ಬೆಂಗಳೂರು: ತಂಬಾಕು ಉತ್ಪನ್ನಗಳ ಮೇಲಿರುವ ‘ಪರಿಹಾರ ಸೆಸ್’ ಅನ್ನು ಹೆಚ್ಚಿಸುವಂತೆ ಸಾರ್ವಜನಿಕ ಆರೋಗ್ಯ ಗುಂಪುಗಳು ವೈದ್ಯರು ಮತ್ತು ಧೂಮಪಾನಿಗಳೊಂದಿಗೆ ಜಿಎಸ್‌ಟಿ ಮಂಡಳಿಯನ್ನು ಒತ್ತಾಯಿಸಿದ್ದಾರೆ.
ಮೇ. 28ರಂದು ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆ ಹಿನ್ನೆಲೆಯಲ್ಲಿ ಈ ಮನವಿ ಮಾಡಲಾಗಿದ್ದು, ಹೆಚ್ಚುವರಿ ಆದಾಯ ಕ್ರೋಡೀಕರಿಸುವ ನಿಟ್ಟಿನಲ್ಲಿ ಎಲ್ಲ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚಿನ ಪರಿಹಾರ ಸೆಸ್ ವಿಧಿಸುವ ಅಸಾಧಾರಣ ಕ್ರಮವನ್ನು ಪರಿಗಣಿಸುವಂತೆ ಒತ್ತಾಯಿಸಿದ್ದಾರೆ.
ಕೊರೋನ ಕಾಲದಲ್ಲಿ ಲಸಿಕೆಯೂ ಸೇರಿದಂತೆ ಹೆಚ್ಚು ಅಗತ್ಯವಾಗಿರುವ ಸಂಪನ್ಮೂಲ ಕ್ರೋಡೀಕರಿಸಲು ಮತ್ತು ಸಂಭವನೀಯ ಕೋವಿಡ್ ಮೂರನೇ ಅಲೆ ಎದುರಿಸಲು ಆರೋಗ್ಯ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಈ ತೆರಿಗೆ ಆದಾಯ ಗಮನಾರ್ಹ ಕೊಡುಗೆಯಾಗಬಹುದು. ಸಾರ್ವಜನಿಕ ಆರೋಗ್ಯ ಗುಂಪುಗಳ ಪ್ರಕಾರ, ಈ ಸವಾಲಿನ ಸಂದರ್ಭದಲ್ಲಿ ತಂಬಾಕು ತೆರಿಗೆ ಹೆಚ್ಚಿಸುವುದು ಕೋವಿಡ್ ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಆರ್ಥಿಕ ಆಘಾತವನ್ನು ನಿವಾರಿಸುವುದಲ್ಲದೆ, ತಂಬಾಕು ಬಳಕೆಯ ಪ್ರಮಾಣವನ್ನು ನೇರವಾಗಿ ತಗ್ಗಿಸುತ್ತದೆ.
ದೇಶಕ್ಕೆ ಅತಿದೊಡ್ಡ ಆಘಾತ ಉಂಟುಮಾಡಿರುವ ಕೋವಿಡ್-19ರ ಎರಡನೇ ಅಲೆ, ತನ್ನ ಮೊದಲನೇ ಅಲೆಯನ್ನು ಹಿಂದಿಕ್ಕಿ ಹಿಂದೆಂದೂ ಕಂಡಿರದ ಸಂಕಷ್ಟ ಒಡ್ಡಿದೆ. ಕೋವಿಡ್-19ರ ಮೊದಲನೇ ಅಲೆ ಭಾರತದಲ್ಲಿ ಸೃಷ್ಟಿಸಿದ ಆರ್ಥಿಕ ತಲ್ಲಣಗಳಿಂದ ನಲುಗಿದ ಜನರಿಗೆ ಪರಿಹಾರವೆಂಬಂತೆ ಮತ್ತು ಒಟ್ಟಾರೆ ಆರ್ಥಿಕತೆಗೆ ಬಲ ತುಂಬಲು ಭಾರತ ಸರ್ಕಾರ ಹಲವಾರು ಉತ್ತೇಜನಕಾರಿ ಆರ್ಥಿಕ ಪ್ಯಾಕೇಜ್ ಗಳನ್ನು ಘೋಷಿಸಿತ್ತು. ಲಸಿಕಾ ಕಾರ್ಯಕ್ರಮ ಮತ್ತು ಕೋವಿಡ್-19ರ ಸಂಭವನೀಯ ಮೂರನೇ ಅಲೆ ಎದುರಿಸುವ ಸಿದ್ಧತೆಗಾಗಿ ಅಗತ್ಯವಿರುವ ಅಪಾರ ಸಂಪನ್ಮೂಲಗಳ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಅಗತ್ಯಗಳು ಬೆಳೆಯುತ್ತಲೇ ಇವೆ. ಕೋವಿಡ್-19ನಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಿಎಸ್‌ಟಿ ಸಂಗ್ರಹ ಕುಂಠಿತವಾಗಿದ್ದರಿಂದ, ಜಿಎಸ್‌ಟಿ ಅಡಿಯಲ್ಲಿ ಖಾತರಿಪಡಿಸಿದಂತೆ ವಿವಿಧ ರಾಜ್ಯ ಸರ್ಕಾರಗಳಿಗೆ ಪರಿಹಾರ ಸೆಸ್ ಬಾಕಿ ವಿತರಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ.
