ಬೆಡ್ ಬ್ಲಾಕಿಂಗ್ ಹಗರಣ ಎಫೆಕ್ಟ್: ಕೆಲಸಕ್ಕೆ ಬರಲು ಸಿಬ್ಬಂದಿ ಹಿಂದೇಟು, ಬುಕ್ಕಿಂಗ್ ಮಾಡಲು ಪರದಾಟ!
ಬೆಂಗಳೂರು: ಕೋವಿಡ್ 19 ರೋಗಿಗಳಿಗೆ ಬೆಡ್ ಬುಕ್ ಮಾಡಲು ಕಷ್ಟವಾಗುತ್ತಿದ್ದರೇ ನೀವು ಟೆಲಿಕಾಲರ್ಸ್ ಮತ್ತು ಕೇವಲ ಅಧಿಕಾರಿಗಳನ್ನು ನಿಂದಿಸುವಂತಿಲ್ಲ, ಅವರ ಜೊತೆಗೆ ರಾಜಕಾರಣಿಗಳನ್ನು ತೆಗಳಬೇಕಾಗುತ್ತದೆ.
ಏಕೆಂದರೆ ವಾರ್ ರೂಮ ನಲ್ಲಿ ಸಿಬ್ಬಂದಿ ಕೊರತೆಯಾಗಲು ಕಳೆದ ಎರಡು ದಿನಗಳ ಹಿಂದೆ ನಡೆದ ಹಗರಣ ಕಾರಣವಾಗಿದೆ ಎಂದು ನೋಡಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಂಧೆ ಬಯಲಾದ ಮೇಲೆ ಕಚೇರಿಗೆ ಬರುವ ಸಿಬ್ಬಂದಿ ಸಂಖ್ಯೆ ಕಡಿಮೆಯಾಗಿದೆ, ಶೇ.55.20 ರಷ್ಟಿದ್ದ ಸಿಬ್ಬಂದಿ ಸಂಖ್ಯೆ ತೀರಾ ಕಡಿಮೆಯಾಗಿದೆ.
ಅಧಿಕಾರಿಗಳು ಮತ್ತು ರಾಜಕಾರಣಿಗಳು ಸಿಬ್ಬಂದಿಯಲ್ಲಿ ಆತ್ಮವಿಶ್ವಾಸ ತುಂಬಲು ವಿಫಲವಾಗಿರುವುದೇ ಇದಕ್ಕೆ ಕಾರಣ, ಸಿಬ್ಬಂದಿಗೆ ರಕ್ಷಣೆ ಸುರಕ್ಷತೆಯ ಭರವಸೆಯಿಲ್ಲ ಎಂದು ವಾರ್ ರೂಂ ನಲ್ಲಿ ಕೆಲಸ ಮಾಡುವ ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಬೆಡ್ ಬುಕ್ಕಿಂಗ್ ದಂಧೆ ಬಯಲಾದ ಮೇಲೆ ಕೆಲ ಸಿಬ್ಬಂದಿ ಪೊಲೀಸ್ ವಿಚಾರಣೆಗೆ ಹಾಜರಾಗುತ್ತಿರುವುದು ಕೂಡ ಸಿಬ್ಬಂದಿ ಕೊರತೆಗೆ ಕಾರಣವಾಗಿದೆ, ಈ ಮೊದಲೇ ವಾರ್ ರೂಂ ನಲ್ಲಿ ಸಿಬ್ಬಂದಿ ಸಮಸ್ಯೆಯಿತ್ತು, ಈಗ ಮತ್ತಷ್ಟು ಸಿಬ್ಬಂದಿ ಸಂಖ್ಯೆ ಕಡಿಮೆಯಾಗಿದೆ, ಕರೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ, ಕೆಲ ಸಿಬ್ಬಂದಿ ಮತ್ತು ವೈದ್ಯರನ್ನು ತನಿಖೆಗಾಗಿ ಪೊಲೀಸರು ಕರೆದಿದ್ದಾರೆ, ಕೆಲ ಕಂಪ್ಯೂಟರ್ ಗಳನ್ನು ತನಿಖೆಗಾಗಿ ಕೊಂಡೊಯ್ಯಲಾಗಿದೆ, ಹೀಗಾಗಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.
ಒಂದು ವೇಳೆ ಜನರಿಗೆ ಬೆಡ್ ಸಿಗಲು ಸಾಧ್ಯವಾಗದಿದ್ದರೇ ಅವರು ಸರ್ಕಾರ, ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ನಿಂದಿಸಬೇಕಾಗುತ್ತದೆ ಎಂದು ವಾರ್ ರೂಮ ನ ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ. ತಮಗೆ ತೊಂದರೆಯಾಗಬಹುದೆಂಬ ಭಯದಿಂದ ಹಲವು ಸಿಬ್ಬಂದಿ ಬೆಡ್ ಅಲಾಟ್ ಮಾಡಲು ಹೆದರುತ್ತಿದ್ದಾರೆ.
ಹೀಗಾಗಿ ಸಿಬ್ಬಂದಿ ಹಾಸಿಗೆ ಬುಕ್ ಮಾಡಲು ವೈದ್ಯರನ್ನೇ ಕೇಳುತ್ತಿದ್ದಾರೆ. ಜೊತೆಗೆ ಯಾವ ಆಸ್ಪತ್ರೆಯಲ್ಲಿ ಬೆಡ್ ಖಾಲಿಯಿದೆಯೋ ಅಲ್ಲಿಗೆ ನೇರವಾಗಿ ಹೋಗುವಂತೆ ರೋಗಿಗಳಿಗೆ ತಿಳಿಸುತ್ತಿದ್ದಾರೆ.
ಬೆಡ್ ಬ್ಲಾಕಿಂಗ್ ದಂಧೆ ಬಯಲು ಮಾಡಿದ್ದು ಸದ್ಯ ಇದ್ದ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ, ಹಲವರು ವ್ಯವಸ್ಥೆ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ. ನಾವು ಕೇವಲ ಸಿಬ್ಬಂದಿ ಪರ ಮಾತನಾಡುತ್ತಿಲ್ಲ, ಅವರ ಕುಟುಂಬ ಕೂಡ ತೊಂದರೆಗೆ ಸಿಲುಕುತ್ತಿದೆ, ಹೀಗಾಗಿ ಅವರನ್ನು ಪ್ರೇರೇಪಿಸಬೇಕಾಗಿದೆ, ಕರೆ ಮಾಡಲು ಅವರು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ, ಇದು ರೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