ಗ್ರಾಮೀಣಾಭಿವೃದ್ಧಿ ಇಲಾಖೆ ಸಿಬ್ಬಂದಿ ಕೊರೊನಾ ವಾರಿಯರ್ಸ್: ಸಿಎಂ ಯಡಿಯೂರಪ್ಪ ಘೋಷಣೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿಯನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ, ಕಂದಾಯ ಇಲಾಖೆ ಸಿಬ್ಬಂದಿಗೆ ನೀಡುತ್ತಿರುವ ಸೌಲಭ್ಯವನ್ನು ವಿಸ್ತರಿಸಲಾಗುವುದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ
Updated on

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿಯನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ, ಕಂದಾಯ ಇಲಾಖೆ ಸಿಬ್ಬಂದಿಗೆ ನೀಡುತ್ತಿರುವ ಸೌಲಭ್ಯವನ್ನು ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೇ.26 ರಂದು ತಿಳಿಸಿದ್ದಾರೆ.

ಅವರು ಇಂದು ಬೆಳಗಾವಿ, ಬಳ್ಳಾರಿ, ಶಿವಮೊಗ್ಗ ಹಾಗೂ ಮೈಸೂರು ಜಿಲ್ಲೆಗಳ ಆಯ್ದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಪಿಡಿಓ ಗಳೊಂದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರು ಹಾಗೂ ವಿವಿಧ ಪಂಚಾಯಿತಿ ಅಧ್ಯಕ್ಷರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಯವರು ಈ ಘೋಷಣೆ ಮಾಡಿದರು.

ಕೋವಿಡ್ 19 ಸೋಂಕಿನ 2ನೇ ಅಲೆ ಗ್ರಾಮೀಣ ಪ್ರದೇಶದಲ್ಲಿ ತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಇಂದು ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಪಿಡಿಓ ಗಳೊಂದಿಗೆ ಸಂವಾದ ನಡೆಸಿ, ಸ್ಥೈರ್ಯ ಮೂಡಿಸಿದರು.

ಕೊರೋನ 2ನೇ ಅಲೆ ಮೊದಲಿಗಿಂತ ವಿಭಿನ್ನವಾಗಿದೆ. ಹೆಚ್ಚು ಹಾನಿಕಾರಕವಾಗಿದೆ. ಕೊರೋನ ಸೊಂಕು ತ್ವರಿತವಾಗಿ ವ್ಯಾಪಿಸುತ್ತಿದ್ದು ತುರ್ತು ನಿವಾರಣ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯವಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕಳೆದ ವಾರ ಘೋಷಿಸಿದ ಪ್ಯಾಕೇಜ್‍ನಲ್ಲಿ ಎಲ್ಲಾ ಗ್ರಾಮ ಪಂಚಾಯತ್‍ಗಳಿಗೂ ಎಸ್.ಡಿ.ಆರ್.ಎಫ್ ನಿಧಿಯಿಂದ ತಲಾ ರೂ. 50,000/- ಗಳನ್ನು ಬಿಡುಗಡೆ ಮಾಡಲು ಆದೇಶಿಸಿರುತ್ತೇನೆ. ಸದ್ಯದಲ್ಲಿಯೇ ಹಣ ತಮ್ಮ ಕೈ ಸೇರಲಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಈಗಾಗಲೇ 14ನೇ ಹಣಕಾಸು ಆಯೋಗದ ಅನುದಾನದ ಉಳಿಕೆ ಹಣ, 15ನೇ ಹಣಕಾಸು ಆಯೋಗದ ಅನಿರ್ಬಂದಿತ ಅನುದಾನ ಹಾಗೂ ಗ್ರಾಮ ಪಂಚಾಯತ್ ಸ್ವಂತ ಸಂಪನ್ಮೂಲವನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ.

ಕೋವಿಡ್ ಮುನ್ನೆಚ್ಚರಿಕೆಯ ಮಾರ್ಗಸೂಚಿಗಳು ಹಾಗೂ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ವಿಧಿಸಿರುವ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ ಮುಖ್ಯಮಂತ್ರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಸಂತೆ, ಜಾತ್ರೆ ಮತ್ತಿತರ ಕಾರ್ಯಕ್ರಮಗಳ ನಿಷೇಧವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.