ಸಿಗರೇಟ್ ಮತ್ತು ಹೊಗೆರಹಿತ ತಂಬಾಕು ಉತ್ಪನ್ನಗಳ ಮೇಲೆ ಅಸ್ತಿತ್ವದಲ್ಲಿರುವ ಪರಿಹಾರ ಸೆಸ್ ಹೆಚ್ಚಿಸಿ, ಬೀಡಿಗಳಿಗೆ ಪರಿಹಾರದ ಸೆಸ್ ವಿಧಿಸುವುದರಿಂದ ತುರ್ತಾಗಿ ಆದಾಯ ಹೆಚ್ಚಿಸಬಹುದಾಗಿದೆ ಮತ್ತು ರಾಜ್ಯಗಳಿಗೆ ಸಲ್ಲಬೇಕಾದ ಜಿಎಸ್‌ಟಿ ಪಾಲನ್ನು ನೀಡುವ ಪರಿಣಾಮಕಾರಿ ಕ್ರಮವಾಗಬಹುದಾಗಿದೆ. ಇದು ಆದಾಯ ಗಳಿಕೆಗೆ ಸಹಕಾರಿಯಲ್ಲದೆ, ತಂಬಾಕು ಬಳಕೆ ಮತ್ತು ಸಂಬಂಧಿತ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ.
“ಕೋವಿಡ್-19ನಿಂದ ಉಂಟಾಗಿರುವ ಆರ್ಥಿಕ ಆಘಾತದಿಂದ ಚೇತರಿಸಿಕೊಳ್ಳಲು ದೇಶದಲ್ಲಿ ಹಿಂದೆಂದೂ ಕಂಡಿರದ ಹಣಕಾಸು ಸಂಪನ್ಮೂಲಗಳ ಅಗತ್ಯತೆ ಕಂಡುಬರುತ್ತದೆ. ಎಲ್ಲ ತಂಬಾಕು ಉತ್ಪನ್ನಗಳ ಮೇಲೆ ಪರಿಹಾರ ಸೆಸ್ ಹೆಚ್ಚಿಸುವುದರಿಂದ ಸರ್ಕಾರಕ್ಕೆ ಸಾಕಷ್ಟು ಆದಾಯವೂ ಹರಿದುಬರುತ್ತದೆ ಮತ್ತು ತಂಬಾಕು ತ್ಯಜಿಸಲು ಲಕ್ಷಾಂತರ ಬಳಕೆದಾರರನ್ನು ಉತ್ತೇಜಿಸುತ್ತದೆ.
ಅಲ್ಲದೆ, ಯುವಜನರು ತಂಬಾಕಿನತ್ತ ಮುಖ ಮಾಡದಂತೆ ತಡೆಯುತ್ತದೆ. ಹೀಗಾಗಿ, ತಂಬಾಕು ಉತ್ಪನ್ನಗಳ ಮೇಲೆ ಪರಿಹಾರ ಸೆಸ್ ಹೆಚ್ಚಿಸುವುದರಿಂದ ಸಮಲಾಭ ಸ್ಥಿತಿ ನಿರ್ಮಾಣವಾಗುತ್ತದೆ,” ಎನ್ನುತ್ತಾರೆ ಬೆಂಗಳೂರಿನ ನೀತಿ ಸಂಶೋಧನಾ ಸಂಸ್ಥೆಯ (ಇನ್ಸ್ಟಿಟ್ಯೂಟ್ ಫಾರ್ ಪಾಲಿಸಿ ರಿಸರ್ಚ್) ನಿರ್ದೇಶಕಿ (ಪಾಲಿಸಿ ಮತ್ತು ಸ್ಟ್ರಾಟೆಜಿ) ಸೀತಾಲಕ್ಷ್ಮಿ ಎಸ್.
ತಂಬಾಕು ಬಳಕೆಯು ತೀವ್ರವಾದ ಕೋವಿಡ್-19 ಸೋಂಕು, ಸಮಸ್ಯೆ, ಮತ್ತು ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ. ಲಭ್ಯವಿರುವ ಸಂಶೋಧನೆಗಳು ಧೂಮಪಾನಿಗಳು ತೀವ್ರ ರೋಗಕ್ಕೆ ತುತ್ತಾಗುವ ಮತ್ತು ಕೋವಿಡ್-19ನಿಂದ ಸಾಯುವ ಹೆಚ್ಚಿನ ಸಾಧ್ಯತೆಯಿದೆ ಎಂದು ಸೂಚಿಸುತ್ತವೆ. ಕಳೆದ 14 ತಿಂಗಳುಗಳಲ್ಲಿ ಭಾರತದಲ್ಲಿ 3 ಲಕ್ಷಕ್ಕೂ ಹೆಚ್ಚು ಜನ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ನಿಧಾನಗತಿಯ ಸಾಂಕ್ರಾಮಿಕ ರೋಗ ಎನ್ನಬಹುದಾದ ತಂಬಾಕು ಬಳಕೆ ಪ್ರತಿವರ್ಷ 13 ಲಕ್ಷ ಭಾರತೀಯರನ್ನು ಬಲಿಪಡಿಯುತ್ತಿದೆ. ಹೀಗಿರುವಾಗ, ತಂಬಾಕು ಉತ್ಪನ್ನಗಳ ಯುವಜನರು ಮತ್ತು ಸಮಾಜದ ದುರ್ಬಲ ವರ್ಗದವರ ಕೈಗೆಟುಕದಂತೆ ಮಾಡುವುದು ಹಿಂದೆಂದಿಗಿಂತಲೂ ಅವಶ್ಯವಾಗಿದೆ.
