ಬೆಂಗಳೂರು: ಕೊರೋನಾ ಸಾಂಕ್ರಾಮಿಕ ವ್ಯಾಪಕವಾಗಿ ಹರಡಿ ಲಾಕ್ ಡೌನ್ ಹೇರಿಕೆಯಾದರೂ ಕೂಡ ಮದ್ಯ ಮಾರಾಟದ ಮೇಲೆ ರಾಜ್ಯದಲ್ಲಿ ಅಷ್ಟೊಂದು ಹೊಡೆತ ಬಿದ್ದಿಲ್ಲ.
ಬೇರೆ ಇಲಾಖೆಗಳಿಗೆ ಹೋಲಿಸಿದರೆ ಅಬಕಾರಿ ಇಲಾಖೆಯ ಆದಾಯ ಅಷ್ಟೊಂದು ಕಡಿಮೆಯಾಗಿಲ್ಲ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಿಕ್ಕಿರುವ ಅಂಕಿಅಂಶಗಳಿಂದ ಗೊತ್ತಾಗುತ್ತಿದೆ. ಇತರ ವ್ಯಾಪಾರ ಚಟುವಟಿಕೆಗಳಂತೆ ಮದ್ಯ ಮಾರಾಟ ಕೂಡ ಈ ಲಾಕ್ ಡೌನ್ ಸಮಯದಲ್ಲಿ ರಾಜ್ಯದಲ್ಲಿ ತೆರೆದಿರುವುದು ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ.
ಪ್ರಸ್ತುತ ಲಾಕ್ ಡೌನ್ ಸಮಯದಲ್ಲಿ ಲಿಕ್ಕರ್ ಮಾರಾಟ ದಿನಕ್ಕೆ ಸರಾಸರಿ 1.6 ಲಕ್ಷ ಬಾಕ್ಸ್ ಗಳಾಗುತ್ತಿದ್ದು ಇತರ ಸಾಮಾನ್ಯ ದಿನಗಳಲ್ಲಾದರೆ 1.7 ಲಕ್ಷ ಬಾಕ್ಸ್ ಗಳಾಗುತ್ತದೆ. ಒಂದು ಬಾಕ್ಸ್ ಐಎಂಎಲ್ ನಲ್ಲಿ 8.64 ಲೀಟರ್ ಲಿಕ್ಕರ್ ಮತ್ತು ಒಂದು ಬಾಕ್ಸ್ ಬೀರ್ ನಲ್ಲಿ 7.8 ಲೀಟರ್ ಇರುತ್ತದೆ.
ಸಾಮಾನ್ಯ ದಿನಗಳಲ್ಲಾದರೆ ದಿನಕ್ಕೆ ಅಬಕಾರಿ ಇಲಾಖೆಗೆ 65 ಕೋಟಿ ರೂಪಾಯಿ ಆದಾಯವಾದರೆ, ಈಗ ಲಾಕ್ ಡೌನ್ ಸಮಯದಲ್ಲಿ 55ರಿಂದ 58 ಕೋಟಿ ರೂಪಾಯಿಗಳಿಗೆ ಇಳಿದಿದೆ. ಅದಕ್ಕೆ ಮುಖ್ಯ ಕಾರಣ ರೆಸ್ಟೋರೆಂಟ್, ಬಾರ್, ಪಬ್ ಗಳಲ್ಲಿ ಲಾಕ್ ಡೌನ್ ಸಮಯದಲ್ಲಿ ಲಿಕ್ಕರ್ ಸೇವೆಯಿಲ್ಲ. ಆದರೆ ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶವಿರುವುದರಿಂದ ವ್ಯಾಪಾರ ಮೇಲೆ ಅಷ್ಟೊಂದು ಹೊಡೆತ ಬಿದ್ದಿಲ್ಲ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಜೊತೆ ಮಾತನಾಡಿದ ಅಬಕಾರಿ ಸಚಿವ ಗೋಪಾಲಯ್ಯ, ಕಳೆದ ವರ್ಷ 53 ದಿನಗಳ ಕಾಲ ಎಲ್ಲಾ ಮದ್ಯದ ಅಂಗಡಿಗಳನ್ನು ನಾವು ಬಂದ್ ಮಾಡಿಸಿದ್ದೆವು. ಮೇ 2020ರಲ್ಲಿ ನಂತರ ತೆರೆದಾಗ ಲಿಕ್ಕರ್ ಅಂಗಡಿ ಹೊರಗೆ ಸಾಕಷ್ಟು ಜನದಟ್ಟಣೆ ಉಂಟಾಯಿತು, ಕೊರೋನಾ ಸಮಯದಲ್ಲಿ ಈ ರೀತಿ ಜನ ಸೇರುವುದು ಸರಿಯಲ್ಲ, ಹೀಗಾಗಿ ಈ ವರ್ಷ ಸರ್ಕಾರ ನಾಲ್ಕು ಗಂಟೆಗಳ ಕಾಲ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಟ್ಟಿದ್ದೇವೆ. ಇದರಿಂದ ಅಷ್ಟೊಂದು ಜನದಟ್ಟಣೆಯಾಗುವುದಿಲ್ಲ. ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಮೇಲೆ ಲಿಕ್ಕರ್ ಮಳಿಗೆಗಳನ್ನು ಎಂದಿನ ಸಮಯದವರೆಗೆ ತೆರೆಯುತ್ತೇವೆ ಎಂದರು.
2020-21ರಲ್ಲಿ ರಾಜ್ಯದಲ್ಲಿ ಅಬಕಾರಿ ಇಲಾಖೆಗೆ 22 ಸಾವಿರದ 700 ಕೋಟಿ ರೂಪಾಯಿ ಆದಾಯದ ಗುರಿ ಹೊಂದಲಾಗಿತ್ತು, ಅದನ್ನು ಈಡೇರಿಸಿಕೊಂಡಿದ್ದೇವೆ. ಈ ವರ್ಷ, 24 ಸಾವಿರದ 580 ರೂಪಾಯಿ ಗುರಿ ಇಟ್ಟುಕೊಳ್ಳಲಾಗಿದ್ದು ಗುರಿಯನ್ನು ತಲುಪುವ ನಿರೀಕ್ಷೆಯಲ್ಲಿ ಅಧಿಕಾರಿಗಳಿದ್ದಾರೆ ಎಂದರು.
Advertisement