ಕೋವಿಡ್ 3ನೇ ಅಲೆಗೆ ಸಜ್ಜಾಗಲು ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಎಂ ಕರೆ: ಸಂವಾದದಲ್ಲಿ ಯಡಿಯೂರಪ್ಪ ಶ್ಲಾಘನೆ

ಮಕ್ಕಳ ರಕ್ಷಣೆ ದೃಷ್ಟಿಯಿಂದ ಮೂರನೆ ಅಲೆ ಎದುರಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದರು.
ಯಡಿಯೂರಪ್ಪ
ಯಡಿಯೂರಪ್ಪ
Updated on

ಬೆಂಗಳೂರು: ಮಕ್ಕಳ ರಕ್ಷಣೆ ದೃಷ್ಟಿಯಿಂದ ಮೂರನೆ ಅಲೆ ಎದುರಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದರು.

ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ‘ಅಪೌಷ್ಟಿಕತೆ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ, ಅವರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು. ಆರೋಗ್ಯ ಇಲಾಖೆಯ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಮಕ್ಕಳಲ್ಲಿ ಸೋಂಕು ಹರಡದಂತೆ ನಿಯಂತ್ರಿಸಬೇಕು’ ಎಂದು ಸಲಹೆ ನೀಡಿದರು.

ಕೋವಿಡ್‌ ನಿಯಂತ್ರಣಕ್ಕಾಗಿ ಮನೆ ಮನೆ ಭೇಟಿ, ಜಾಗೃತಿ ಮೂಡಿಸುವುದು, ಮಕ್ಕಳು, ಬಾಣಂತಿಯರು ಮತ್ತು ಗರ್ಭಿಣಿಯರಿಗೆ ಮನೆಗಳಿಗೇ ಪೌಷ್ಟಿಕ ಆಹಾರ ಸಾಮಗ್ರಿ ತಲುಪಿಸುವುದು, ಗ್ರಾಮ ಮಟ್ಟದ ಕೋವಿಡ್‌ ಕಾರ್ಯಪಡೆ ಕೆಲಸ ಸೇರಿದಂತೆ ಅಂಗನವಾಡಿ ಕಾರ್ಯ ಕರ್ತೆಯರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಎಲ್ಲರೂ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು. 

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಲ್ಲಿ ಶೇಕಡ 85.91ರಷ್ಟು ಮಂದಿ ಕೋವಿಡ್‌ ಲಸಿಕೆ ಪಡೆದಿರುವುದು ಸಂತೋಷದ ಸಂಗತಿ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನೂ ‘ಕೊರೊನಾ ವಾರಿಯರ್‌’ ಎಂದು ಘೋಷಿಸಲಾಗಿದೆ. ಕೋವಿಡ್‌ ಮೊದಲ ಅಲೆಯಲ್ಲಿ 20 ಮಂದಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು
ಮೃತಪಟ್ಟಿದ್ದು, ಅವರ ಕುಟುಂಬಗಳಿಗೆ ತಲಾ 30 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಕೋವಿಡ್‌ನಿಂದ ಪತಿಯನ್ನು ಕಳೆದುಕೊಂಡಿರುವ ಬೆಂಗಳೂರಿನ ಭುವನೇಶ್ವರಿನಗರದ ಅಂಗನವಾಡಿ ಕಾರ್ಯಕರ್ತೆ ಗಿರಿಜಾ ಅವರಿಗೆ ಯಡಿಯೂರಪ್ಪ ಅವರು ವಿಡಿಯೊ ಸಂವಾದದ ವೇಳೆ ಸಾಂತ್ವನ ಹೇಳಿದರು. ಕುಟುಂಬದ ಎಲ್ಲಾ ನಾಲ್ವರಿಗೂ ಕೋವಿಡ್ ಸೋಂಕು ತಗುಲಿತ್ತು. ನಾಲ್ವರೂ ಚಿಕಿತ್ಸೆ ಪಡೆದೆವು. ಅತ್ತೆ ಸೇರಿ ಮೂವರೂ ಹುಷಾರಾಗಿ ಮನೆಗೆ ಬಂದೆವು. ಆದರೆ ಪತಿ ಸಾವಿಗೀಡಾದರು ಎಂದು ಕಣ್ಣೀರು ಹಾಕಿದರು.

ಕುಗ್ರಾಮಗಳಲ್ಲಿ ಸೇವಾ ನಿರತರಾಗಿರುವ ಕಿರಿಯ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮೊಡನೆ ಮುಖ್ಯಮಂತ್ರಿಗಳು ನೇರವಾಗಿ ಮಾತನಾಡಿದ್ದು ಹೆಚ್ಚಿನ ಉತ್ಸಾಹ ನೀಡಿದಂತಾಗಿದೆ ಎಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಮಂಜುಳಾ ಸಂಗಮೇಶ್ ಸಿಎಂ ಗೆ ತಿಳಿಸಿದರು. ಅಂಗನವಾಡಿ ಕಾರ್ಯಕರ್ತೆಯರ ಜವಾಬ್ದಾರಿ ಬಗ್ಗೆ ಸುಲಲಿತವಾಗಿ ವಿವರಣೆ ನೀಡಿ ಉಪಯುಕ್ತ ಸಲಹೆಗಳನ್ನೂ ನೀಡಿದ ಮಂಜುಳಾ ಅವರನ್ನು ಮುಖ್ಯಮಂತ್ರಿಗಳು ಅಭಿನಂದಿಸಿ ಬೆಂಗಳೂರಿಗೆ ಭೇಟಿ ನೀಡಿದಾಗ ತಮ್ಮ ಅಧಿಕೃತ ನಿವಾಸಕ್ಕೆ ಬಂದು
ಆತಿಥ್ಯ ಸ್ವೀಕರಿಸುವಂತೆ ಆಹ್ವಾನಿಸಿದರು.

ಕೋಲಾರ ಜಿಲ್ಲೆಯ ಎರ್ರಂವಾರಿಪಲ್ಲಿಯ ಅಂಗನವಾಡಿ ಕಾರ್ಯಕರ್ತೆ ಸಾವಿತ್ರಮ್ಮ 'ಜನರಿಗೆ ಕೋವಿಡ್ ಸಾಂಕ್ರಾಮಿಕದ ಮೊದಲ ಅಲೆಯ ಸಂದರ್ಭದಲ್ಲಿ ಭಯವಿತ್ತು. ಎರಡನೇ ಅಲೆಯು ಮೊದಲನೇ ಅಲೆಗಿಂತ ತೀವ್ರವಾಗಿದ್ದರೂ ಕೂಡ ಭಯವೇ ಇಲ್ಲ. ಕೋವಿಡ್ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಸವಾಲಿನ ಕೆಲಸವಾಗಿದೆ. ಆದರೂ ಆಶಾ ಕಾರ್ಯಕರ್ತೆಯರ ಜೊತೆಗೂಡಿ ಈ ದಿಸೆಯಲ್ಲಿ ಪ್ರಯತ್ನಿಸಿ ಯಶಸ್ವಿಯಾಗುತ್ತಿದ್ದೇವೆ' ಎಂದು ತಮ್ಮ ಪರಿಸ್ಥಿತಿಯನ್ನು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com