ಮೌಢ್ಯತೆಯ ಪರಾಕಾಷ್ಠೆ: ಕೊರೋನಾ ಓಡಿಸಲು ಟ್ರ್ಯಾಕ್ಟರ್ ನಲ್ಲಿ ಅನ್ನ ತಂದು ಊರಾಚೆ ಸುರಿದ ಗ್ರಾಮಸ್ಥರು!

ಕೊರೋನಾ ಸೋಂಕಿನ ಸಂಖ್ಯೆ ರಾಜ್ಯಾದ್ಯಂತ ಏರುತ್ತಿರುವ ಬೆನ್ನಲ್ಲೇ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮೂಢನಂಬಿಕೆಯ ಹಲವು ಆಚರಣೆಗಳು ನಡೆಯುತ್ತಿವೆ.
ಅನ್ನ ಸುರಿದ ಗ್ರಾಮಸ್ಥರು
ಅನ್ನ ಸುರಿದ ಗ್ರಾಮಸ್ಥರು
Updated on

ಹುಬ್ಬಳ್ಳಿ: ಕೊರೋನಾ ಸೋಂಕಿನ ಸಂಖ್ಯೆ ರಾಜ್ಯಾದ್ಯಂತ ಏರುತ್ತಿರುವ ಬೆನ್ನಲ್ಲೇ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮೂಢನಂಬಿಕೆಯ ಹಲವು ಆಚರಣೆಗಳು ನಡೆಯುತ್ತಿವೆ.

ಬಳ್ಳಾರಿ, ಗದಗ, ಹಾವೇರಿ ಜಿಲ್ಲೆಗಳ ಸುತ್ತಮುತ್ತಲ ಹಳ್ಳಿಗಳಲ್ಲಿ ಕೊರೋನಾ ವೈರಸ್ ಓಡಿಸಲು ಹಲವು ರೀತಿಯ ಮೌಡ್ಯತೆ ಅನುಸರಿಸಲಾಗುತ್ತಿದೆ. 

ಬಳ್ಳಾರಿಯ ಕೂಳಗಲ್ಲು ಗ್ರಾಮದಲ್ಲಿ ನಡೆದ ಆಚರಣೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವಿರೋಧಕ್ಕೆ ಕಾರಣವಾಗಿದೆ. ಪ್ರತಿ ಮನೆಯಲ್ಲಿಯೂ ಬೇಯಿಸಿದ ಅನ್ನವನ್ನು ಟ್ರ್ಯಾಕ್ಟರ್ ನಲ್ಲಿ ತೆಗೆದುಕೊಂಡು ಹೋಗಿ ಊರಾಚೆ ಚೆಲ್ಲಿದ್ದಾರೆ.

ಗ್ರಾಮದ ಪ್ರತಿ ಮನೆಯೂ ಅಕ್ಕಿ ಬೇಯಿಸಿ ಆಚರಣೆಗೆ ಕೊಡುಗೆ ನೀಡಬೇಕು ಎಂದು ಗ್ರಾಮಸ್ಥರು ಹೇಳಿಕೊಂಡರು. ಕೋಳಿ ಅಥವಾ ಬೇರೆಯಾವುದಾದರೂ ಜೀವಿಯ ರಕ್ತವನ್ನು ಅಕ್ಕಿಯೊಂದಿಗೆ ಬೆರೆಸಲಾಗುತ್ತದೆ. ಈ ಅನ್ನವನ್ನು ಊರಾಚೆ ಚೆಲ್ಲಿದರೆ ದುಷ್ಟಶಕ್ತಿಗಳು ಗ್ರಾಮ ಪ್ರವೇಶಿಸುವುದಿಲ್ಲ ಎಂಬ ನಂಬಿಕೆಯಿದೆ.

ಎರಡು ವಾರಗಳ ಹಿಂದೆ ಗ್ರಾಮದ ಜನರು ಮಧ್ಯರಾತ್ರಿಯಲ್ಲಿ ಕೋಲು ಮತ್ತು ಡ್ರಮ್ ಗಳನ್ನು ಹಿಡಿದುಕೊಂಡ ನೂರಾರು ಮಂದಿ ಮೆರವಣಿಗೆ ನಡೆಸಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದನ್ನು ನೋಡಿದ ಪೊಲೀಸರು ಆಶ್ಚರ್ಯ ಚಕಿತರಾಗಿದ್ದರು.

