ಮಂಗಳೂರು: ಬಹ್ರೇನ್ ನಿಂದ 40 ಟನ್ ಆಮ್ಲಜನಕ ಹೊತ್ತ ಐಎನ್ಎಸ್ ತಲ್ವಾರ್ ಭಾರತಕ್ಕೆ ಆಗಮನ

ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ 2ನೇಯಲ್ಲಿ ದೇಶಾದ್ಯಂತ ಆಮ್ಲಜನಕದ ಕೊರತೆ ಸಮಸ್ಯೆ ಮುಂದುವರೆದಿರುವಂತೆಯೇ ಇತ್ತ ಭಾರತೀಯ ನೌಕಾಪಡೆಯ ಐಎನ್ಎಸ್ ತಲ್ವಾರ್ ನೌಕೆ ಸುಮಾರು 40 ಟನ್ ಆಮ್ಲಜನಕ ಹೊತ್ತು ಭಾರತಕ್ಕೆ ಮರಳಿದೆ.
ಆಮ್ಲಜನಕ ಹೊತ್ತು ತಂದ ಐಎನ್ಎಸ್ ತಲ್ವಾರ್
ಆಮ್ಲಜನಕ ಹೊತ್ತು ತಂದ ಐಎನ್ಎಸ್ ತಲ್ವಾರ್
Updated on

ಮಂಗಳೂರು: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ 2ನೇಯಲ್ಲಿ ದೇಶಾದ್ಯಂತ ಆಮ್ಲಜನಕದ ಕೊರತೆ ಸಮಸ್ಯೆ ಮುಂದುವರೆದಿರುವಂತೆಯೇ ಇತ್ತ ಭಾರತೀಯ ನೌಕಾಪಡೆಯ ಐಎನ್ಎಸ್ ತಲ್ವಾರ್ ನೌಕೆ ಸುಮಾರು 40 ಟನ್ ಆಮ್ಲಜನಕ ಹೊತ್ತು ಭಾರತಕ್ಕೆ ಮರಳಿದೆ.

ಕರ್ನಾಟಕದ ಮಂಗಳೂರಿನ ನವಮಂಗಳೂರು ಬಂದರಿಗೆ ಇಂದು ಮಧ್ಯಾಹ್ನ  ಐಎನ್ಎಸ್ ತಲ್ವಾರ್ ನೌಕೆ ಆಗಮಿಸಿದ್ದು, ತನ್ನೊಂದಿಗೆ ಬಹರೇನ್‌ನಿಂದ 40 ಟನ್ ದ್ರವೀಕೃತ ಆಮ್ಲಜನಕ ಹೊತ್ತು ಬಂದಿದೆ. ಬಹರೇನ್‌ನ ಮನಾಮಾದಿಂದ ಎರಡು ಕ್ರಯೋಜೆನಿಕ್ ಐಸೋಕಂಟೈನರ್‌ಗಳಲ್ಲಿ 40 ಟನ್ ಆಮ್ಲಜನಕ  ಹಾಗೂ ವೈದ್ಯಕೀಯ ಉಪಕರಣಗಳನ್ನು ಈ ಹಡಗು ಹೊತ್ತು ತಂದಿದೆ. ಆಕ್ಸಿಜನ್ ಹಡಗು ಆಗಮನ ಸಂದರ್ಭದಲ್ಲಿ ಎನ್‍ಎಂಪಿಟಿ ಬಳಿ ಸಮುದ್ರದಲ್ಲಿ ಯಾವುದೇ ಹಡಗು ಸಂಚರಿಸದಂತೆ ನಿರ್ಬಂಧಿಸಲಾಗಿತ್ತು. ಶಿಪ್ಪಿಂಗ್ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಕ್ರೇನ್‍ಗಳ ಸಹಾಯದಿಂದ ಬೃಹತ್ ಕಂಟೈನರ್‌ಗಳನ್ನು  ಇಳಿಸಲಾಯಿತು. ಎನ್‍ಎಂಪಿಟಿ ಇದನ್ನು ಉಚಿತವಾಗಿ ನಿರ್ವಹಣೆ ಮಾಡಿದ್ದರೆ, ಗಣೇಶ್ ಶಿಪ್ಪಿಂಗ್‍ನಿಂದ ಉಚಿತವಾಗಿ ಇಳಿಸಿದೆ.

ಬಹರೈನ್ ಮತ್ತು ಭಾರತ ಸರ್ಕಾರದ ಒಪ್ಪಂದದಂತೆ ಕೋವಿಡ್ ಸಂದರ್ಭದಲ್ಲಿ ನೆರವಿನ ಯೋಜನೆಯಾಗಿ ಸಮುದ್ರ ಸೇತು ಕಾರ್ಯಕ್ರಮದಡಿ ಕಿಂಗ್‍ಡಂ ಆಫ್ ಬಹರೈನ್ ಸರ್ಕಾರವು ಭಾರತೀಯ ರೆಡ್‍ಕ್ರಾಸ್‍ಗೆ ಆಕ್ಸಿಜನ್ ನೀಡಿದೆ. ಬಹರೈನ್ ಸರ್ಕಾರ ಕೂಡ ಉಚಿತವಾಗಿ ಈ ನೆರವು ನೀಡಿದೆ. ಇದರಲ್ಲಿ ಒಂದು  ಕಂಟೈನರ್ ಬೆಂಗಳೂರಿಗೂ, ಇನ್ನೊಂದನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಆಸ್ಪತ್ರೆಗಳಿಗೆ ಬಳಸುವ ನಿರೀಕ್ಷೆ ಇದೆ. ಇಂಡಿಯನ್ ಕಂಪನಿಯು ಆಕ್ಸಿಜನ್ ದಾಸ್ತಾನು ಮಾಡಲಿದೆ.

