ರಾಮನಗರ ಜಿಲ್ಲಾಸ್ಪತ್ರೆಯಲ್ಲಿ 300 ಆಕ್ಸಿಜನ್ ಬೆಡ್ ವ್ಯವಸ್ಥೆ: ಡಿಸಿಎಂ ಡಾ. ಅಶ್ವತ್ಥ ನಾರಾಯಣ

ಇಲ್ಲಿನ ನೂತನ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿತರಿಗಾಗಿ ಮೊದಲ ಹಂತದಲ್ಲಿ 150 ಆಕ್ಸಿಜನ್‌ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ  ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ
ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ
Updated on

ರಾಮನಗರ: ಇಲ್ಲಿನ ನೂತನ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿತರಿಗಾಗಿ ಮೊದಲ ಹಂತದಲ್ಲಿ 150 ಆಕ್ಸಿಜನ್‌ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ನಾಳೆಯಿಂದಲೇ ಈ ಬೆಡ್ ಗಳ ಬಳಕೆಯನ್ನು ಹಂತ ಹಂತವಾಗಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ  ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಜಿಲ್ಲಾಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಇನ್ನೂ 15 ದಿನಗಳಲ್ಲಿ ಎರಡನೇ ಹಂತದಲ್ಲಿ,  ಮತ್ತೆ 150 ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು. ಅಲ್ಲಿಗೆ ಒಟ್ಟು 300 ಆಕ್ಸಿಜನ್‌ ಬೆಡ್‌ಗಳಾಗುತ್ತವೆ  ಎಂದರು. 

 ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ತಡೆಗೆ ಎಲ್ಲ ಕ್ರಮ ವಹಿಸಲಾಗಿದೆ. ಎರಡನೇ ಅಲೆ ಹಾಗೂ ಸಂಭನೀಯ ಮೂರನೇ ಅಲೆ ಬಂದರೂ ಸಮಸ್ಯೆಯಾಗದಂತೆ ಈಗಾಗಲೇ ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ಆಕ್ಸಿಜನ್‌ ಬೆಡ್‌ಗಳನ್ನು ಹಾಕಲಾಗುತ್ತಿದೆ. ಕಂದಾಯ ಭವನದಲ್ಲಿ ಈಗ  35 ಆಕ್ಸಿಜನ್‌ ಬೆಡ್‌ ಇದ್ದು, ಅಲ್ಲಿ ಹೆಚ್ಚುವರಿ ಬೆಡ್ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ. ಯಾವುದೇ ತುರ್ತು ಸಂದರ್ಭ ಎದುರಾದರೂ ಜಿಲ್ಲಾ ಕೇಂದ್ರದಲ್ಲೇ ಚಿಕಿತ್ಸೆ ನೀಡಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು. 

ಹೋಮ್‌ ಐಸೋಲೇಷನ್‌ ಇಲ್ಲ: ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಇನ್ನು ಮುಂದೆ ಕೋವಿಡ್‌ ಸೋಂಕಿತರನ್ನು ಮನೆಯಲ್ಲಿ ಕ್ವಾರಂಟೈನ್‌ ಮಾಡುವುದಿಲ್ಲ.  ಸೋಂಕು ಕಂಡು ಬಂದೊಡನೆ ಅವರನ್ನು ಕೋವಿಡ್‌ ಕೇರ್‌ ಕೇಂದ್ರಗಳಿಗೆ ಶಿಫ್ಟ್‌ ಮಾಡಿ ಆರೈಕೆ ಮಾಡಲಾಗುವುದು. ಅಲ್ಲಿ ವೈದ್ಯರು, ನರ್ಸ್‌ಗಳು ಹಾಗೂ ಪ್ಯಾರಾ ಮೆಡಿಕಲ್‌ ಸಿಬ್ಬಂದಿ ಇರುತ್ತಾರೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು. 

ಜಿಲ್ಲಾ ಕೇಂದ್ರದಲ್ಲಿ ಆಮ್ಲಜನಕದ ಕೊರತೆಯೂ ಇಲ್ಲ. ಈಗಾಗಲೇ 6.8 ಟನ್‌ ಸಾಮರ್ಥ್ಯದ ಆಕ್ಸಿಜನ್‌ ಘಟಕ ಮಂಜೂರಾಗಿದೆ. 
ಸದ್ಯಕ್ಕೆ 3.5 ಕೆ.ಎಲ್‌ನಷ್ಟು ಆಮ್ಲಜನಕ ಬಳಕೆಯಾಗುತ್ತಿದೆ. ಇದರ ಜತೆಗೆ, ಆಮ್ಲಜನಕ ಸಾಂದ್ರಕಗಳು, ಹೆಚ್ಚುವರಿ ಸಿಲಿಂಡರ್‌ಗಳೂ ನಮ್ಮಲ್ಲಿವೆ.  ರೆಮಿಡಿಸಿವರ್‌ ಸೇರಿ ಯಾವ ಔಷಧದ ಕೊರತೆಯೂ ಇಲ್ಲ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


ಪಿಎಚ್ ಸಿಗಳಿಗೆ ಭೇಟಿ ನೀಡಿದ ಡಿಸಿಎಂ

ರಾಮನಗರದ ಕಂದಾಯ ಭವನದಲ್ಲಿನ‌ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿದ ಡಿಸಿಎಂ ಅಲ್ಲಿನ‌ ಚಿಕಿತ್ಸೆ ಬಗ್ಗೆ ಸಿಬ್ಬಂದಿ ಜತೆ ಮಾತನಾಡಿದರು. ಚಿಕಿತ್ಸಾ ವ್ಯವಸ್ಥೆ, ಔಷಧಿ ಇತ್ಯಾದಿ ಬಗ್ಗೆ ಮಾಹಿತಿ ಪಡೆದರು. ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್ ಲಭ್ಯತೆ ಬಗ್ಗೆಯೂ ಮಾಹಿತಿ ಪಡೆದರು. ರಾಮನಗರದ ಮೆಹಬೂಬ್ ನಗರದ ನಗರ ಪ್ರಾಥಮಿಕ ಕೇಂದ್ರಕ್ಕೂ ಭೇಟಿ ನೀಡಿ ಪರಿಶೀಲಿಸಿದರು. 

ರಾಮನಗರ ತಾಲ್ಲೂಕಿನ ಕಣ್ವ ಪ್ರಾಥಮಿಕ ಆರೋಗ್ಯ ಹಾಗೂ ಸುಗ್ಗನಹಳ್ಳಿಯಲ್ಲಿ ಇರುವ ಆಯುಷ್ ತರಬೇತಿ ಕೇಂದ್ರಕ್ಕೂ ಭೇಟಿ ನೀಡಿ ಪರಿಶೀಲಿಸಿದರು. ಸುಗ್ಗನಹಳ್ಳಿಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆ ಬಗ್ಗೆ ಸ್ಥಳೀಯ ವೈದ್ಯರಿಂದ‌ ಮಾಹಿತಿ ಪಡೆದರು. ರೋಗಿಗಳ ಆರೋಗ್ಯವನ್ನು ಚೆನ್ನಾಗಿ  ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ರಾಕೇಶ್‌ ಕುಮಾರ್, ಸಿಇಒ ಇಕ್ರಂ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗಿರೀಶ್‌,  ಡಿಎಚ್‌ಒ ಡಾ.ನಿರಂಜನ ಮುಂತಾದವರು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಅವರ ಜೊತೆಯಲ್ಲಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com