ಇಂಥಾ ಅಧಿಕಾರಿ ಯಾವ ಜಿಲ್ಲೆಗೂ ಬೇಡ, ಇಷ್ಟು ದಿನ ಅವಮಾನ ಸಹಿಸಿಕೊಂಡೆ, ಇನ್ನು ನನ್ನಿಂದಾಗದು: ಶಿಲ್ಪಾ ನಾಗ್
ಮೈಸೂರು: ಗುರುವಾರ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆದರೆ ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ರೋಹಿಣಿ ಸಿಂಧೂರಿ ನಿರಾಕರಿಸಿದ್ದಾರೆ.
ಇಂತಹ ಉಸಿರುಗಟ್ಟಿಸುವ ವಾತಾವರಣದಲ್ಲಿ ನನಗೆ ಕರ್ತವ್ಯ ನಿರ್ವಹಿಸಲು ಆಗುತ್ತಿಲ್ಲ. ಪಾಲಿಕೆ ಅಯುಕ್ತರ ಹುದ್ದೆಗೆ ಮಾತ್ರವಲ್ಲ, ಐಎಎಸ್ ಹುದ್ದೆಗೂ ರಾಜೀನಾಮೆ ನೀಡುತ್ತಿದ್ದೇನೆ. ರಾಜೀನಾಮೆ ಪತ್ರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಳುಹಿಸುತ್ತೇನೆ’ ಎಂದರು. ಜಿಲ್ಲಾಧಿಕಾರಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ ಅವರು ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಹಾಕಿದ್ದಾರೆ.
2014 ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ಶಿಲ್ಪಾ ನಾಗ್, ಹಾಸನ ಮೂಲದವರಾಗಿದ್ದು, ಆಯುಕ್ತರಾಗಿ ಶಿಲ್ಪಾ ನಾಗ್ ಮೈಸೂರು ನಗರದಲ್ಲಿ ಕೋವಿಡ್ ನಿಯಂತ್ರಿಸಲು ಹಲವು ಕ್ರಮ ತೆಗೆದುಕೊಂಡಿದ್ದರು. ಕೋವಿಡ್ ಮಿತ್ರ, ಟೆಲಿ ಕೇರ್ ಸೇರಿದಂತೆ ಹಲವು ಯೋಜನೆ ಅನುಷ್ಠಾನಗೊಳಿಸಿದ್ದರು ಇದಕ್ಕೆ ಮೈಸೂರಿಗರಿಂದ ಶ್ಲಾಘನೆ ವ್ಯಕ್ತವಾಗಿತ್ತು, ಆದರೆ ಸಚಿವರು, ಉಪ ಮುಖ್ಯಮಂತ್ರಿ ನಡೆಸಿದ ಸಭೆಗಳಲ್ಲಿ ಜಿಲ್ಲಾಧಿಕಾರಿಯು ಇದೆಲ್ಲವನ್ನು ತಾವೇ ಜಾರಿಗೊಳಿಸಿದ್ದಾಗಿ ಮಾಹಿತಿ ನೀಡುತ್ತಿದ್ದರು. ಇದು ಶಿಲ್ಪಾ ಅವರಲ್ಲಿ ಸಾಕಷ್ಟು ಬೇಸರ ಮೂಡಿಸಿತ್ತು.
ಮೈಸೂರಿನಲ್ಲಿ 2 ವಾರ್ಡ್ ಮಾತ್ರ ರೆಡ್ ಜೋನ್ ಇತ್ತು, ಆದರೆ ಜಿಲ್ಲಾಧಿಕಾರಿಗಳು ವರದಿ ನೀಡುವಾಗ ನಗರದ ಎಲ್ಲಾ ವಾರ್ಡ್ ಗಳು ರೆಡ್ ಜೋನ್ ಎಂದು ತಿಳಿಸಿದ್ದಾರೆ, ಇದರಿಂದ ಕಾರ್ಪೋರೆಷನ್ ಬಗ್ಗೆ ತಪ್ಪು ಕಲ್ಪನೆ ಮೂಡುತ್ತದೆ ಎಂದು ಹೇಳಿದ್ದಾರೆ.
