ಕೋವಿಡ್ ನಿಯಂತ್ರಣ ಸಭೆ: ಆಕ್ಸಿಜನ್, ರೆಮಿಡಿಸಿವಿರ್ ಒದಗಿಸಲು ಕ್ರಮ- ಗೋವಿಂದ ಕಾರಜೋಳ

ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಅಗತ್ಯವಿರುವ ಆಕ್ಸಿಜನ್, ರೆಮಿಡಿಸಿವಿರ್ ಒದಗಿಸುವುದರ ಜತೆಗೆ ಕೋವಿಡ್ ನಿಯಂತ್ರಣಕ್ಕೆ ಸರಕಾರ ಜಾರಿಗೊಳಿಸಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ
Updated on

ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಅಗತ್ಯವಿರುವ ಆಕ್ಸಿಜನ್, ರೆಮಿಡಿಸಿವಿರ್ ಒದಗಿಸುವುದರ ಜತೆಗೆ ಕೋವಿಡ್ ನಿಯಂತ್ರಣಕ್ಕೆ ಸರಕಾರ ಜಾರಿಗೊಳಿಸಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದನ್ನು ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಉಪ ಮುಖ್ಯಮಂತ್ರಿ  ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. 

ಕೋವಿಡ್ ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ (ಮೇ. 6) ನಡೆದ ಉನ್ನತಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದಲ್ಲದೇ ಮಾರ್ಗಸೂಚಿ ಪಾಲಿಸಲು ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕೂಡ ಕ್ರಮ ಕೈಗೊಳ್ಳಬೇಕು. ಆಕ್ಸಿಜನ್  ಲಭ್ಯತೆ ಬಗ್ಗೆ ನಿರಂತರ ನಿಗಾ ವಹಿಸಬೇಕು. ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಬಾರದು.

ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ 24 ತಾಸು ಕೆಲಸ ಮಾಡಬೇಕು ವೈದ್ಯರು ಸ್ವತಃ ಕೋವಿಡ್ ವಾರ್ಡುಗಳಿಗೆ ಹೋಗಿ ನಿಯಮಿತವಾಗಿ ಪರಿಶೀಲಿಸಬೇಕು ಎಂದು ಶ್ರೀ ಗೋವಿಂದ ಕಾರಜೋಳ ತಿಳಿಸಿದರು. ಗೋಕಾಕ, ಸವದತ್ತಿ ಹಾಗೂ ಬೆಳಗಾವಿ ಸೇರಿದಂತೆ ಕೆಲ ತಾಲ್ಲೂಕುಗಳಲ್ಲಿ ಸೋಂಕಿನ‌  ಪ್ರಮಾಣ ದಿಢೀರ್ ಹೆಚ್ಚಳವಾಗಿರುವುದಕ್ಕೆ ಆತಂಕ ವ್ಯಕ್ತಪಡಿಸಿದ ಡಿಸಿಎಂ, ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲು ತಿಳಿಸಿದರು. ಜಿಲ್ಲೆಯಲ್ಲಿ ಕೋವಿಡ್ ತಪಾಸಣೆಗೆ ಅಗತ್ಯವಿರುವ ಪ್ರಯೋಗಾಲಯದ ಸ್ಥಾಪನೆಗೆ ಅಗತ್ಯವಿರುವ ಪ್ರಸ್ತಾವವನ್ನು ಕಳಿಸಿದರೆ ಇದಕ್ಕೆ ಸರ್ಕಾರದ ಮಟ್ಟದಲ್ಲಿ ಮಂಜೂರಾತಿ  ಒದಗಿಸಲಾಗುವುದು ಎಂದು ತಿಳಿಸಿದರು. ಈಗಾಗಲೇ ಮೊದಲ ಲಸಿಕೆ ಪಡೆದುಕೊಂಡಿರುವವರಿಗೆ ಆದ್ಯತೆ ಮೇರೆಗೆ ಎರಡನೇ ಡೋಸ್ ಲಸಿಕೆ‌ನೀಡಬೇಕು. ಲಸಿಕೆ ವ್ಯರ್ಥವಾಗದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕು.

