ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಿಂದ ಅರಸೀಕೆರೆ ಜೆಡಿಎಸ್ ಕಾನ್ಸಿಲರ್ ಗೆ 10 ಲಕ್ಷ ರೂ. ಆಮಿಷ: ಹೆಚ್.ಡಿ. ರೇವಣ್ಣ
ಹಾಸನ: ಅರಸೀಕೆರೆ ನಗರಸಭೆಯ ಜೆಡಿಎಸ್ ಕೌನ್ಸಿಲರ್ ಬಿಜೆಪಿ ಸೇರಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್ ಆರ್ ಸಂತೋಷ 10 ಲಕ್ಷ ರೂ. ಆಮಿಷವೊಡ್ಡಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಗುರುವಾರ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತೋಷ್, ತಮ್ಮ ಬೆಂಬಲಿಗರಾದ ಸಿಕಂಧರ್ ಮತ್ತು ಹರ್ಷವರ್ಧನ್ ಅವರ ಮೂಲಕ ವಾರ್ಡ್ ನಂ 3 ರ ಜೆಡಿಎಸ್ ಕೌನ್ಸಿಲರ್ ಕಲೈರಾಸಿ ಅವರ ಮನೆಗೆ 10 ಲಕ್ಷ ರೂ. ಕಳುಹಿಸಿದ್ದಾರೆ ಎಂದು ಹೇಳಿದರು. ಸಂತೋಷ್ , ಕಲೈರಸಿಗೆ ನೀಡಿದ್ದ 10 ಲಕ್ಷ ರೂ.ಗಳನ್ನು ಪ್ರದರ್ಶಿಸಿದ ರೇವಣ್ಣ ರಾಜ್ಯ ಸರ್ಕಾರ, ಇದನ್ನು ಸಿಬಿಐಗೆ ವಹಿಸಬೇಕು ಮತ್ತು ಯಾವುದೇ ಪಕ್ಷಪಾತವಿಲ್ಲದೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಅರಸೀಕರೆ ನಗರಸಭೆಯ ಜೆಡಿಎಸ್ ಕೌನ್ಸಿಲರ್ ಗಳಾದ ಹರ್ಷವರ್ಧನ್, ಚಂದ್ರಶೇಖರಯ್ಯ, ಕವಿತಾದೇವಿ, ದರ್ಶನ್, ವಿಧಾದರ್ ಮತ್ತು ಆಯಿಷ ಸೈಯದ್ ಸಿಕಾಂದರ್ ಅವರಿಗೆ ದೊಡ್ಡ ಮೊತ್ತದ ಹಣ ಹಾಗೂ ಮುಂದೆ 1 ಕೋಟಿ ಮೊತ್ತದ ಸಿವಿಲ್ ಗುತ್ತಿಗೆ ಆಮಿಷವನ್ನು ಈಗಾಗಲೇ ಸಂತೋಷ್ ವೊಡ್ಡಿದ್ದಾರೆ ಎಂದು ಆರೋಪಿಸಿದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದು ಅರಸೀಕೆರೆಯಲ್ಲಿ ಸ್ಪರ್ಧಿಸಲು ಸಂತೋಷ್ ಯೋಜಿಸುತ್ತಿದ್ದು, ನಗರಸಭೆ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದ್ದಾರೆ ಎಂದು ಹೆಚ್ ಡಿ ರೇವಣ್ಣ ಹೇಳಿದರು.
ಬಿಜೆಪಿಗೆ ಸೇರ್ಪಡೆಯಾದರೆ 1 ಕೋಟಿ ಮೊತ್ತದ ಸಿವಿಲ್ ಗುತ್ತಿಗೆ ನೀಡುವುದಾಗಿ ತಮ್ಮ ಪತಿ ಸುಧಾಕರ್ ಅವರಿಗೆ ಸಂತೋಷ್ ಭರವಸೆ ನೀಡಿರುವುದಾಗಿ ಕಲೈರಾಸಿ ಹೇಳಿದರು. ಸಂತೋಷ್ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ತಡೆಯುತ್ತಿದ್ದಾರೆ. ಇದರ ಬಗ್ಗೆ ತನಿಖೆ ನಡೆಯಬೇಕು ಮತ್ತು ಇದನ್ನು ಮುಖ್ಯಮಂತ್ರಿ ಗಂಭೀರವಾಗಿ ಪರಿಗಣಿಸಬೇಕು ಎಂದು ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡ ಒತ್ತಾಯಿಸಿದರು.
ಈ ಸಂಬಂಧ ಸಂತೋಷ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಕಲೈರಾಸಿ ದೂರು ದಾಖಲಿಸಿದ್ದಾರೆ. ರಾಜ್ಯಪಾಲರು, ಮುಖ್ಯಮಂತ್ರಿ, ಗೃಹ ಸಚಿವರು, ಡಿಜಿ ಐಜಿ, ಎಸ್ ಪಿ ಮತ್ತು ಹಾಸನ ಜಿಲ್ಲಾಧಿಕಾರಿಗಳಿಗೆ ದೂರಿನ ಪ್ರತಿಗಳನ್ನು ಕಳುಹಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