
ಬೆಂಗಳೂರು: ಕೋವಿಡ್-19 ವಿಚಾರದಲ್ಲಿ ರಚಿಸಲಾಗಿರುವ ತಾಂತ್ರಿಕ ಸಲಹಾ ಸಮಿತಿ ಇರುವುದು ಕೇವಲ ನಾಮಕಾವಸ್ತೆಗೆ. ರಾಜಕೀಯವಾಗಿಯೇ ಎಲ್ಲಾ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಇದು ಸರ್ಕಾರಕ್ಕೆ ಹೇಳಿಕೊಳ್ಳಲು ಮಾತ್ರ ಇರುವುದಷ್ಟೆ, ನಮ್ಮ ಸಲಹೆ, ಮಾತುಗಳನ್ನು ಸರ್ಕಾರ ಗೌರವಿಸುತ್ತಿಲ್ಲ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂ ಒಕ್ಕೂಟದ ಅಧ್ಯಕ್ಷ ಹಾಗೂ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ ಹೆಚ್ ಎಂ ಪ್ರಸನ್ನ ಆರೋಪಿಸಿದ್ದಾರೆ.
ಎಎನ್ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಕಳೆದ ವಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸರ್ಕಾರದ ಲಸಿಕೆ ಪೂರೈಕೆ ಬಗ್ಗೆ ಮಾಹಿತಿ ಕೊಡಿ ಎಂದು ಕೇಳಿದ್ದೆ, ಆದರೆ ಸರ್ಕಾರದಿಂದಾಗಲಿ, ಮುಖ್ಯಮಂತ್ರಿ ಕಚೇರಿಯಿಂದಾಗಲಿ ಇಲ್ಲಿಯವರೆಗೆ ಪ್ರತಿಕ್ರಿಯೆ ಬಂದಿಲ್ಲ. ಈಗ ಖಾಸಗಿ ವಲಯಗಳಿಗೆ ಲಸಿಕೆ ಪೂರೈಸಲು ನಾವು ಭಾರತ್ ಬಯೋಟೆಕ್ ಮತ್ತು ಸೆರಂ ಇನ್ಸ್ಟಿಟ್ಯೂಟ್ ಗಳ ಜೊತೆ ಮಾತುಕತೆ ನಡೆಸುತ್ತಿದ್ದೇವೆ ಎಂದರು.
ತಾಂತ್ರಿಕ ಸಲಹಾ ಸಮಿತಿ ಎಷ್ಟು ಆಕ್ಸಿಜನ್ ಬೇಕು ಎಂದು ಸರ್ಕಾರಕ್ಕೆ ಹೇಳಿದೆ, ಆದರೂ ಕೂಡ ರಾಜ್ಯದಲ್ಲಿ ಆಕ್ಸಿಜನ್ ಸಿಲಿಂಡರ್ ಗಳ ಪೂರೈಕೆ ಸರಿಯಾಗಿಲ್ಲ, ಖಾಸಗಿ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ ಮಾಡುವ ಬಗ್ಗೆ ಸರ್ಕಾರ ಇದುವರೆಗೆ ಸೂಕ್ತ ನಿರ್ವಹಣೆ ಮಾಡಿಕೊಂಡಿಲ್ಲ. ಸರ್ಕಾರ ಸರಿಯಾದ ಯೋಜನೆ ಹಾಕಿಕೊಳ್ಳಬೇಕಲ್ಲವೇ ಎಂದು ಡಾ ಪ್ರಸನ್ನ ಕೇಳಿದ್ದಾರೆ.
Advertisement