ಬಿಮ್ಸ್ ಗೆ ಇನ್ನೊಂದು ಆಕ್ಸಿಜನ್ ಘಟಕ- ಪ್ರಸ್ತಾವಕ್ಕೆ ಸೂಚನೆ: 
ಬಿಮ್ಸ್ ಗೆ ಇನ್ನೊಂದು ಆಕ್ಸಿಜನ್ ಸಂಗ್ರಹ ಘಟಕ ಸ್ಥಾಪಿಸಲು ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಗಿದೆ. ಈ‌ಕುರಿತು ಪ್ರಸ್ತಾವ ಸಲ್ಲಿಸಲು ತಿಳಿಸಿದರು. ಓ.ಎನ್.ಜಿ.ಸಿ‌ಆಕ್ಸಿಜೆನ್ ಘಟಕವನ್ನು ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸ್ಥಾಪಿಸಲು ಮನವಿ ಮಾಡಿಕೊಳ್ಳಲಾಗಿದೆ. ಆದ್ದರಿಂದ ಸ್ಥಳ ಗುರುತಿಸಿ  ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಕೂಡಲೇ ಪತ್ರ ಬರೆಯುವಂತೆ ನಿರ್ದೇಶನ ನೀಡಿದರು. ಆಕ್ಸಿಜನ್ ಕೊರತೆಯಾಗದಂತೆ ಹೆಚ್ಚುವರಿ ಟ್ಯಾಂಕರ್ ಅಥವಾ ಚಾಲಕರನ್ನು ನಿಯೋಜಿಸಲು ಸೂಚನೆ ನೀಡಿದರು. ಕೆಲವು ಕಡೆಗಳಲ್ಲಿ ರೋಗಿಗಳಿಗೆ ನಿಗದಿತ‌ಪ್ರಮಾಣಕ್ಕಿಂತ ಹೆಚ್ಚಿನ ಆಕ್ಸಿಜನ್ ಬಳಕೆ ಮಾಡಲಾಗುತ್ತಿದೆ  ಎಂದು ದೂರುಗಳಿವೆ. ಆದ್ದರಿಂದ ಈ ಬಗ್ಗೆ ಆಸ್ಪತ್ರೆಗಳಲ್ಲಿ ವೈದ್ಯರು ನಿಗಾ ವಹಿಸಬೇಕು ಎಂದು ಶ್ರೀ ಗೋವಿಂದ ಕಾರಜೋಳ ಅವರು ಬಿಮ್ಸ್ ಅಧಿಕಾರಿಗಳಿಗೆ ನಿರ್ದೆಶನ ನೀಡಿದರು. ವಾರ್ ರೂಮ್ ಚುರುಕುಗೊಳಿಸಲು ನಿರ್ದೇಶನ: ಸೋಂಕಿತರಿಗೆ ತುರ್ತು ಚಿಕಿತ್ಸೆ ಮತ್ತು ಬೆಡ್ ಒದಗಿಸುವುದಕ್ಕೆ ಸಂಬಂಧಿಸಿದಂತೆ  ವಾರ್ ರೂಮ್ ನಲ್ಲಿ ಸಮರ್ಪಕವಾಗಿ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ವಾರ್ ರೂಮ್ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ಚುರುಕುಗೊಳಿಸಬೇಕು ಎಂದು ಡಿಸಿಎಂ ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟಾರೆ 102 ಆಂಬ್ಯುಲೆನ್ಸ್ ಗಳಿವೆ.‌ ಇವುಗಳ ಸಂಚಾರದ ಮೇಲೆ ನಿಗಾವಹಿಸಬೇಕು. ಸದ್ಬಳಕೆ ಮಾಡಿಕೊಳ್ಳಲು ಕಡ್ಡಾಯವಾಗಿ ಲಾಗ್ ಬುಕ್ ನಿರ್ವಹಿಸಲು ತಿಳಿಸಿದರು. ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್ ಗಳ ಮಾಹಿತಿಯನ್ನು ಒದಗಿಸಲು‌ವೆಬ್ ಸೈಟ್ ಅಭಿವೃದ್ಧಿಪಡಿಸಲು ತಿಳಿಸಿದರು. ಸಕ್ಕರೆ  ಕಾರ್ಖಾನೆಗಳಿಂದ ಸಿಲಿಂಡರ್ ಬಳಕೆಗೆ ಸಲಹೆ: ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಆಕ್ಸಿಜನ್ ಸಿಲಿಂಡರ್ ಗಳನ್ನು ಜಿಲ್ಲಾಡಳಿತ ತನ್ನ ವಶಕ್ಕೆ ಪಡೆದುಕೊಂಡು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಕಲ್ಪಿಸಬೇಕು. ಪರಿಸ್ಥಿತಿ ಸುಧಾರಿಸಿದ ಬಳಿಕ ಆಯಾ ಕಾರ್ಖಾನೆಗಳಿಗೆ ಸಿಲಿಂಡರ್ ಗಳನ್ನು ಹಿಂದಿರುಗಿಸಬೇಕು.‌ಇಂತಹ  ಸಂಕಷ್ಟದ ಪರಿಸ್ಥಿತಿಯಲ್ಲಿ ಎಲ್ಲರೂ ಸಹಕಾರ ನೀಡಲಿದ್ದು, ಇದನ್ನು‌ಬಳಸಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.

