ಬೆಂಗಳೂರು: ಕೋವಿಡ್‌ನಿಂದ ಸಂಕಷ್ಟದಲ್ಲಿರುವ ಕಲಾವಿದರಿಗೆ "ಕಲಾನಿಧಿ" ಮೂಲಕ ಸರ್ಕಾರ ಸಹಕರಿಸಲು ಮುಂದಾಗಿದ್ದು, ಇದಕ್ಕಾಗಿ ಆನ್ಲೈನ್ ಸೀರಿಸ್ ಮೂಲಕ ದೇಣಿಗೆ ಸಂಗ್ರಹ ಮಾಡಲಾಗುವುದು ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿಂದು ನಡೆದ ಜಂಟಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ಕಳೆದ ಒಂದೂವರೆ ವರ್ಷದಿಂದ ಕಾಲವಿದರು ಕೋವಿಡ್‌ನಿಂದ ಸಂಕಷ್ಟದಲ್ಲಿದ್ದಾರೆ. ಕಷ್ಟದಲ್ಲಿರುವವರ ಸಹಾಯಕ್ಕೆ ನಾವು ನಿರ್ಧರಿಸಿದ್ದೇವೆ. ಹೀಗಾಗಿ ನಿಧಿ ಸಂಗ್ರಹಕ್ಕೆ ಮುಂದಾಗಿದ್ದೇವೆ. ಕಲಾವಿದರಿಗೆ ಸಹಾಯ ಹಸ್ತ ನೀಡುವ ಉದ್ದೇಶದಿಂದ "ಕಲಾನಿಧಿ" ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈ ನಿಟ್ಟಿನಲ್ಲೇ ಕಲಾನಿಧಿ ಎಂಬ ಆನ್ಲೈನ್ ಸಿರೀಸ್ ತರುತ್ತಿದ್ದೇವೆ. ಇದಕ್ಕೆ ಜನರು ಸಹಾಯವನ್ನು ಮಾಡಬಹುದು. ಇದರಿಂದ ಬರುವ ಹಣವನ್ನು ಕಲಾವಿದರಿಗೆ ಹಂಚಲಾಗುತ್ತದೆ ಎಂದರು.
ಶುಕ್ರವಾರ, ಶನಿವಾರ, ಭಾನುವಾರ ಸೇರಿದಂತೆ ಮೂರು ದಿನ ಸಂಗೀತ ಕಾರ್ಯಕ್ರಮ ಸೋಶಿಯಲ್ ಮಿಡಿಯಾ ಮೂಲಕ ನಡೆಯಲಿದೆ. ರಾಜ್ಯ, ದೇಶದ ಕಲಾವಿದರು ಇದರಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸೋನು ನಿಗಂ ಕೂಡ ಭಾಗಿಯಾಗುತ್ತಾರೆ. ಬೆಂಗಳೂರಿಗೆ ಬಂದು ಕಲಾನಿಧಿಗೆ ಹಾಡಿದ್ದಾರೆ. ಹರಿಹರನ್, ಶಂಕರ್ ಮಹಾದೇವನ್ ಎಲ್ಲರೂ ಹಾಡಿದ್ದಾರೆ. ಮೊಬೈಲ್ ಮೂಲಕವೇ ಸಂಗೀತವನ್ನು ಆಸ್ವಾದಿಸಬಹುದು. ಅಗತ್ಯವಾದ ಸಹಾಯವನ್ನು ಮಾಡಬಹುದು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಡಿಸಿಎಂ ಅಶ್ವಥ್ ನಾರಾಯಣ್ ಮಾತನಾಡಿ, ಕಲಾನಿಧಿ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಇದು ನಾಳೆ, ನಾಡಿದ್ದು, ಆಚೆನಾಡಿದ್ದು ಪ್ರಸಾರವಾಗಲಿದೆ. ಕಲಾವಿದರ ನೆರವಿಗಾಗಿ ಇದನ್ನು ರೂಪಿಸಲಾಗಿದೆ. ಇದಕ್ಕೆ ನಾಡಿನ ಜನರ ಸಹಕಾರ ಬೇಕಿದೆ. ಕಲಾವಿದರ ನೆರವಿಗೆ ಸಹಾಯ ಹಸ್ತ ಚಾಚಬೇಕಿದೆ ಈ ಮೂಲಕ ಕಲಾವಿದರಿಗೆ ಗೌರವ ಸಲ್ಲಿಸೋಣ. ಸಂಕಷ್ಟದಲ್ಲಿರುವ ಕಲಾವಿದರಿಗೆ ನೆರವಾಗೋಣ. ಅವರ ಅಕೌಂಟಿಗೆ ನೇರವಾಗಿ ಹಣ ಸಂದಾಯವಾಗಲಿದೆ. ಎಲ್ಲಿಯೂ ದೇಣಿಗೆ ಹಣ ದುರುಪಯೋಗವಾಗುವುದಿಲ್ಲ ಎಂದು ಭರವಸೆ ನೀಡಿದರು.
ಗಾಯಕ ವಿಜಯಪ್ರಕಾಶ್ ಮಾತನಾಡಿ, ಈ ಕಲಾನಿಧಿಯ ನಿಧಿ ನಿಜವಾಗಿ ಕಲಾವಿದರಿಗೆ ಸಲ್ಲಲಿದೆ. ಸಮಾಜದಲ್ಲಿ ಹಲವರು ಕಷ್ಟ ಅನುಭವಿಸುತ್ತಿದ್ದು,ಇವರ ಜೊತೆ ಕಲಾವಿದರೂ ಸಹ ಕಷ್ಟದಲ್ಲಿದ್ದಾರೆ. ಇದಕ್ಕೆ ಪರಿಹಾರವಾಗಿ ಸಿಕ್ಕಿದ್ದೇ ಕಲಾನಿಧಿ ಕಾರ್ಯಕ್ರಮ. ಕಲಾವಿದರು ಪ್ರತಿನಿತ್ಯ ಕನಸಿನಲ್ಲೇ ಇರುತ್ತೇವೆ. ಎಲ್ಲಾ ಕಲಾವಿದರು ಇದರಲ್ಲಿ ಹಾಡಿದ್ದಾರೆ. ಒಂದು ರೂ. ಪಡೆಯದೆ ಕಲಾವಿದರಿಗಾಗಿ ಹಾಡಿಹೋಗಿದ್ದಾರೆ.
ಇದರಿಂದ ಸಂಗ್ರಹವಾಗುವ ನಿಧಿ ಎಲ್ಲರಿಗೆ ಹಂಚುತ್ತೇವೆ. ಜನರು 5 ರೂ. ಕೊಟ್ಟರು ಅದು ಮಹಾ ದೇಣಿಗೆಯಾಗಲಿದೆ ಎಂದು ಜನರಿಗೆ ಗಾಯಕ ವಿಜಯ ಪ್ರಕಾಶ್ ಮನವಿ ಮಾಡಿದರು.
Advertisement