ಆಕ್ಸಿಜನ್ ಬಿಕ್ಕಟ್ಟು: ಅನುಮತಿ ಪಡೆಯದೆ ಆಸ್ಪತ್ರೆ ಬೆಡ್ ಗಳನ್ನು ಹೆಚ್ಚಿಸದಂತೆ ಮುಖ್ಯ ಕಾರ್ಯದರ್ಶಿ ಸೂಚನೆ

ರಾಜ್ಯದಲ್ಲಿ ಈಗಿರುವ ಬೆಡ್ ಗಳಿಗೆ ಅಗತ್ಯವಿರುವಷ್ಟು ಆಮ್ಲಜನಕ ಮಾತ್ರ ಲಭ್ಯವಿದ್ದು, ಅನುಮತಿ ಪಡೆಯದೇ ಬೆಡ್ ಗಳನ್ನು ಅಥವಾ ಕೋವಿಡ್-19 ರೋಗಿಗಳಿಗೆ ಅಗತ್ಯವಿರುವ ವೈದ್ಯಕೀಯ ಮೂಲಸೌಕರ್ಯವನ್ನು ಹೆಚ್ಚಿಸದಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ. 
ಆಮ್ಲಜನಕ ಬಿಕ್ಕಟ್ಟು: ಆಸ್ಪತ್ರೆ ಬೆಡ್ ಗಳನ್ನು ಅನುಮತಿ ಪಡೆಯದೇ ಹೆಚ್ಚಿಸದಂತೆ ಮುಖ್ಯಕಾರ್ಯದರ್ಶಿಗಳ ಸೂಚನೆ
ಆಮ್ಲಜನಕ ಬಿಕ್ಕಟ್ಟು: ಆಸ್ಪತ್ರೆ ಬೆಡ್ ಗಳನ್ನು ಅನುಮತಿ ಪಡೆಯದೇ ಹೆಚ್ಚಿಸದಂತೆ ಮುಖ್ಯಕಾರ್ಯದರ್ಶಿಗಳ ಸೂಚನೆ
Updated on

ಬೆಂಗಳೂರು: ರಾಜ್ಯದಲ್ಲಿ ಈಗಿರುವ ಬೆಡ್ ಗಳಿಗೆ ಅಗತ್ಯವಿರುವಷ್ಟು ಆಮ್ಲಜನಕ ಮಾತ್ರ ಲಭ್ಯವಿದ್ದು, ಅನುಮತಿ ಪಡೆಯದೇ ಬೆಡ್ ಗಳನ್ನು ಅಥವಾ ಕೋವಿಡ್-19 ರೋಗಿಗಳಿಗೆ ಅಗತ್ಯವಿರುವ ವೈದ್ಯಕೀಯ ಮೂಲಸೌಕರ್ಯವನ್ನು ಹೆಚ್ಚಿಸದಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ. 

ರಾಜ್ಯದಲ್ಲಿ ಆಕ್ಸಿಜನ್ ಸಹಿತ ಬೆಡ್ ಗಳ ಸಂಖ್ಯೆ ಹೆಚ್ಚಾದಲ್ಲಿ ಈಗಿರುವ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ (ಎಲ್ಎಂಒ) ಪೂರೈಕೆ ಮೇಲೆ ಒತ್ತಡ ಬೀಳಲಿದ್ದು, ಅಲಭ್ಯತೆ ಕಾಡುತ್ತದೆ. ಆದ್ದರಿಂದ ಇರುವ ಬೆಡ್ ಗಳಲ್ಲೇ ಪರಿಸ್ಥಿತಿ ನಿಭಾಯಿಸಬೇಕೆಂದು ಪತ್ರದಲ್ಲಿ ಜಿಲ್ಲಾಧಿಕಾರಿಗಳಿಗೆ ರವಿಕುಮಾರ್ ಮಾಹಿತಿ ನೀಡಿದ್ದಾರೆ. 