ಜಿಲ್ಲಾಡಳಿತವು 1,500 ಹಾಸಿಗೆಗಳೊಂದಿಗೆ ಕೋವಿಡ್ ಕೇರ್ ಕೇಂದ್ರಗಳನ್ನು ರಚಿಸಿದೆ ಎಂಬುದನ್ನು ಅಲ್ಲಗಳೆದ ಶಿಲ್ಪಾ, ಜಿಲ್ಲಾಡಳಿತವು ಕೋವಿಡ್ ಮಿತ್ರಾಗೆಮಾತ್ರೆಗಳನ್ನು ಸಹ ನೀಡಿಲ್ಲ ಎಂದು ಹೇಳಿದರು. ಕೋವಿಡ್ ಮಿತ್ರಾ ಬಗ್ಗೆ ಏನೂ ತಿಳಿದಿಲ್ಲದ ರೋಹಿಣಿ, ಪ್ರಧಾನ ಮಂತ್ರಿಯೊಂದಿಗಿನ ಸಂವಾದದ ಸಂದರ್ಭದಲ್ಲಿ ಅದರ ಕ್ರೆಡಿಟ್ ಪಡೆಯಲು ಯತ್ನಿಸಿದರು ಎಂದು ಆರೋಪಿಸಿದ್ದಾರೆ.
ಮಾಧ್ಯಮಗಳಲ್ಲಿ ಪಾಲಿಕೆ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ನನ್ನನ್ನ ಟಾರ್ಗೆಟ್ ಮಾಡಲಾಗಿದೆ. ನನಗೆ ಕೆಲಸ ಮಾಡುವ ಆಸಕ್ತಿಯೇ ಇಲ್ಲದಂತಾಗಿದೆ. ಜಿಲ್ಲಾಡಳಿತದಿಂದ ನಮಗೆ ಯಾವುದೇ ಸಹಕಾರ ದೊರೆತಿಲ್ಲ. ಸಿಎಸ್‌ಆರ್ ಫಂಡ್‌ನಿಂದ ನಾವು ಕೆಲಸ ಮಾಡುತ್ತಿದ್ದೇವೆ. ಎಲ್ಲರಿಗೂ ಒಂದು ಸಹನೆ ಇರುತ್ತೆ, ಸಹನೆ ಒಡೆದಾಗ ಏನು ಮಾಡಬೇಕು. ಒಬ್ಬರು ಐಎಎಸ್ ಅಧಿಕಾರಿಯಾಗಿ ಮತ್ತೊಬ್ಬ ಅಧಿಕಾರಿ ಮೇಲೆ ದಬ್ಬಾಳಿಕೆ ಮಾಡೋದು ಎಷ್ಟು ಸರಿ. ನನ್ನನ್ನ ತುಳಿಯುವ ವ್ಯವಸ್ಥಿತ ಪಿತೂರಿ ನಡೆದಿದೆ. ಇಂತ ದುರಹಂಕಾರಿ ಜಿಲ್ಲಾಧಿಕಾರಿ ಜೊತೆ ಕೆಲಸ ಮಾಡಲು ಸಾಧ್ಯವಿಲ್ಲ, ಅಸಹಾಯಕಳಾಗಿ ನಾನು ಇಲ್ಲಿಂದ ಹೋಗುತ್ತಿಲ್ಲ, ಬದಲಾಗಿ ನೋವಿನಿಂದ ಹೊರಹೋಗುತ್ತಿದ್ದೇನೆ ಎಂದು ಶಿಲ್ಪಾ ನಾಗ್ ಹೇಳಿದ್ದಾರೆ.
