ರಾಜ್ಯ ಸರ್ಕಾರದಿಂದ 4 ಸಾವಿರ ವೈದ್ಯರ ನೇಮಕ: ಐತಿಹಾಸಿಕ ಕ್ರಮ ಎಂದ ಆರೋಗ್ಯ ಸಚಿವ ಡಾ. ಕೆ.ಸುಧಾಕರ್

ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯ ಸೇವೆ ಸಲ್ಲಿಕೆ ಕ್ರಮ ಅನುಷ್ಠಾನಗೊಂಡಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳ ವಿವಿಧ ಹುದ್ದೆಗಳಿಗೆ 2,053 ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಲಾಗಿದೆ.
ಡಾ ಕೆ ಸುಧಾಕರ್
ಡಾ ಕೆ ಸುಧಾಕರ್
Updated on

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯ ಸೇವೆ ಸಲ್ಲಿಕೆ ಕ್ರಮ ಅನುಷ್ಠಾನಗೊಂಡಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳ ವಿವಿಧ ಹುದ್ದೆಗಳಿಗೆ 2,053 ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಲಾಗಿದೆ. ಇತ್ತೀಚೆಗೆ ಪೂರ್ಣಗೊಂಡ 1,750 ವೈದ್ಯರ ಐತಿಹಾಸಿಕ ನೇರ ನೇಮಕಾತಿ ಸೇರಿದಂತೆ ಕೊರೊನಾ ಸಂದರ್ಭದಲ್ಲಿ ರಾಜ್ಯ ಸರ್ಕಾರ ಒಟ್ಟು 4,000 ವೈದ್ಯರನ್ನ ನೇಮಿಸಿಕೊಂಡಿದೆ, ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಎಂಬಿಬಿಎಸ್ ಪದವೀಧರರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯ ಒಂದು ವರ್ಷ ಸೇವೆ ಸಲ್ಲಿಸುವ ಕ್ರಮವನ್ನು ಅನುಷ್ಠಾನಕ್ಕೆ ತರಲಾಗಿದೆ. 1,001 ವೈದ್ಯರನ್ನು 18 ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಗುತ್ತಿಗೆ ನೇಮಕ ಮಾಡಲಾಗಿದೆ. ಆರೋಗ್ಯ ಇಲಾಖೆಯ ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳ ಐಸಿಯುನಲ್ಲಿ ಕೆಲಸ ಮಾಡಲು 666 ವೈದ್ಯರನ್ನು ನೇಮಕ ಮಾಡಲಾಗಿದೆ. ಜೂನ್ 30 ರೊಳಗೆ ಅವರೆಲ್ಲರೂ ಸ್ಥಳಕ್ಕೆ ಹೋಗಿ ಕೆಲಸ ಆರಂಭಿಸಲಿದ್ದಾರೆ ಎಂದು ತಿಳಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 348 ವೈದ್ಯರ ಹುದ್ದೆ ತುಂಬಲಾಗಿದೆ. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 90, ನೆಫ್ರೋ ಯುರಾಲಜಿಯಲ್ಲಿ 3 ವೈದ್ಯರನ್ನು ನೇಮಿಸಲಾಗಿದೆ. ಒಟ್ಟು 2,108 ಖಾಲಿ ಹುದ್ದೆ ಇದ್ದು, 2,053 ವೈದ್ಯರು ನೇಮಕಗೊಂಡಿದ್ದಾರೆ. ಇತ್ತೀಚೆಗೆ ನಡೆಸಿದ ನೇರ ನೇಮಕವೂ ಸೇರಿ ಒಟ್ಟು ನಾಲ್ಕು ಸಾವಿರದಷ್ಟು ವೈದ್ಯರ ನೇಮಕ ನಡೆದಿದೆ. ಇದು ಐತಿಹಾಸಿಕವಾದ ಪ್ರಕಿಯೆ ಎಂದರು. 

ರಾಜ್ಯದಲ್ಲಿ ಶೇ.95 ರಷ್ಟು ಮಂದಿ ಕೋವಿಡ್ ನಿಂದ ಗುಣಮುಖರಾಗಿರುವುದು ಆಶಾದಾಯಕವಾಗಿದೆ. ಪಾಸಿಟಿವಿಟಿ ದರ ಶೇ.2.62 ರಷ್ಟಿದೆ. ಕೊಡಗು, ಮೈಸೂರು, ಹಾಸನ ಹಾಗೂ ದಕ್ಷಿಣ ಕನ್ನಡದಲ್ಲಿ ಪಾಸಿಟಿವಿಟಿ ದರ ಶೇ.5 ಕ್ಕಿಂತ ಅಧಿಕವಾಗಿದೆ. ಇಡೀ ದೇಶದಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರ ಬಿಟ್ಟರೆ ಹೆಚ್ಚು ಕೋವಿಡ್ ಪರೀಕ್ಷೆ ರಾಜ್ಯದಲ್ಲಾಗಿದೆ. ರಾಜ್ಯದಲ್ಲಿ 3,36,73,395 ಪರೀಕ್ಷೆ ಮಾಡಲಾಗಿದೆ. ಅಂದರೆ ಪ್ರತಿದಿನ ಒಂದೂವರೆ ಲಕ್ಷದಿಂದ ಒಂದೂಮುಕ್ಕಾಲು ಲಕ್ಷ ಪರೀಕ್ಷೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

11 ಜಿಲ್ಲೆಗಳಲ್ಲಿ ಕೋವಿಡ್ ನಿಂದ ಮರಣ ಸಂಭವಿಸಿಲ್ಲ. ಒಟ್ಟಾರೆಯಾಗಿ ಕೂಡ ಸಾವಿನ ಸಂಖ್ಯೆ ಕಡಿಮೆಯಾಗುತ್ತಿದೆ. ಡಿಆರ್ ಡಿಒ ಜೊತೆ ಕೆಲಸ ಮಾಡುತ್ತಿರುವ ಡಾ.ರೆಡ್ಡೀಸ್ ಲ್ಯಾಬೋರೇಟರೀಸ್ 2ಡಿಜಿ ಔಷಧಿ ಬಿಡುಗಡೆಗೊಳಿಸಿದ್ದು, ಅದನ್ನು ಖರೀದಿ ಮಾಡಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ. ಮೂರನೇ ಅಲೆ ಬರುವ ಮುನ್ನವೇ ಈ ಔಷಧಿ ಖರೀದಿಸಲಾಗುವುದು ಎಂದು ಮಾಹಿತಿ ನೀಡಿದರು.

ಬೋಧಕ, ಬೋಧಕೇತರ ಸಿಬ್ಬಂದಿಗೆ ಕೊರೊನಾ ಲಸಿಕೆ ನೀಡಲು ಆರೋಗ್ಯ ಇಲಾಖೆ ಸಹಕಾರ ನೀಡಲಿದೆ. ತಾಂತ್ರಿಕ ಸಲಹಾ ಸಮಿತಿಯ ತಜ್ಞರು ಈ ಬಗ್ಗೆ ಸಲಹೆ ನೀಡುತ್ತಾರೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com