ಈಗಿರುವ ಪರಿಸ್ಥಿತಿಯಲ್ಲಿ ಹೆಚ್ಚುವರಿ ಪೂರೈಕೆ ಸಾಧ್ಯವಿಲ್ಲ. ಒಂದು ವೇಳೆ ಬೆಡ್ ಗಳನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಉಂಟಾದಲ್ಲಿ ಹೆಚ್ಚುವರಿ ಮುಖ್ಯಕಾರ್ಯದರ್ಶಿ (ಎಸಿಎಸ್) ಗೆ ಮಾಹಿತಿ ನೀಡಿ ಅನುಮತಿ ಪಡೆದು, ಆಕ್ಸಿಜನ್ ಸರಿದೂಗಿಸುವುದಕ್ಕೆ ತಕ್ಕಂತೆ ಹೆಚ್ಚಿಸಬೇಕೆಂಬ ಸೂಚನೆ ನೀಡಲಾಗಿದೆ. 

ಈ ವಿಷಯವಾಗಿ ಜಿಲ್ಲಾಧಿಕಾರಿಗಳೊಬ್ಬರು ಷರತ್ತು ವಿಧಿಸಿ ಹೇಳಿಕೆ ನೀಡಿದ್ದು, "ನಮಗೆ ಮುಖ್ಯ ಕಾರ್ಯದರ್ಶಿಗಳಿಂದ ಆದೇಶ ಬಂದಿದೆ, ರೋಗಿಗಳು ಜಿಲ್ಲೆಯಲ್ಲಿ ಬೆಡ್ ಹಾಗು ಆಕ್ಸಿಜನ್ ನ್ನು ಹೆಚ್ಚಿಸುವಂತೆ ಒತ್ತಡ ಹೇರುತ್ತಿದ್ದಾರೆ. ಆದರೆ ಮುಖ್ಯಕಾರ್ಯದರ್ಶಿಗಳ ಆದೇಶ ಇದಕ್ಕೆ ವಿರುದ್ಧವಾಗಿದೆ. ಇರುವ ಬೆಡ್ ಗಳನ್ನೇ ಸರಿದೂಗಿಸಿಕೊಂಡು ಹೋಗಬೇಕಿದೆ. ಆಕ್ಸಿಜನ್ ಪೂರೈಕೆ ಸೀಮಿತವಾಗಿರುವುದರಿಂದ ಬೆಡ್ ಗಳ ಸಂಖ್ಯೆಯನ್ನು ಹೆಚ್ಚಿಸುತ್ತಲೇ ಇರುವುದಕ್ಕೆ ಸಾಧ್ಯವಿಲ್ಲ. ಒಂದೆಡೆ ಆಮ್ಲಜನಕಕ್ಕಾಗಿ ಬೇಡಿಕೆ ಹೆಚ್ಚುತ್ತಿದೆ. 

ಕೊನೆಯ ಕ್ಷಣದಲ್ಲಿ ಎಲ್ಎಂಒಗೆ ಬರುವ ಬೇಡಿಕೆಗಳಿಗೆ ವ್ಯವಸ್ಥೆ ಮಾಡುವುದು ಅತ್ಯಂತ ಕಷ್ಟವಾಗಿದೆ.  ಈಗಿರುವ 665 ಟನ್ ನಷ್ಟು ಎಲ್ಎಂಒ ಲಭ್ಯತೆಯ ಪೈಕಿ 600 ಟನ್ ನಷ್ಟು ಎಲ್ಎಂಒ ನ್ನು ಬಳ್ಳಾರಿ/ ಕೊಪ್ಪಳದಿಂದ ಪೂರೈಕೆ ಮಾಡಲಾಗುತ್ತಿದೆ. ಉಳಿದದ್ದು ಬೆಂಗಳೂರಿನಿಂದ ಪೂರೈಕೆ ಮಾಡಲಾಗುತ್ತಿದೆ.

ಹೀಗಾಗಿ ಆಕ್ಸಿಜನ್ ವ್ಯವಸ್ಥೆ ಮಾಡುವುದಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ. ಆದ್ದರಿಂದ ಎಲ್ಎಂಒ ಹೆಲ್ಪ್ ಡೆಸ್ಕ್ ಗಳನ್ನು ಜಿಲ್ಲಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ವ್ಯವಸ್ಥೆ ಮಾಡಲಾಗಿದೆ ಬೇಡಿಕೆಗೂ 24-48 ಗಂಟೆಗಳ ಮುನ್ನ ತಯಾರಿರುವ ಕೆಲಸ ಮಾಡಿ ಜಿಲ್ಲೆಗಳಿಗೆ ಪೂರೈಕೆಯನ್ನು ನಿಗದಿಪಡಿಸಲಾಗುತ್ತಿದೆ" ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com