ನನ್ನ ವಿರುದ್ಧ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಮಾಡಿರುವ ಕಿರುಕುಳದ ಆರೋಪಕ್ಕೆ ಯಾವುದೇ ಆಧಾರ ಇಲ್ಲ. ನನ್ನ ಮೇಲಿನ ಆರೋಪ ಆಧಾರ ರಹಿತವಾಗಿದೆ. ನನ್ನಿಂದ ಕಿರುಕುಳ ನಡೆದಿದೆ ಅನ್ನೋದು ಸುಳ್ಳು. ಜಿಲ್ಲಾಧಿಕಾರಿಯಾದ ನನಗೆ ಕೊರೋನಾ ನಿಯಂತ್ರಣದ ಜವಾಬ್ದಾರಿ ಇದೆ. ವಾಸ್ತವದಲ್ಲಿ ಶಿಲ್ಪಾ ನಾಗ್ ಅವರು ಕೊರೋನಾ ವಿಮರ್ಶೆ ಸಭೆಗಳಿಗೆ ಹಾಜರಾಗೋದನ್ನು ನಿಲ್ಲಿಸಿದ್ದರು. ಮೈಸೂರು ಸಿಟಿ ಕಾರ್ಪೋರೇಷನ್ ಹೊಸ ಕೊರೊನಾ ಪ್ರಕರಣಗಳು, ಸಾವುಗಳು ಹಾಗೂ ಸಕ್ರಿಯ ಪ್ರಕರಣಗಳ ದಾಖಲಾತಿಗೆ ಸಹಿ ಮಾಡುತ್ತಿರಲಿಲ್ಲ. ಮುಂದೆ ಹೀಗೆ ಮಾಡಬಾರದು ಎಂದಿ ನಾನು ಆದೇಶ ನೀಡಿದ್ದೆ.ಜೊತೆಗೆ ಅವರಿಗೆ ಕೋವಿಡ್ ಕೇರ್ಸೆಂಟರ್ ತೆರೆಯಲು ಆದೇಶ ನೀಡಿದ್ದೆ.
ಆದರೆ, ಅವರು ಮೈಸೂರು ನಗರದಲ್ಲಿ ಒಂದೇ ಒಂದು ಸರ್ಕಾರಿ ಕೊರೋನಾ ಕೇರ್ ಸೆಂಟರ್ ತೆರೆಯುವಲ್ಲಿ ವಿಫಲಾರಾಗಿದ್ದರು. ನಾನು ಕೊವಿಡ್ ಕೇರ್ ಸೆಂಟರ್ ಆರಂಭಿಸಿಲ್ಲವೆಂಬ ಆರೋಪಕ್ಕೂ ಯಾವುದೇ ಸಾಕ್ಷಿ ಇಲ್ಲ. ಯಾಕಂದ್ರೆ ಕೇವಲ 20 ದಿನಗಳಲ್ಲಿ ಹಳ್ಳಿ ಹಾಗೂ ತಾಲೂಕು ಕೇಂದ್ರಗಳಲ್ಲಿ ಒಟ್ಟು 18 ಕೊವಿಡ್ ಕೇರ್ ಸೆಂಟರ್ ಆರಂಭಿಸಿದ್ದೇವೆ. ಇತ್ತೀಚೆಗೆ ನನ್ನ ನೇತೃತ್ವದಲ್ಲೇ ನಗರದಲ್ಲಿ ಮೂರು ಕೊರೋನಾ ಕೇರ್ ಸೆಂಟರ್ ತೆರೆಯಲಾಗಿದೆ. ಶಿಲ್ಪಾ ನಾಗ್ ಅವರಿಗೆ ಜಿಲ್ಲೆಯ ಖಾಸಗಿ ಕೈಗಾರಿಕೆಗಳು, ಕಾರ್ಖಾನೆಗಳು, ಐಟಿ ಕಂಪನಿಗಳಿಂದ ಬರುವ ಸಿಎಸ್‌ಆರ್ ಉಸ್ತುವಾರಿ ವಹಿಸಲಾಯಿತು. ಆದರೆ ಅವರು ಹೆಚ್ಚಿನ ಸಮಯವನ್ನ ನಗರದಲ್ಲೇ ಕಳೆದಿದ್ದಾರೆ ಅನ್ನೋದು ನನಗೆ ತಿಳಿಯಿತು. ಇದಕ್ಕೆ ಸಂಬಂಧಿಸಿಂದತೆ ನಾನು ಅವರಿಂದ ಉತ್ತರ ಕೇಳಿದ್ದೆ. ಇದುವರೆಗೂ ಯಾವುದೇ ಉತ್ತರ ಬಂದಿಲ್ಲ ಎಂದು ರೋಹಿಣಿ ಸಿಂಧೂರಿ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