ಎಂ.ಪಿ. ಆಕ್ಸಿ ಬ್ಯಾಂಕ್ ಗೆ ಸಂಸದ ತೇಜಸ್ವೀ ಸೂರ್ಯ ಚಾಲನೆ

ಕೋವಿಡ್ ಸೋಂಕಿತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 250 ಯೂನಿಟ್ ಗಳ  ಆಕ್ಸಿಜನ್ ಕಾನ್ಸನ್ಟ್ರೇಟರ್ ಬ್ಯಾಂಕ್ ಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವೀ ಸೂರ್ಯ ಭಾನುವಾರ ಚಾಲನೆ ನೀಡಿದರು. 
ಎಂ.ಪಿ ಆಕ್ಸಿ ಬ್ಯಾಂಕ್ ಗೆ ಚಾಲನೆ ನೀಡಿದ ಸಂಸದ ತೇಜಸ್ವೀ ಸೂರ್ಯ
ಎಂ.ಪಿ ಆಕ್ಸಿ ಬ್ಯಾಂಕ್ ಗೆ ಚಾಲನೆ ನೀಡಿದ ಸಂಸದ ತೇಜಸ್ವೀ ಸೂರ್ಯ
Updated on

ಬೆಂಗಳೂರು: ಕೋವಿಡ್ ಸೋಂಕಿತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 250 ಯೂನಿಟ್ ಗಳ  ಆಕ್ಸಿಜನ್ ಕಾನ್ಸನ್ಟ್ರೇಟರ್ ಬ್ಯಾಂಕ್ ಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವೀ ಸೂರ್ಯ ಭಾನುವಾರ ಚಾಲನೆ ನೀಡಿದರು. 

ಬೆಂಗಳೂರು ದಕ್ಷಿಣ ಸಂಸದರ ಕಛೇರಿಯು 1 ಸಾವಿರಕ್ಕೂ ಅಧಿಕ ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳನ್ನು ಬೆಂಗಳೂರು ನಾಗರಿಕರ ಸೇವೆಗೆ ಒದಗಿಸಲಿದ್ದು, ಈಗಾಗಲೇ 100 ಜನ ಕೋವಿಡ್ ಸೋಂಕಿತರಿಗೆ ಹಾಗೂ ಕೋವಿಡ್ ಚಿಕಿತ್ಸೆ ಪಡೆದು ಗುಣಮುಖರಾದ 150 ರೋಗಿಗಳಿಗೆ ಮನೆಗೇ ಕಾನ್ಸನ್ಟ್ರೇಟರ್ ಸೇವೆ ಒದಗಿಸಲಾಗಿದೆ.

ಆಕ್ಸಿಜನ್ ಬ್ಯಾಂಕ್ ಗೆ ಚಾಲನೆ ನೀಡಿ ಮಾತನಾಡಿದ ಸಂಸದ ತೇಜಸ್ವೀ ಸೂರ್ಯ ರವರು, "ಕೋವಿಡ್ ನ ಅಲ್ಪ ಗುಣಲಕ್ಷಣಗಳನ್ನು ಹೊಂದಿದ ಹಲವು ರೋಗಿಗಳ ಆರೋಗ್ಯದಲ್ಲಿ ಆಕ್ಸಿಜನ್ ಕೊರತೆಯಿಂದ ಒಮ್ಮೆಗೆ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ. ಆಸ್ಪತ್ರೆ ಬೆಡ್ ಹಂಚಿಕೆಗಿಂತ ಪೂರ್ವದಲ್ಲಿ ಆಕ್ಸಿಜನ್ ಒದಗಿಸಿದಲ್ಲಿ ರೋಗಿಗಳಿಗೆ ಅತ್ಯಂತ ಹೆಚ್ಚಿನ ಸಹಾಯವಾಗಲಿದ್ದು, ಮನೆಯಲ್ಲಿ ಇದ್ದುಕೊಂಡೇ  ರೋಗಿಗಳಿಗೆ ಚಿಕಿತ್ಸೆ ನೀಡಬಹುದು" ಎಂದು ತಿಳಿಸಿದರು.

