ಚಾಮರಾಜನಗರ ದುರಂತದ ನಂತರ ಎಚ್ಚೆತ್ತ ಸರ್ಕಾರ: ಆಮ್ಲಜನಕ ಉತ್ಪಾದಕರ ಜೊತೆ ಸಿಎಂ ಸಭೆ

ಚಾಮರಾಜನಗರ ಆಕ್ಸಿಜನ್ ದುರಂತದ ಬೆನ್ನಲ್ಲೇ ರಾಜ್ಯ ಸರ್ಕಾರ ಕೆಲವೊಂದು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ದುರಂತದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸಿಎಂ ಬಿಎಸ್‌ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸೋಮವಾರ ಮಹತ್ವದ ಸಭೆ ನಡೆಯಿತು. 
ಯಡಿಯೂರಪ್ಪ
ಯಡಿಯೂರಪ್ಪ
Updated on

ಬೆಂಗಳೂರು: ಚಾಮರಾಜನಗರ ಆಕ್ಸಿಜನ್ ದುರಂತದ ಬೆನ್ನಲ್ಲೇ ರಾಜ್ಯ ಸರ್ಕಾರ ಕೆಲವೊಂದು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ದುರಂತದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸಿಎಂ ಬಿಎಸ್‌ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸೋಮವಾರ ಮಹತ್ವದ ಸಭೆ ನಡೆಯಿತು. 

ಭವಿಷ್ಯದಲ್ಲಿ ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಳ್ಳುವ ಹಾಗೂ ಇಂತಹ ದುರಂತಗಳು ಮತ್ತೆ ಸಂಭವಿಸದಂತೆ ತಡೆಯುವ ಸಲುವಾಗಿ ಸಿಎಂ ಯಡಿಯೂರಪ್ಪ ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಅಲ್ಲದೆ ಆಕ್ಸಿಜನ್ ಉತ್ಪಾದಕರು ಮತ್ತು ಸರಬರಾಜುದಾರರೂ ಇದ್ದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಇಲ್ಲದಂತೆ ಮಾಡಲು ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿರುವ ಸಿಎಂ, ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಘಟನೆ ಯಾವುದೇ ಜಿಲ್ಲೆಯಲ್ಲಿ ಮರುಕಳಿಸದಂತೆ ಎಚ್ಚರ ವಹಿಸಬೇಕೆಂದು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಜಿಲ್ಲಾ ಆಸ್ಪತ್ರೆಗಳ ಸ್ಥಿತಿ ಗತಿ ಬಗ್ಗೆ ವರದಿ ಸಂಗ್ರಹ ಮಾಡುವಂತೆ, ಔಷಧಿ ಕೊರತೆಯೂ ಎದುರಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಆಕ್ಸಿಜನ್ ಉತ್ಪಾದಕರು ಮತ್ತು ಸರಬರಾಜುದಾರರ ಸಭೆಯಲ್ಲಿ ಚರ್ಚಿಸಲಾದ ಅಂಶಗಳು ಹೀಗಿದೆ. ಕೇಂದ್ರ ಸರ್ಕಾರವು ಹಂಚಿಕೆ ಮಾಡಿರುವ ಆಕ್ಸಿಜನ್ ಕೋಟಾದಲ್ಲಿ ಯಾವುದೇ ರೀತಿ ಕಡಿತವಾಗದಂತೆ ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದು. ಆಕ್ಸಿಜನ್ ಟ್ಯಾಂಕರ್ ಗಳ ಫಿಲ್ಲಿಂಗ್ ಅವಧಿಯನ್ನು ಕಡಿತಗೊಳಿಸಲು ಕ್ರಮ ಕೈಗೊಳ್ಳುವುದು. ಆಕ್ಸಿಜನ್ ಟ್ಯಾಂಕರ್‌ಗಳ ತಡೆರಹಿತ ಪ್ರಯಾಣಕ್ಕಾಗಿ ಗ್ರಿನ್ ಕಾರಿಡಾರ್ ಗಳನ್ನು ಒದಗಿಸುವುದು.

ಟೋಲ್‍ಗಳಲ್ಲಿ ಅನಗತ್ಯ ವಿಳಂಬ ತಪ್ಪಿಸಲು ಟೋಲ್‍ಗಳಿಗೆ ನಿರ್ದೇಶನ ನೀಡುವುದು. ನೈಟ್ರೋಜನ್, ಆರ್ಗನ್ ಅನಿಲಗಳ ಸಾಗಣೆ ಟ್ಯಾಂಕರ್‍ಗಳನ್ನು ಆಕ್ಸಿಜನ್ ಸಾಗಣೆಗೆ ಪರಿವರ್ತಿಸಲು ಕ್ರಮವಹಿಸುವುದು. ತುರ್ತು ಅಗತ್ಯಕ್ಕಾಗಿ ಆಕ್ಸಿಜನ್ ವಾಹನಗಳ ಚಾಲನೆಗಾಗಿ ಎಲ್‍ಪಿಜಿ ಟ್ಯಾಂಕರ್‍ಗಳ ಚಾಲಕರ ಪಟ್ಟಿಯನ್ನು ಸಿದ್ಧಪಡಿಸಿಟ್ಟುಕೊಂಡು ಅಗತ್ಯವಿದ್ದಲ್ಲಿ ಅವರ ಸೇವೆಯನ್ನು  ಬಳಸಿಕೊಳ್ಳುವುದು.

ಆಕ್ಸಿಜನ್ ಉತ್ಪಾದಕರು ಮತ್ತು ಸರಬರಾಜುದಾರರು ಆಕ್ಸಿಜನ್ ಸರಬರಾಜಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದಲ್ಲಿ ನೇರವಾಗಿ ನಿಯೋಜಿಸಲ್ಪಟ್ಟ ಅಧಿಕಾರಿಗೆ ಸಂಪರ್ಕಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡು ತಡೆರಹಿತವಾಗಿ ಆಕ್ಸಿಜನ್ ಪೂರೈಕೆ ಮಾಡಲು ಕೋರಲಾಯಿತು. ಲಭ್ಯವಿರುವ ಟ್ಯಾಂಕ್ ರಗಳನ್ನು ಗರಿಷ್ಠ ಪ್ರಮಾಣದಲ್ಲಿ‌ ಬಳಸಿಕೊಳ್ಳುವುದು ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com