ಹೊಸ ವೈರಾಣು ಪತ್ತೆಗೆ ಜೀನೋಮ್ ಸೀಕ್ವೆನ್ಸ್ ಈ ವರೆಗೆ 600 ಮಾದರಿಗಳು ಪರೀಕ್ಷೆಗೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಕೋವಿಡ್ ಹೊಸ ವೈರಾಣು ನಿಯಂತ್ರಣಕ್ಕೆ ಜೀನೋಮ್ ಸೀಕ್ವೆನ್ಸ್ ಮಾಡುತ್ತಿದ್ದು, 600 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಆರೋಗ್ಯ ಸಚಿವ ಡಾ. ಕೆ. ಸುಧಾಕರ್
ಆರೋಗ್ಯ ಸಚಿವ ಡಾ. ಕೆ. ಸುಧಾಕರ್
Updated on

ಬೆಂಗಳೂರು/ಚಿಕ್ಕಬಳ್ಳಾಪುರ: ಕೋವಿಡ್ ಹೊಸ ವೈರಾಣು ನಿಯಂತ್ರಣಕ್ಕೆ ಜೀನೋಮ್ ಸೀಕ್ವೆನ್ಸ್ ಮಾಡುತ್ತಿದ್ದು, 600 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಡೆಲ್ಟಾ ಪ್ಲಸ್ ವೈರಾಣು ಸೋಂಕಿನ ಇಬ್ಬರು ಸೋಂಕಿತರು ಪತ್ತೆಯಾಗಿದ್ದಾರೆ. ಇನ್ನೂ 600 ಮಾದರಿಗಳನ್ನು ಜಿನೋಮ್ ಸೀಕ್ವೆನ್ಸ್ ಗೆ ಕಳುಹಿಸಲಾಗಿದೆ. ಈ ವರದಿ ಇಂದು ಬರಲಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳಲ್ಲಿ ಇರುವಂತಹ ಕೊರೊನಾ ಆತಂಕ ನಮ್ಮಲ್ಲಿ ಇನ್ನೂ ಬಂದಿಲ್ಲ. ಆದರೆ ಮಹಾರಾಷ್ಟ್ರ ಮತ್ತು ಕೇರಳ ಗಡಿಭಾಗದ ಜಿಲ್ಲೆಗಳಲ್ಲಿ ವಿಶೇಷ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ. ರಾಜ್ಯಕ್ಕೆ ಪ್ರವೇಶಿಸುವವರಿಗೆ ರಾಂಡಮ್ ಆಗಿ ಪರೀಕ್ಷೆ ಮಾಡಲು ಸೂಚಿಸಲಾಗಿದೆ ಎಂದರು.

ಬೆಂಗಳೂರಿನಲ್ಲಿ 50 ಲಕ್ಷಕ್ಕೂ ಅಧಿಕ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ದೇಶದ ಯಾವುದೇ ನಗರದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಲಸಿಕೆ ನೀಡಿಲ್ಲ. ಹೀಗಾಗಿ ಇದೊಂದು ದಾಖಲೆಯಾಗಿದೆ. ರಾಜ್ಯದಲ್ಲಿ ಮೊದಲನೇ ಡೋಸ್ ಪಡೆದವರ ಪ್ರಮಾಣ ಶೇ.40 ರಷ್ಟಿದೆ (1.85 ಕೋಟಿ). 45  ಲಕ್ಷಕ್ಕೂ ಹೆಚ್ಚು ಜನರು ಎರಡೂ ಡೋಸ್ ಪಡೆದಿದ್ದಾರೆ. ಲಸಿಕೆ ನೀಡಲು ಆದ್ಯತೆಯಲ್ಲಿ ಕೆಲ ಗುಂಪುಗಳನ್ನು ರಚಿಸಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯಡಿ ವಿದ್ಯಾರ್ಥಿಗಳು, ಆರೋಗ್ಯ ಸಿಬ್ಬಂದಿಯ ಕುಟುಂಬದವರು, ಪೊಲೀಸರ ಕುಟುಂಬದವರು, ಮಾಧ್ಯಮದವರು, ಹೀಗೆ ಜನಸಂಪರ್ಕ ಹೆಚ್ಚು ಇರುವವರನ್ನು ರಕ್ಷಣೆ ಮಾಡಲು ಆದ್ಯತೆ ನೀಡಲಾಗಿದೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪಾಲಕರಿಗೆ ಪ್ರಾಶಸ್ತ್ಯದಲ್ಲಿ ಲಸಿಕೆ ನೀಡಲಾಗುವುದು ಎಂದರು.

ಬೇರೆ ರಾಜ್ಯಗಳಿಂದ ಬರುವವರನ್ನು ನೂರಕ್ಕೆ ನೂರು ವೈದ್ಯಕೀಯ ತಪಾಸಣೆ ಮಾಡಲು ಸಾಧ್ಯವಾಗುತ್ತಿಲ್ಲ. ಆದರೂ ಸಾಧ್ಯವಾದಷ್ಟು ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಕೇರಳ ಒಂದರಿಂದಲೇ ಕೆಲವು ಲಕ್ಷ ಜನರು ರಾಜ್ಯದೊಳಗೆ ಬರುತ್ತಿದ್ದಾರೆ. ಆದರೂ ಇದನ್ನು ಗಂಭೀರವಾಗಿ ಪರಿಗಣಿಸಿ ಸಾಧ್ಯವಾದಷ್ಟು ಜನರಿಗೆ ಪರೀಕ್ಷೆ ಮಾಡಲಾಗುತ್ತಿದೆ. ಜನರು ಲಸಿಕೆ ಪಡೆಯಲೇಬೇಕು. ಪಡೆದ ನಂತರವೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಇದರಿಂದಲೇ ಕೋವಿಡ್ ನಿಂದ ದೂರವಿರಲು ಸಾಧ್ಯ ಎಂದರು.

ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಜಟಾಪಟಿ ಹೊಸದಲ್ಲ. ಅದು ಹುಟ್ಟಿದಾಗಿನಿಂದಲೂ ಇದೆ. ದಲಿತ ಸಿಎಂ ಬಗ್ಗೆ ಅವರು ಹೇಳುತ್ತಾರೆಯೋ ಹೊರತು ಅವರು ಮಾಡುವುದಿಲ್ಲ. ಕಾಂಗ್ರೆಸ್ ನವರು ಪ್ರಧಾನಿ, ಮುಖ್ಯಮಂತ್ರಿ ಸ್ಥಾನಕ್ಕೆ ದಲಿತರನ್ನು ಆರಿಸುವುದಿಲ್ಲ. ಅಲ್ಪಸಂಖ್ಯಾತರ ಶೈಕ್ಷಣಿಕ ಆರ್ಥಿಕ, ಸಾಮಾಜಿಕ ಉದ್ದಾರಕ್ಕೂ ಕಾಂಗ್ರೆಸ್ ನವರು ಏನೂ ಮಾಡಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಶಿಸ್ತುಬದ್ಧವಾಗಿ ಪ್ರತಿ ಸಮುದಾಯಕ್ಕೆ ಕಾರ್ಯಕ್ರಮ ನೀಡಿ ಬದಲಾವಣೆ ತರುವ ಪ್ರಯತ್ನ ಮಾಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಮಕ್ಕಳ ದತ್ತು

ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡ ಚಿಕ್ಕಬಳ್ಳಾಪುರ ಜಿಲ್ಲೆಯ 9 ಮಕ್ಕಳನ್ನು ಸಚಿವರು ದತ್ತು ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಸಚಿವರು, ಜಿಲ್ಲಾಡಳಿತಕ್ಕೆ ಈ ಕುರಿತು ಮಾಹಿತಿ ನೀಡಲಾಗಿದೆ. ಈ ಮಕ್ಕಳ ಶೈಕ್ಷಣಿಕ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಪ್ರತಿ ಮಕ್ಕಳಿಗೆ ತಲಾ 1 ಲಕ್ಷ ರೂ. ನೀಡಲಾಗಿದೆ. ಎಲ್ಲ ಜಿಲ್ಲೆಗಳಲ್ಲಿ ಈ ರೀತಿ ದತ್ತು ಪಡೆಯುವ ಅಗತ್ಯವಿದೆ. ಮುಖ್ಯಮಂತ್ರಿಗಳು ಇದಕ್ಕಾಗಿ ಯೋಜನೆಯನ್ನು ಈಗಾಗಲೇ ಜಾರಿ ಮಾಡಿದ್ದಾರೆ ಎಂದರು.

ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಸಾವಿಗೀಡಾದ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಲಾಗುವುದು ಎಂದರು.

ಇದೇ ವೇಳೆ ಶ್ರೀ ಸಾಯಿಕೃಷ್ಣ ಚಾರಿಟೇಬಲ್ ಟ್ರಸ್ಟ್ ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವರು 47 ಲ್ಯಾಪ್ ಟಾಪ್ ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.

ಸರ್ವರಿಗೂ ಸಮಬಾಳು ನೀಡಿದ ಕೆಂಪೇಗೌಡರು

ಚಿಕ್ಕಬಳ್ಳಾಪುರದಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ನಾಡಪ್ರಭು ಕೆಂಪೇಗೌಡರು ಜಾತಿ, ಸಮುದಾಯ ನೋಡದೆ ಲೋಕಕಲ್ಯಾಣಕ್ಕಾಗಿ ಕ್ರಮ ಕೈಗೊಂಡರು. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಉದ್ದೇಶದ ಆಡಳಿತವನ್ನು ಕೆಂಪೇಗೌಡರು ಆರಂಭಿಸಿದರು. ವೈಜ್ಞಾನಿಕವಾಗಿ ಬೆಂಗಳೂರು ನಗರವನ್ನು ನಿರ್ಮಿಸಿ ಬೆಳೆಸಿದರು. ಒಂದೊಂದು ವರ್ಗಕ್ಕೂ  ಒಂದೊಂದು ಪೇಟೆಗಳನ್ನು ಕಟ್ಟಿದರು. ಅವರ ಆಶಯಗಳಿಗೆ ತಕ್ಕಂತೆ ಜಾತ್ಯತೀತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು.

ಬೆಂಗಳೂರಿಗೆ ಪರ್ಯಾಯವಾಗಿ ಚಿಕ್ಕಬಳ್ಳಾಪುರವನ್ನು ಬೆಳೆಸಬೇಕು. ಕೆಲ ಪ್ರಮುಖ ಕೈಗಾರಿಕೆಗಳನ್ನು ಇಲ್ಲಿಗೆ ತರಲಾಗುತ್ತಿದೆ. ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಿಸುತ್ತಿದ್ದು, ಮುಂದಿನ ವರ್ಷ ಉದ್ಘಾಟನೆಯಾಗಲಿದೆ. ಜಿಲ್ಲೆಯಲ್ಲಿ ಮೂರು ಕಡೆ 28 ಕೋಟಿ ರೂ. ಖರ್ಚು ಮಾಡಿ ಅಂತಾರಾಷ್ಟ್ರೀಯ ದರ್ಜೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com