ಯಾವುದೇ ಮಠಾಧೀಶರು ನೇರವಾಗಿ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಅವಕಾಶ ಇಲ್ಲ: ಶಶಿಕಲಾ ಜೊಲ್ಲೆ
ಬೆಂಗಳೂರು: ಯಾವುದೇ ಮಠಾಧೀಶರು ನೇರವಾಗಿ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಅವಕಾಶ ಇಲ್ಲ. ಅವರು ಸರ್ಕಾರ ಸಂಪರ್ಕಿಸಿ ಕಾನೂನು ಪ್ರಕಾರವೇ ದತ್ತು ಪಡೆಯಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಅವರು ಮಂಗಳವಾರ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವೆ ಜೊಲ್ಲೆ, ಇತ್ತೀಚೆಗೆ ಬೆಳಗಾವಿಯಲ್ಲಿ ಕೋವಿಡ್‌ನಿಂದ ಮೃತಪಟ್ಟ ಕುಟುಂಬದ ಮಕ್ಕಳು ಅನಾಥವಾಗಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಕೆಲವು ಮಠಾಧೀಶರು ಆ ಮಕ್ಕಳನ್ನು ದತ್ತುತೆಗೆದುಕೊಳ್ಳುವುದಾಗಿ ಹೇಳಿದ್ದರು. ಈ ಸಂಬಂಧ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವೆ, ಯಾರೂ ಕೂಡ ಮಕ್ಕಳನ್ನು ನೇರವಾಗಿ ದತ್ತುಪಡೆಯಲು ಬರುವುದಿಲ್ಲ. ಆರು ಜಿಲ್ಲೆಗಳಲ್ಲಿ ದತ್ತು ಕೇಂದ್ರಗಳಿಲ್ಲ. ಅಲ್ಲಿ ದತ್ತು ತೆಗೆದುಕೊಳ್ಳಲು ಮುಂದೆ ಬಂದರೆ ಸರ್ಕಾರ ಸಹಾಕರ ನೀಡಲಿದೆ ಎಂದರು.
7 ರಿಂದ 18 ವರ್ಷದ ಹೆಣ್ಣು ಮಕ್ಕಳನ್ನು ಪ್ರತ್ಯೇಕವಾಗಿ ಇಡಲು ತೀರ್ಮಾನ ಮಾಡಲಾಗುವುದು. ಯಾರೂ ನೇರವಾಗಿ ಮಕ್ಕಳನ್ನು ದತ್ತು ಪಡೆಯಲು ಅವಕಾಶ ಇಲ್ಲ. ಯಾವುದೇ ಮಗುವಾಗಿದ್ದರೂ ಅದನ್ನು ಇಲಾಖೆ ವ್ಯಾಪ್ತಿಗೆ ಒಪ್ಪಿಸಿ ನಂತರ ದತ್ತು ಪಡೆಯುವ ಪ್ರಕ್ರಿಯೆ ಮಾಡಬೇಕು. ಸಾಮಾಜಾಕಿ ಜಾಲತಾಣದಲ್ಲಿ ಹರಿದಾಡುವ ಸಂದೇಶಗಳನ್ನು ನೇರವಾಗಿ ನಂಬದೆ ಪರಿಶೀಲಿಸಬೇಕು. ಮಕ್ಕಳ ಭವಿಷ್ಯದ ಜೊತೆಗೆ ಆಟ ಆಡುವುದು ಬೇಡ ಎಂದರು.
ಅಂಗನವಾಡಿ ಕಾರ್ಯಕರ್ತೆಯರನ್ನೂ ವಾರಿಯರ್ಸ್ ಎಂದು ತೀರ್ಮಾನಿಸಲಾಗಿದೆ. ಕಳೆದ ವರ್ಷ 25 ಜನ ನಿಧನ ಹೊಂದಿದ್ದಾರೆ. ಅವರಲ್ಲಿ 5 ಜನರಿಗೆ 30 ಲಕ್ಷ ಪರಿಹಾರ ನೀಡಲಾಗಿದೆ. ಉಳಿದ 20 ಜನರಿಗೆ ನೀಡಲಾಗುತ್ತಿದೆ. ಈಗಲೂ ಈ ಯೋಜನೆ ಜಾರಿಯಲ್ಲಿದ್ದು, ಸರ್ಕಾರದಿಂದ ನೋಡಲ್ ಅಧಿಕಾರಿಯಾಗಿ ಐಎಎಸ್ ಅಧಿಕಾರಿ ಮೋಹನ್ ರಾಜ್ ಅವರನ್ನು ನೇಮಕ ಮಾಡಲಾಗಿದೆ ಎಂದರು.
ಕೋವಿಡ್ ಎರಡನೇ ಅಲೆ ರಾಜ್ಯದಲ್ಲಿ ಭಯಂಕರ ಸ್ಥಿತಿ ನಿರ್ಮಾಣವಾಗಿದೆ. ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದ್ದು, ಈ ನಿಟ್ಟಿನಲ್ಲಿ ಇಲಾಖೆ ಸಂಪೂರ್ಣ ಸಜ್ಜಾಗಿದೆ ಎಂದು ಜೊಲ್ಲೆ ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