶಾಸಕರಿಗೆ ತುಳುವಿನಲ್ಲೇ ಮಾತನಾಡಲು ಅವಕಾಶ ಕಲ್ಪಿಸುವಂತೆ ಸಭಾಧ್ಯಕ್ಷರಿಗೆ ಈ ಹಿಂದೆ ಮನವಿ ಮಾಡಲಾಗಿತ್ತು. ಆದರೆ ಇವುಗಳನ್ನು ದಾಖಲು ಮಾಡುವವರಿಗೆ ತುಳು ಭಾಷೆಯ ಅರಿವಿನ ಕೊರತೆಯಿರುವುದರಿಂದ ಇದಕ್ಕೆ ಅವಕಾಶ ನೀಡಿರಲಿಲ್ಲ. ಮುಂದಿನ ಚಳಿಗಾಲದ ಅಧಿವೇಶನದಲ್ಲಿ ತುಳುವಿನಲ್ಲಿ ಮಾತನಾಡಲು ಅವಕಾಶ ನೀಡುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದರು.
ಜನಪ್ರತಿನಿಧಿಗಳಲ್ಲಿ ಈಗಾಗಲೇ ತುಳು ಭಾಷೆ ಹಾಗೂ ಲಿಪಿಯ ಬಗ್ಗೆ ಜಾಗೃತಿ ಮೂಡಿದೆ. ಮುಂದೆ ಸರಕಾರವೇ ಜನರಿಗೆ ತುಳು ಲಿಪಿ ಕಲಿಸುವ ಕಾರ್ಯಕ್ಕೆ ಮುಂದಾಗಬೇಕು. ತುಳುವನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸು ವಂತೆ ಸರಕಾರವನ್ನು ಒತ್ತಾಯಿಸಲಾಗುವುದು. ಅದಕ್ಕಿಂತ ಮುಖ್ಯವಾಗಿ ಈ ಭಾಷೆಯನ್ನು ಹಾಗೂ ಲಿಪಿಯನ್ನು ಜನ ಮಧ್ಯೆ ಕೊಂಡೊಯ್ಯುವ ಕಾರ್ಯವನ್ನು ನಾವು ಮಾಡಬೇಕಾಗಿದೆ ಎಂದು ತಿಳಿಸಿದರು.
Advertisement