

ಬೆಂಗಳೂರು: ಹೆಚ್ಚುತ್ತಿರುವ ಆಕ್ಸಿಜನ್ ಬೇಡಿಕೆ ತಗ್ಗಿಸಲು ಎಚ್‍ಎಫ್ ಎನ್ ಒ ಬದಲು ಪರ್ಯಾಯವಾಗಿ ವೆಂಟಿಲೇಟರ್ ಅಳವಡಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಎಲ್ಲ ಜಿಲ್ಲೆಗಳ ಆರೋಗ್ಯಾಧಿಕಾರಿಗಳೊಂದಿಗೆ ವೀಡಿಯೋ ಸಭೆ ನಡೆಸಿದ ಬಳಿಕ ಸಚಿವರು ಮಾತನಾಡಿದರು. ಮಧ್ಯಮ ಪ್ರಮಾಣದ ಲಕ್ಷಣ ಇರುವ ಕೋವಿಡ್ ಸೋಂಕಿತರಿಗೆ ನಿಮಿಷಕ್ಕೆ 20-60 ಲೀಟರ್ ಆಮ್ಲಜನಕ ಬೇಕಾಗುತ್ತದೆ. ಆಮ್ಲಜನಕದ ಸಮಸ್ಯೆ ಇರುವುದರಿಂದ ಬೇರೆ ಕ್ರಮ ವಹಿಸಬೇಕಿದೆ. ಇದಕ್ಕಾಗಿ ಎಚ್ ಎಫ್‍ಎನ್ ಒಗಿಂತ ಹೆಚ್ಚು ಪರಿಣಾಮಕಾರಿಯಾಗಿ ಎನ್‍ಐವಿ (ವೆಂಟಿಲೇಟರ್) ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದಾಗಿ ಶೇ.80 ರಷ್ಟು ಆಕ್ಸಿಜನ್ ಬೇಡಿಕೆ ಕಡಿಮೆಯಾಗುತ್ತದೆ. ಎಚ್‍ಎಫ್‍ಎನ್ ಒ ಇರುವಲ್ಲಿ ಎನ್ ಐವಿ ವೆಂಟಿಲೇಟರ್ ಅಳವಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕಳೆದ ಏಳೆಂಟು ತಿಂಗಳ ಪ್ರಯತ್ನದಿಂದಾಗಿ ಪ್ರತಿ ತಾಲೂಕು ಆಸ್ಪತ್ರೆಯಲ್ಲಿ 50 ಆಕ್ಸಿಜನ್ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ 6 ವೆಂಟಿಲೇಟರ್ ಅಳವಡಿಸಬೇಕೆಂದು ಕ್ರಮ ವಹಿಸಲಾಗಿದೆ. ಆದರೆ ಕೆಲ ಆಸ್ಪತ್ರೆಯಲ್ಲಿ ತಜ್ಞರು ಇಲ್ಲದೆ, ವೆಂಟಿಲೇಟರ್ ಇದ್ದರೂ ಆಕ್ಸಿಜನ್ ಮಾತ್ರ ಬಳಸಲಾಗುತ್ತಿದೆ. ಈ ಸಮಸ್ಯೆ ಪರಿಹರಿಸಲು ಅರವಳಿಕೆ ತಜ್ಞರು, ವೈದ್ಯರನ್ನು ತಾತ್ಕಾಲಿಕವಾಗಿ ನಿಯೋಜಿಸಲು ಸೂಚಿಸಲಾಗಿದೆ. ಕೋವಿಡ್ ಆಸ್ಪತ್ರೆಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲು ಈಗಾಗಲೇ ಆದೇಶಿಸಲಾಗಿದೆ. ಒಂದು ವಾರದಲ್ಲಿ ಎಲ್ಲ ಕಡೆ ಅಳವಡಿಸಲು ಸೂಚನೆ ನೀಡಲಾಗಿದೆ. ಸಿಸಿಟಿವಿ ಅಳವಡಿಕೆಯಿಂದ ಬೆಡ್ ಗಳ ಸಮರ್ಪಕ ಬಳಕೆ ಬಗ್ಗೆ ಕೂಡ ನಿಗಾ ಇಡಬಹುದು ಎಂದು ತಿಳಿಸಿದರು.
ಮರಣ ಪ್ರಮಾಣ ಕೆಲ ಜಿಲ್ಲೆಗಳಲ್ಲಿ ಹೆಚ್ಚುತ್ತಿದ್ದು, ಇದಕ್ಕೆ ಕಾರಣ ತಿಳಿಯಬೇಕಿದೆ. ಪಾಸಿಟಿವ್ ಬಂದ ಕೂಡಲೇ ತಕ್ಷಣ ಚಿಕಿತ್ಸೆ ಆರಂಭಿಸಬೇಕಿದೆ. ಪಾಸಿಟಿವ್ ಇಲ್ಲದೆ, ಲಕ್ಷಣ ಇದ್ದರೂ ಅವರನ್ನು ಕೋವಿಡ್ ಪಾಸಿಟಿವ್ ಎಂದೇ ಪರಿಗಣಿಸಿ ಚಿಕಿತ್ಸೆ ಕೊಡಬೇಕೆಂದು ಸೂಚಿಸಲಾಗಿದೆ. ರಾಜ್ಯದಲ್ಲಿ 33.09% ಪಾಸಿಟಿವಿಟಿ ದರ ಇದೆ. ಈ ದರವನ್ನು 5% ಕ್ಕೆ ಇಳಿಸುವ ಗುರಿ ಇದೆ ಎಂದರು.
ಎಲ್ಲ ಜಿಲ್ಲೆಗಳಲ್ಲಿ ಕೋವಿಡ್ ಚಿಕಿತ್ಸೆ, ಮನೆ ಆರೈಕೆಯಲ್ಲಿರುವವರಿಗೆ ಚಿಕಿತ್ಸೆ ಮೊದಲಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಮಾಹಿತಿ ಪಡೆದು, ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಗಿದೆ ಎಂದರು.
Advertisement