ಮಹಾರಾಷ್ಟ್ರದಲ್ಲಿ ಇಥೆನಾಲ್ ಘಟಕ ಹೊಂದಿರುವ ಸಕ್ಕರೆ ಕಾರ್ಖಾನೆಗಳು ಆಕ್ಸಿಜನ್ ಉತ್ಪಾದಿಸಿ ಸರಬರಾಜು ಮಾಡುತ್ತಿವೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಗೋವಿಂದ ಕಾರಜೋಳ ಅವರು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದರು. ಇನ್ನು ಕೆಲವು ದಿನಗಳಲ್ಲಿ ರೆಮಿಡಿಸಿವಿರ್  ಬೆಳಗಾವಿಯಲ್ಲಿ ಉತ್ಪಾದನೆ ಯಾಗಲಿದ್ದು, ಇದರಿಂದ ಕೊರತೆ ನೀಗಲಿದೆ ಎಂದರು. ಆರೋಗ್ಯ ಇಲಾಖೆಯ ಸಿಬ್ಬಂದಿ ಕೊರತೆಗೆ ತಕ್ಷಣವೇ ಕ್ರಮ‌ಕೈಗೊಳ್ಳುವಂತೆ ಹೇಳಿದರು. ಸಹಾಯವಾಣಿ ಸಮರ್ಪಕವಾಗಿ ಬಳಸಬೇಕು. ಸಹಾಯ ಅಥವಾ ಮಾಹಿತಿ ಕೇಳುವ ಸಾರ್ವಜನಿಕರಿಗೆ ತಕ್ಷಣವೇ ಮಾಹಿತಿಯನ್ನು  ಒದಗಿಸಬೇಕು. ಪ್ರತಿ ಕರೆಗಳಿಗೂ ಸೂಕ್ತ ಸ್ಪಂದನೆ ಇರಬೇಕು.

ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು 200 ಆಕ್ಸಿಜನ್ ಬೆಡ್ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದ್ದಾರೆ. ಇದರ ಪ್ರಯೋಜನ ಪಡೆಯುವಂತೆ ಸಚಿವರು ತಿಳಿಸಿದರು. ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಸಂಬಂಧಿಸಿದಂತೆ ಏನೇ ಅವಶ್ಯಕತೆಯಿದ್ದರೆ ತಕ್ಷಣವೇ ತಮ್ಮ ಗಮನಕ್ಕೆ ತರುವಂತೆ  ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರಾದ ಶ್ರೀ ಉಮೇಶ್ ಕತ್ತಿ ಅವರು, ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಬೆಡ್ ಗಳ ಹಂಚಿಕೆಗೆ ಒಂದು ಸಮಿತಿ ರಚಿಸಬೇಕು. ಅದರ  ಮೂಲಕವೇ ಬೆಡ್ ಹಂಚಿಕೆ ಮಾಡಬೇಕು ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com