ಕೋವಿಡ್-19 ಸೋಂಕಿನಿಂದ ಬಳಲುತ್ತಿರುವ ನಾಗರಿಕರು, ಬೆಂಗಳೂರು ದಕ್ಷಿಣ ಸಂಸದರ  ವತಿಯಿಂದ ಆರಂಭಿಸಲಾಗಿರುವ ಕೋವಿಡ್ ರಕ್ಷಾ ಸಹಾಯವಾಣಿ 080 6191 4960 ಸಂಖ್ಯೆಗೆ ಕರೆ ಮಾಡಿದಲ್ಲಿ ಸ್ವಯಂಸೇವಕರು ಕರೆಗೆ ಸ್ಪಂದಿಸಿ ಆಕ್ಸಿಜನ್ ಕಾನ್ಸನ್ಟ್ರೇಟರ್ ಅನ್ನು ಅವರ ಮನೆಗೇ ನೇರವಾಗಿ  ತಲುಪಿಸಲಾಗುತ್ತದೆ. 

ರೋಗಿಗಳ ಹೆಸರು, ವಯಸ್ಸು,ದೂರವಾಣಿ ಸಂಖ್ಯೆ,ಆಕ್ಸಿಜನ್ ಸ್ಯಾಚುರೇಷನ್ ಪ್ರಮಾಣ, ಆರೋಗ್ಯ ಸ್ಥಿತಿಗತಿಗಳ ವಿವರಗಳನ್ನು ಸಲ್ಲಿಸಿದ ನಂತರ ಆಧಾರ್ ಕಾರ್ಡ್, ಪಲ್ಸ್ ಆಕ್ಸಿಮೀಟರ್ ರೀಡಿಂಗ್ ನೊಂದಿಗೆ ರೋಗಿಯ ಫೋಟೋ ಕಳುಹಿಸಬೇಕಾಗುತ್ತದೆ. ಎಂ ಪಿ ಕಛೇರಿಯ ಸ್ವಯಂಸೇವಕರು ಡಾಕ್ಟರ್ ಪ್ರೀಸ್ಕ್ರಿಪ್ಷನ್ ಧೃಢೀಕರಿಸಿಕೊಂಡ ನಂತರ ಆಕ್ಸಿಜನ್ ಕಾನ್ಸನ್ಟ್ರೇಟರ್ ಅನ್ನು ನೇರವಾಗಿ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಆಟೋ ಅಥವಾ ಗೂಡ್ಸ್ ವೆಹಿಕಲ್ ಗಳಿಂದ ಮಾಡಲಿದ್ದಾರೆ.

"ಪ್ರಸ್ತುತ ನಮ್ಮ ಕಚೇರಿಯ ವತಿಯಿಂದ 250 ಕಾನ್ಸನ್ಟ್ರೇಟರ್ ಗಳು ಕಾರ್ಯಾಚರಣೆಯಲ್ಲಿದ್ದು, ಇವುಗಳ ಸಂಖ್ಯೆಯನ್ನು 900-1000ಕ್ಕೆ ಏರಿಸಲಿದ್ದೇವೆ.ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳು ಆಸ್ಪತ್ರೆಗಳಿಗೆ ಪರ್ಯಾಯ ಅಲ್ಲದಿದ್ದರೂ 85-92ರ ನಡುವಿನ ಸ್ಯಾಚುರೇಷನ್ ಪ್ರಮಾಣವಿರುವ ರೋಗಿಗಳಿಗೆ  ಆಸ್ಪತ್ರೆ ಬೆಡ್ ಸಿಗುವ ಹಲವು ಘಂಟೆಗಳ ವರೆಗೆ ಸ್ಥಿರತೆಯನ್ನು ಕಾಪಾಡಲು ಸಹಕಾರಿಯಾಗಲಿದೆ. ಆದೇ ರೀತಿ ಕೋವಿಡ್ ಚಿಕಿತ್ಸೆ ನಂತರ ಡಿಸ್ಚಾರ್ಜ್ ಆದ ವ್ಯಕ್ತಿಗಳಿಗೆ ಪೂರ್ಣ ಗುಣಮುಖರಾಗುವ ತನಕವೂ ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳು ಸಹಕಾರಿಯಾಗಲಿವೆ.ಇಂತಹ ಸನ್ನಿವೇಶಗಳಲ್ಲಿ ಡಾಕ್ಟರ್ ಪ್ರೀಸ್ಕ್ರಿಪ್ಷನ್ ಅತ್ಯವಶ್ಯಕ. ಈಗಾಗಲೇ 130ಕ್ಕೂ ಅಧಿಕ ರೋಗಿಗಳಿಗೆ ಕಾನ್ಸನ್ಟ್ರೇಟರ್ ಗಳನ್ನು ಕಳುಹಿಸಿ ಸಹಾಯ ಒದಗಿಸಲಾಗಿದೆ. ರೋಗಿಯು ಕೋವಿಡ್ ನಿಂದ ಗುಣಮುಖರಾದ ತಕ್ಷಣ ಅಥವಾ ಆಸ್ಪತ್ರೆಯಲ್ಲಿ ಬೆಡ್ ಲಭ್ಯವಾದ ತಕ್ಷಣ ಕಾನ್ಸನ್ಟ್ರೇಟರ್ ಗಳನ್ನು ಮರಳಿ ಪಡೆದು, ಸ್ಯಾನಿಟೈಜ್ ಮಾಡಿದ ನಂತರ ಮತ್ತೊಬ್ಬರ ಸೇವೆಗೆ ಪೂರೈಸಲಾಗುವುದು. ಇದಕ್ಕೆ ಯಾವುದೇ ಶುಲ್ಕವಿರುವುದಿಲ್ಲ. ಸುರಕ್ಷತೆಗಾಗಿ 3 ಸಾವಿರ ರೂ,ಗಳ ಡಿಪಾಸಿಟ್ ಅನ್ನು ಪಡೆಯಲಾಗುತ್ತಿದ್ದು,ಕಾನ್ಸನ್ಟ್ರೇಟರ್ ಮರಳಿ ಪಡೆಯುವಾಗ ಅದನ್ನು  ಹಿಂದಿರುಗಿಸಲಾಗುವುದು" ಎಂದು ಸಂಸದರು ಇದೇ ಸಂದರ್ಭದಲ್ಲಿ ವಿವರಿಸಿದರು.