ಮಂಗಳೂರಿಗೆ ಬಂದಿರುವ ಆಮ್ಲಜನಕದ ಟ್ಯಾಂಕ್‌ಗಳನ್ನು ಉಚಿತವಾಗಿ ನಿರ್ವಹಣೆ ಮಾಡುವಂತೆ ಕೇಂದ್ರ ಸರ್ಕಾರವು ನವಮಂಗಳೂರು ಬಂದರು ಮಂಡಳಿಗೆ ಈಗಾಗಲೇ ಸೂಚನೆ ನೀಡಿದೆ. ಈ ಆಮ್ಲಜನಕವು ಕರಾವಳಿಯ ಜಿಲ್ಲೆಗಳ ಆಸ್ಪತ್ರೆಗಳಿಗೆ ವಿತರಣೆಯಾಗುವ ಸಾಧ್ಯತೆ ಇದೆ. ದೇಶದಲ್ಲಿ ಕೋವಿಡ್  ಸೋಂಕಿತರಿಗೆ ಆಕ್ಸಿಜನ್ ಇಲ್ಲದೆ ನೂರಾರು ಮಂದಿ ಸಾವನ್ನಪ್ಪ್ಪುತ್ತಿದ್ದು, ಹಲವಾರು ನೆರೆ ರಾಷ್ಟ್ರಗಳು ಆಕ್ಸಿಜನ್ ಪೂರೈಕೆ ಮೂಲಕ ನೆರವು ನೀಡುತ್ತಿವೆ. ದೇಶದಲ್ಲಿ ಉಂಟಾಗಿರುವ ಆಮ್ಲಜನಕ ಸಮಸ್ಯೆ ಸರಿದೂಗಿಸುವ ಉದ್ದೇಶದಿಂದ ಆಪರೇಷನ್​ ಸಮುದ್ರ ಸೇತು-2 ಯೋಜನೆ ಹಮ್ಮಿಕೊಳ್ಳಲಾಗಿದೆ. ಈಗಾಗಲೇ  ಸೌದಿ ಅರೇಬಿಯಾ, ಯುಎಇ ಮತ್ತಿತರ ರಾಷ್ಟ್ರಗಳು ಆಕ್ಸಿಜನ್ ಕಳುಹಿಸಿಕೊಟ್ಟಿವೆ. ಮೊದಲ ಹಂತದಲ್ಲಿ ಬಹರೈನ್​, ಸಿಂಗಾಪುರ ಮತ್ತು ಥಾಯ್ಲೆಂಡ್​ಗಳಿಂದ ಆಮ್ಲಜನಕ ತರಲು ಯೋಜನೆ ರೂಪಿಸಲಾಗಿದೆ. ಏಳು ಭಾರತೀಯ ನೌಕಾ ಹಡಗುಗಳಾದ ಕೋಲ್ಕತ್ತಾ, ಕೊಚ್ಚಿ, ತಲ್ವಾರ್​, ತಬಾರ್​, ತ್ರಿಕಾಂಡ್​, ಜಲಶ್ವಾ  ಮತ್ತು ಐರಾವತ್​ ಈ ಕಾರ್ಯಾಚರಣೆಗೆ ನಿಯೋಜನೆಗೊಂಡಿವೆ.

ಕೋವಿಡ್-19 ಸಂದರ್ಭದಲ್ಲಿ ಭಾರತೀಯ ನೌಕಾಪಡೆಯು ಸಮುದ್ರ ಸೇತು-2 ಕಾರ್ಯಾಚರಣೆ ಆರಂಭಿಸಿದ್ದು, ವಿದೇಶಗಳಿಂದ ಹಡಗಿನ ಮೂಲಕ ಆಮ್ಲಜನಕ, ವೈದ್ಯಕೀಯ ಉಪಕರಣಗಳನ್ನು ತರಲಾಗುತ್ತಿದೆ. ಈಗಾಗಲೇ ಹಲವಾರು ಹಡಗುಗಳು ವಿದೇಶ ತಲುಪಿದ್ದು, ಅಲ್ಲಿಂದ ಆಮ್ಲಜನಕವನ್ನು ಹೊತ್ತು ತರುತ್ತಿವೆ.  ಐಎನ್‌ಎಸ್‌ ಐರಾವತ್‌ ಹಡಗು ಸಿಂಗಪುರದಿಂದ ಹಾಗೂ ಐಎನ್‌ಎಸ್‌ ಕೊಲ್ಕತ್ತ ಹಡಗು ಕುವೈತ್‌ನಿಂದ ದ್ರವೀಕೃತ ಆಮ್ಲಜನಕವನ್ನು ಹೊತ್ತು ಬರುತ್ತಿದ್ದು, ಶೀಘ್ರದಲ್ಲಿಯೇ ಭಾರತಕ್ಕೆ ಮರಳಲಿವೆ. ಇದರ ಜೊತೆಗೆ ಇನ್ನೂ ಮೂರು ಹಡಗುಗಳು ಕುವೈತ್‌, ದೋಹಾದಿಂದ ಆಮ್ಲಜನಕ ತರಲಿವೆ. ದೇಶದಲ್ಲಿ ಅಗತ್ಯವಿರುವ  ಕಡೆಗಳಿಗೆ ಈ ಹಡಗುಗಳು ಆಮ್ಲಜನಕವನ್ನು ಪೂರೈಕೆ ಮಾಡಲಿದ್ದು, ಆಯಾ ಭಾಗದಲ್ಲಿ ಈ ಆಮ್ಲಜನಕ ಬಳಕೆ ಮಾಡಿಕೊಳ್ಳಬಹುದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com