ಜಕ್ಕೂರ್ ಏರೋಡ್ರಮ್ ಬಳಸುತ್ತಿರುವ ಕಂಪನಿಗಳಿಂದ ಬಾಡಿಗೆ ಸಂಗ್ರಹ ಮಾಡಿ: ಅಧಿಕಾರಿಗಳಿಗೆ ಸಚಿವ ನಾರಾಯಣ ಗೌಡ ಸೂಚನೆ
ಬೆಂಗಳೂರು: ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಆವರಣದಲ್ಲಿ ವಿವಿಧ ಕಂಪನಿಗಳಿಂದ ಬಾಡಿಗೆ ಹಣ ವಸೂಲಿಯಾಗದಿರುವುದಕ್ಕೆ ಅಧಿಕಾರಿಗಳ ವಿರುದ್ಧ ಯುವ ಸಬಲೀಕರಣ ಗರಂ ಆಗಿದ್ದು, ಮತ್ತಷ್ಟು ವಿಳಂಬವಾದರೆ ಅಧಿಕಾರಿಗಳ ವಿರುದ್ಧವೇ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಶುಕ್ರವಾರ ನಗರದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಆವರಣದಲ್ಲಿ ವಿವಿಧ ಕಂಪೆನಿಗಳಿಂದ ಇನ್ನೂ ಯಾಕೆ ಬಾಡಿಗೆ ಹಣ ವಸೂಲಿ ಮಾಡಿಲ್ಲ. ಮೂರು ತಿಂಗಳ ಹಿಂದೆಯೇ ಈ ಬಗ್ಗೆ ಸೂಚನೆ ನೀಡಲಾಗಿತ್ತು. ಆದಾಗ್ಯೂ ಹಣ ಪಾವತಿಯಾಗಿಲ್ಲ. ದಿವ್ಯ ನಿರ್ಲಕ್ಷ್ಯ ಈ ವಿಳಂಬಕ್ಕೆ ಕಾರಣ. ತಕ್ಷಣ ಹಣ ವಸೂಲಿಯಾಗಬೇಕು. ಅಗತ್ಯವಿದ್ದಲ್ಲಿ ಕಾನೂನಾತ್ಮಕವಾಗಿ ನೋಟಿಸ್ ನೀಡಿ. ಇನ್ನೂ ವಿಳಂಬವಾದರೆ ನಿಮ್ಮ ಮೇಲೆಯೇ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜಕ್ಕೂರು ಏರೋಡ್ರಮ್‍ನಲ್ಲಿ ವಿಮಾನ ಹಾರಾಟಕ್ಕೆ ಹಾಗೂ ನಿಲ್ದಾಣಕ್ಕೆ ಸ್ಥಳ ನೀಡಲಾಗಿದೆ. ಮೂರು ತಿಂಗಳ ಹಿಂದೆ ಸಭೆ ನಡೆಸಿ, ಬಾಕಿ ಇರುವ ಬಾಡಿಗೆ ವಸೂಲಾಗಬೇಕು ಹಾಗೂ ದರ ಪರಿಷ್ಕರಣೆ ಮಾಡಿ ಮಾಹಿತಿ ನೀಡುವಂತೆ ಸಚಿವರು ಸೂಚಿಸಿದ್ದರು. ಆದರೆ ಈ ವರೆಗೆ ಯಾವುದೇ ರೀತಿಯ ಕ್ರಮ ಜರುಗಿಸದೆ ಇದ್ದ ಕಾರಣ ಸಚಿವ ಡಾ. ನಾರಾಯಣಗೌಡ ಅವರು ಅಧಿಕಾರಿಗಳ ವಿರುದ್ಧ ಗರಂ ಆದರು.
ಒಂದೂವರೆ ಕೋಟಿ ರೂ. ಬಾಡಿಗೆ ಹಣ ಬಾಕಿ ಇದ್ದಾಗಲೇ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿತ್ತು. ಈಗ ಅದು ಸುಮಾರು 5 ಕೋಟಿ ರೂ. ಗೆ ತಲುಪಿದೆ. ಆದಾಗ್ಯೂ ನೋಟಿಸ್ ನೋಡಿ ಬಾಕಿ ಹಣ ಪಾವತಿಸಿಕೊಳ್ಳುವ ಕೆಲಸ ಮಾಡಿಲ್ಲ. ಬಾಡಿಗೆ ಹಣ ನೀಡದ ಕಂಪೆನಿಗಳ ವಾಣಿಜ್ಯ ಕಾರ್ಯನಿರ್ವಹಣೆಯನ್ನು ತಕ್ಷಣ ಸ್ಥಗಿತಗೊಳಿಸಿ ಕ್ರಮ ತೆಗೆದುಕೊಳ್ಳಿ. ಲಕ್ಷಾಂತರ ರೂಪಾಯಿ ಬಾಡಿಗೆ ಬರಬೇಕಾದ ಜಾಗದಲ್ಲಿ ಇನ್ನೂ ನೂರಾರು ರೂಪಾಯಿ ದರ ಇದೆ. ದರ ಪರಿಷ್ಕರಣೆ ಮಾಡುವಂತೆ ಸೂಚಿಸಿದ್ದರೂ, ವರದಿ ನೀಡಿಲ್ಲ. ತಕ್ಷಣ ಕ್ರಮ ಜರುಗಿಸಿ ವರದಿ ನೀಡದಿದ್ದರೆ ನಿಮ್ಮ ಮೇಲೆಯೇ ಮೊದಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸಚಿವ ಡಾ. ನಾರಾಯಣಗೌಡ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