ಟ್ರ್ಯಾಕ್ಟರ್ ನಲ್ಲಿ ಅನ್ನ ತಂದು ಸುರಿದ ವಿಡಿಯೋ ವೈರಲ್ ಆದ ನಂತರ, ಗ್ರಾಮದ ಕೆಲ ಯುವಕರು ಸಂಬಂಧಿಸಿದ ಆಡಳಿತಾಧಿಕಾರಿಗಳನ್ನು ಭೇಟಿ ಮಾಡಿ ಕೃತ್ಯಕ್ಕೆ ಕಾರಣರಾದ ಐವರು ಮುಖಂಡರ ವಿರುದ್ಧ ಲಿಖಿತ ದೂರು ದಾಖಲಿಸಿದ್ದಾರೆ.

ಕೊರೋನಾ ವೈರಸ್ ನಿವಾರಣೆಗೆ ಪ್ರತಿ ಮನೆಯವರು ಅಕ್ಕಿ ಬೇಯಿಸಿ ಅನ್ನಮಾಡಿ ಕೊಡಬೇಕು ಎಂದು ಶುಕ್ರವಾರ ಸಂಜೆ ಗ್ರಾಮದ ಮುಖ್ಯಸ್ಥರು ಆದೇಶ ನೀಡಿದ್ದರು. ಇಂತಹ ಕೃತ್ಯಗಳಿಂದ ನಮ್ಮ ಹಳ್ಳಿಗೆ ಕೆಟ್ಟ ಹೆಸರು ಬಂದಿದೆ. ನಾವು ಬಳ್ಳಾರಿ ಪೊಲೀಸರಿಗೆ ಲಿಖಿತ ದೂರು ನೀಡಿದ್ದೇವೆ” ಎಂದು ಕೂಳಗಲ್ಲು ಗ್ರಾಮದ ಯುವಕ ಹೇಳಿದರು.

ಹಾವೇರಿಯ ಕುಂಚೂರಿನ ಗ್ರಾಮಸ್ಥರು ವೈರಸ್ ತೊಡೆದುಹಾಕಲು ವಿಭಿನ್ನವಾದ ಆಚರಣೆ ಮಾಡಿದ್ದಾರೆ. ಸುಮಾರು 80 ಮನೆಗಳಲ್ಲಿ ಕೋಳಿಯನ್ನು ಬಲಿಕೊಡಲಾಗಿದೆ. ಗದಗ ಜಿಲ್ಲೆಯ ಗ್ರಾಮಸ್ಥರು ಕರೋನಾ ದೇವಿಯ ಸಣ್ಣ ಪ್ರತಿಮೆಗಳನ್ನು ತಯಾರಿಸಿ, ತಮ್ಮ ಹಳ್ಳಿಗಳಿಂದ ವೈರಸ್ ಹೊರಹಾಕುವಂತೆ ಪ್ರಾರ್ಥಿಸಿದರು.

ಹಲವು ಸ್ಥಳಗಳಲ್ಲಿ ಅನ್ನವಿಲ್ಲದೆ ಜನ ಸಂಕಟ ಪಡುತ್ತಿದ್ದಾರೆ, ಆದರೆ ಇಂತ ಸಮಯದಲ್ಲಿ ಈ ರೀತಿ ವ್ಯರ್ಥ ಮಾಡುವುದು ಅಪರಾಧ ಎಂದು ಮಂಗಳೂರಿನ ಪ್ರಸಿದ್ದ ವಿಚಾರವಾದಿ ನರೇಂದ್ರ ನಾಯಕ್ ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ ನಮ್ಮ ಪೂರ್ವಿಕರು ಆಚರಣೆ ಮಾಡಿದ್ದಾರೆಂಬ ಕಾರಣಕ್ಕೆ ನಾವು ಅದನ್ನು ಆಚರಿಸಬೇಕೆಂದಿಲ್ಲ. ಕೊರೋನಾದಿಂದ ಶೇ.90 ರಷ್ಟು ಮಂದಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿರುವ ಅವರು ಬಾಲ್ಯದಿಂದಲೇ ಮಕ್ಕಳಲ್ಲಿ ವೈಚಾರಿಕ ಚಿಂತನೆ ಬೆಳೆಸುವುದು ಅಗತ್ಯ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com