ಈ ಕಾರ್ಯದಲ್ಲಿ ಬೆಂಗಳೂರು ದಕ್ಷಿಣ ಸಂಸದರ ಕಛೇರಿಯೊಂದಿಗೆ ಪೀಸ್ ಆಟೋ,ಸಂಗೀತಾ ಮೊಬೈಲ್ಸ್ ಸಂಸ್ಥೆಗಳು ಕಾನ್ಸನ್ಟ್ರೇಟರ್ ಸಾಗಾಣಿಕೆಗೆ ಸಹಕಾರ ನೀಡಲಿದ್ದು, ಕೋವಿಡ್ ರಕ್ಷಾ ಸಹಾಯವಾಣಿಯ ಕ್ಲೌಡ್ ಕಾಲಿಂಗ್  ನಿರ್ವಹಣೆಗೆ ಕಲೆರಾ ಸಂಸ್ಥೆ ಹಾಗೂ ರೇಜರ್ ಪೇ ಸಂಸ್ಥೆಯು ಮರಳಿ ಆಟೊಮೆಟಿಕ್ ಹಣ ವರ್ಗಾವಣೆಗೆ ತಾಂತ್ರಿಕ ಸಹಕಾರ ಒದಗಿಸಲಿದೆ. ಕಲ್ಯಾಣಿ ಮೊಟರ್ಸ್, ನಮ್ಮ ಬೆಂಗಳೂರು ಫೌಂಡೇಶನ್, ಆಕ್ಟ್ (ಆಕ್ಷನ್ ಕೋವಿಡ್-19 ಟೀಮ್) , ಕೆನಡಾ ಸೇವಾ ಇಂಟರ್ ನ್ಯಾಷನಲ್, ವಾಸವಿ ಸೇವಾ ಫೌಂಡೇಶನ್(ಬೇ ಏರಿಯಾ,ಕ್ಯಾಲಿಫೋರ್ನಿಯಾ) ಹರ್ಷ ಅಘಾಡಿ, ಪೇಟಿಎಂ ಫೌಂಡೇಶನ್, ಲಾಲಾಮೂವ್, ಆಶೀರ್ವಾದ ಪೈಪ್ಸ್, ತರ್ಸಾಡಿಯ ಫೌಂಡೇಶನ್, ಚಾರ್ಟರ್ಡ್ ಅಕೌಂಟನ್ಟ್ಸ್ ಅಸೋಸಿಯೇಷನ್ ಸೇರಿದಂತೆ ಹಲವು ಎನ್ .ಜಿ.ಓ ಗಳು,ಸಂಘ ಸಂಸ್ಥೆಗಳು ಆಕ್ಸಿಜನ್ ಕಾನ್ಸನ್ಟ್ರೇಟರ್ ಪೂರೈಕೆಯಲ್ಲಿ ಸಂಸದರ ಕಚೇರಿಯೊಂದಿಗೆ ಕೈಜೋಡಿಸಿವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com