ಸೋಂಕಿತರಿಗೆ ನೆರವಾಗಲು ಗ್ರಾಮ ಪಂಚಾಯತ್‍ಗಳಲ್ಲಿ ಹೆಲ್ಪ್ ಡೆಸ್ಕ್ ಹಾಗೂ ಹೆಲ್ಪ್ ಲೈನ್ ಗಳನ್ನು ಪ್ರಾರಂಭಿಸಬೇಕು. ಕಾರ್ಯಪಡೆಗಳ ಜೊತೆ ಕಾರ್ಯನಿರ್ವಹಿಸಲು ಸ್ವಯಂ ಸೇವಾ ಸಂಸ್ಥೆಗಳು ಹಾಗೂ ದಾನಿಗಳ ನೆರವನ್ನು ಪಡೆಯಬಹುದು ಎಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು.

ಮಕ್ಕಳು, ಮಹಿಳೆಯರು, ವಿಶೇಷ ಚೇತನರು ಹಾಗೂ ವೃದ್ಧರು ತೊಂದರೆಯಲ್ಲಿದ್ದಲ್ಲಿ ಅವರಿಗೆ ಊಟೋಪಚಾರದ ವ್ಯವಸ್ಥೆ ಮಾಡಬೇಕು. ಒಂದು ಪಕ್ಷ ಸೋಂಕಿತರು ಮೃತಪಟ್ಟು ಮಕ್ಕಳು ಅನಾಥರಾದಲ್ಲಿ ಅವರನ್ನು ಯಾರು ದತ್ತು ತೆಗೆದುಕೊಳ್ಳಲು ಬಿಡಬಾರದು. ಬದಲಾಗಿ ‘ಮಕ್ಕಳ ರಕ್ಷಣಾ ಸಮಿತಿ’ಗಳಿಗೆ ಸೇರಿಸಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.  

ಕೋವಿಡ್ ನಿಯಂತ್ರಣ- ಗ್ರಾ.ಪಂ. ಅಧ್ಯಕ್ಷರಿಗೆ ಮುಖ್ಯಮಂತ್ರಿ ಅಭಿನಂದನೆ

ಬಳ್ಳಾರಿ ಜಿಲ್ಲೆಯ ಅಲಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ, 64 ವರ್ಷದ ಶಿವಾನಂದಪ್ಪ ಅವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಸಕ್ರಿಯ ಪ್ರಕರಣಗಳನ್ನು 36 ರಿಂದ 1ಕ್ಕೆ ಇಳಿಸಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಶಾಂತಿ ಸಭೆಗಳನ್ನು ನಡೆಸಿ, ಜಾತ್ರೆ ಮತ್ತಿತರ ಸಮಾರಂಭ ನಡೆಸದಂತೆ ಗ್ರಾಮಸ್ಥರ ಮನವೊಲಿಸಿರುವುದಾಗಿ ಶಿವಾನಂದಪ್ಪ ಅವರು ಮಾಹಿತಿ ನೀಡಿದರು.

ಗ್ರಾಮೀಣ ಪ್ರದೇಶದಲ್ಲಿ ಮನೆಗಳು ಸಣ್ಣದಾಗಿರುವ ಕುಟುಂಬಗಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡರೆ, ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರುಗಳಿಗೆ ದಾಖಲಿಸುವಂತೆ ಮುಖ್ಯಮಂತ್ರಿಗಳು ಎಲ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು, ಕೋವಿಡ್ 19 ಮೊದಲ ಅಲೆ ಯಶಸ್ವಿಯಾಗಿ ನಿಯಂತ್ರಿಸುವಲ್ಲಿ ಗ್ರಾಮ ಪಂಚಾಯತ್ ಟಾಸ್ಕ್ ಫೋರ್ಸ್ ಗಳು ಮಹತ್ವದ ಪಾತ್ರ ವಹಿಸಿವೆ. ಇದೀಗ ಎರಡನೇ ಅಲೆಯನ್ನೂ ನಿಯಂತ್ರಿಸುವಲ್ಲಿ  ಈ ಟಾಸ್ಕ್ ಫೋರ್ಸ್ ಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ.ಕಂಟೇನ್ ಮೆಂಟ್ ಝೋನ್ ಗಳನ್ನು ಹೊರತು ಪಡಿಸಿ, ಇತರ ಪ್ರದೇಶಗಳಲ್ಲಿ ನರೇಗಾ ಕಾಮಗಾರಿ ನಡೆಸುತ್ತಿರುವುದಕ್ಕೆ ಸಚಿವರು ಹರ್ಷ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಸರ್ಕಾರದ ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com