ಮುಂದಿನ ವರ್ಷದಿಂದ ಕೆಂಪೇಗೌಡ ಜಯಂತಿಯನ್ನು 3 ದಿನಗಳ ‘ಬೆಂಗಳೂರು ಹಬ್ಬ’ವಾಗಿ ಆಚರಣೆ: ಡಾ. ಸಿ.ಎನ್.‌ ಅಶ್ವತ್ಥನಾರಾಯಣ್

ಮುಂದಿನ ವರ್ಷದಿಂದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಮೂರು ದಿನಗಳ ಕಾಲ ʼಬೆಂಗಳೂರು ಹಬ್ಬʼವನ್ನಾಗಿ ಆಚರಿಸಲಾಗುವುದು ಎಂದು ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ್ ಅವರು ಭಾನುವಾರ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮುಂದಿನ ವರ್ಷದಿಂದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಮೂರು ದಿನಗಳ ಕಾಲ ʼಬೆಂಗಳೂರು ಹಬ್ಬʼವನ್ನಾಗಿ ಆಚರಿಸಲಾಗುವುದು ಎಂದು ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ್ ಅವರು ಭಾನುವಾರ ಹೇಳಿದ್ದಾರೆ.

ನಾಡಪ್ರಭು ಕೆಂಪೇಗೌಡರ 512ನೇ ಜಯಂತಿ ನಿಮಿತ್ತ ವಿಧಾನಸೌಧ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ಜಯಂತಿ ಆಚರಣೆಯಲ್ಲಿ ಅಂಚೆ ಲಕೋಟೆ ಲೋಕಾರ್ಪಣೆ ಹಾಗೂ ಅಧ್ಯಯನ ಕೇಂದ್ರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿ ವರ್ಷ ಜೂನ್ 27ರಂದು ನಾಡಪ್ರಭುಗಳ ಜಯಂತಿಯನ್ನು ಆಚರಿಸಲಾಗುತ್ತದೆ. ಜೂನ್ 26, 27 ಮತ್ತು 28ರಂದು, ಅಂದರೆ 3 ದಿನಗಳ ಕಾಲ ಅವರ ಜಯಂತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ 'ಬೆಂಗಳೂರು ಹಬ್ಬ'ದ ಹೆಸರಿನಲ್ಲಿ ಆಚರಿಸಲಾಗುವುದು. ಆ ಮೂರೂ ದಿನಗಳ ಕಾಲ ಬೆಂಗಳೂರು ನಗರದಲ್ಲಿನ ಎಲ್ಲ ಪಾರಂಪರಿಕ ತಾಣ, ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ ವಿಶ್ವವಿಖ್ಯಾತ ಹಬ್ಬದ ಮಾದರಿಯಲ್ಲಿ ಆಚರಿಸಲಾಗುವುದು ಎಂದು ಹೇಳಿದ್ದಾರೆ. 

‘ಬೆಂಗಳೂರು ಆಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ 23 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಕೆಂಪೇಗೌಡರ 108 ಎಡಿ ಎತ್ತರದ ಲೋಹದ ಪ್ರತಿಮೆಯನ್ನು ಮುಂದಿನ ವರ್ಷದ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಲೋಕಾರ್ಪಣೆ ಮಾಡಲಾಗುವುದು. ಕೋವಿಡ್‌ ಕಾರಣದಿಂದ ಈ ವರ್ಷ ಲೋಕಾರ್ಪಣೆ ಸಾಧ್ಯವಾಗಿಲ್ಲ. ನೋಯಿಡಾದಲ್ಲಿ ಪ್ರತಿಮೆ ನಿರ್ಮಾಣ ಭರದಿಂದ ನಡೆಯುತ್ತಿದೆ’ ಎಂದು ವಿವರಿಸಿದರು.

ಬೆಂಗಳೂರು ನಗರದ ಸುತ್ತಮುತ್ತ ಈಗಲೂ 15 ಸಾವಿರ ಹೆಕ್ಟೇರ್‌ ದಟ್ಟ ಅರಣ್ಯವಿದೆ. ಅದರ ಜತೆಗೆ ರಾಜಧಾನಿಯ ಸುತ್ತಮುತ್ತಲಿನಲ್ಲಿ ಕೆಂಪೇಗೌಡರಿಗೆ ಸಂಬಂಧಿಸಿದ 46 ಪಾರಂಪರಿಕ ತಾಣಗಳಿವೆ. ಎಲ್ಲವನ್ನೂ ಅನುಸಂಧಾನಗೊಳಿಸಿ ಪ್ರವಾಸೋದ್ಯಮ ಸರ್ಕ್ಯೂಟ್ ಮಾಡಲು ಉದ್ದೇಶಿಸಲಾಗಿದೆ. ಇನ್ನೆರಡು ವರ್ಷದೊಳಗೆ ಈ ಯೋಜನೆಯನ್ನು ಜಾರಿಗೆ ತರಲಾಗುವುದು.

ಕೆಂಪೇಗೌಡರ ವೀರ ಸಮಾಧಿ ಇರುವ ಮಾಗಡಿ ತಾಲ್ಲೂಕಿನ ಕೆಂಪಾಪುರವನ್ನು ಜಾಗತಿಕ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ ಟೆಂಡರ್‌ ಪ್ರಕ್ರಿಯೆ ಮುಗಿದು ಭೂಸ್ವಾಧೀನ ನಡೆಯುತ್ತಿದೆ. ಮುಂದಿನ ವರ್ಷದ ಜಯಂತಿ ಕಾರ್ಯಕ್ರಮವನ್ನು ಸಮಾಧಿಯ ಎದುರು ಆಚರಿಸುವ ಸಂಕಲ್ಪ ಸರ್ಕಾರದ್ದು ಎಂದು ತಿಳಿಸಿದರು.

ಈ ನಡುವೆ ಜ್ಞಾನಭಾರತಿಯಲ್ಲಿ ನಿರ್ಮಾಣ ಆಗುತ್ತಿರುವ ಕೆಂಪೇಗೌಡ ಅಧ್ಯಯನ ಕೇಂದ್ರದ ನಿರ್ಮಾಣ ಕಾಮಗಾರಿಗೆ ವರ್ಚುಯಲ್‌ ಮೂಲಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಚಾಲನೆ ನೀಡಿ, ನಾಡಪ್ರಭುಗಳ ಅಂಚೆ ಲಕೋಟೆ ಲೋಕಾರ್ಪಣೆ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com