“ಧೂಮಪಾನ ಮತ್ತು ಹೊಗೆರಹಿತ ತಂಬಾಕು ಕೋವಿಡ್-19 ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಧೂಮಪಾನವು ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಕುಗ್ಗಿಸಿ, ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಕೋವಿಡ್ ಸೋಂಕಿಗೆ ತುತ್ತಾಗುವ ತಂಬಾಕು ಬಳಕೆದಾರರು ಹೆಚ್ಚು ತೊಂದರೆ ಅನುಭವಿಸುತ್ತಾರೆ. ಅಷ್ಟೇ ಅಲ್ಲ, ಮರಣ ಹೊಂದುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ. ತಂಬಾಕು ಬಳಕೆಯಿಂದ ಆಗುತ್ತಿರುವ ಆರೋಗ್ಯ ಮತ್ತು ಪ್ರಾಣಹಾನಿಯನ್ನು ತಡೆಗಟ್ಟಲು ಹಾಗು ಕೋವಿಡ್ ಗೆ ತುತ್ತಾಗುವುದನ್ನು ತಪ್ಪಿಸಲು ಎಲ್ಲ ತಂಬಾಕು ಉತ್ಪನ್ನಗಳ ಮೇಲಿರುವ ತೆರಿಗೆಯನ್ನು ಕೂಡಲೇ ಹೆಚ್ಚಿಸಿ ಅವು ಕೈಗೆಟುಕದಂತೆ ಮಾಡಿ ತಂಬಾಕಿನ ಬಳಕೆ ಕಡಿಮೆಯಾಗುವಂತೆ ನೋಡಿಕೊಳ್ಳಬೇಕು,” ಎಂದು ಪ್ರಸಿದ್ಧ ಕ್ಯಾನ್ಸರ್ ತಜ್ಞ ಮತ್ತು ತಂಬಾಕು ನಿಯಂತ್ರಣ ಉನ್ನತ ಮಟ್ಟದ ಸಮಿತಿ, ಕರ್ನಾಟಕ ಸರ್ಕಾರ, ಸದಸ್ಯರಾದ ಡಾ. ವಿಶಾಲ್ ರಾವ್ ತಿಳಿಸಿದರು.
“ಹೆಚ್ಚಿನ ತೆರಿಗೆಗಳ ಮೂಲಕ ಬರುವ ಆದಾಯವನ್ನು ಕೋವಿಡ್ ಚಿಕಿತ್ಸೆ ಮತ್ತು ಲಸಿಕೆಗೆ ಬಳಸಬಹುದು. ತೆರಿಗೆಯನ್ನು ದ್ವಿಗುಣಗೊಳಿಸುವ ಮೂಲಕ ಆದಾಯವನ್ನು ಮೂರು ಪಟ್ಟು ಹೆಚ್ಚಿಸಬಹುದು ಮತ್ತು ಸಾವುಗಳನ್ನು ಅರ್ಧದಷ್ಟು ಕಡಿಮೆ ಮಾಡಬಹುದು,” ಎಂದು ಡಾ. ವಿಶಾಲ್ ರಾವ್ ಹೇಳಿದರು.
ಜುಲೈ 2017 ರಲ್ಲಿ ಜಿಎಸ್‌ಟಿ ಜಾರಿಗೆ ಬಂದಾಗಿನಿಂದ ತಂಬಾಕು ತೆರಿಗೆಗಳಲ್ಲಿ ಹೇಳಿಕೊಳ್ಳುವಂತ ಏರಿಕೆಯಾಗಿಲ್ಲ ಮತ್ತು ವಿರೋಧಾಭಾಸವೆಂಬಂತೆ ಎಲ್ಲ ತಂಬಾಕು ಉತ್ಪನ್ನಗಳು ಕಳೆದ ಮೂರು ವರ್ಷಗಳಲ್ಲಿ ಹೆಚ್ಚು ಕೈಗೆಟುಕುವಂತಾಗಿವೆ. ಒಟ್ಟು ತೆರಿಗೆ ಹೊರೆಯನ್ನು (ಅಂತಿಮ ಚಿಲ್ಲರೆ ಬೆಲೆಯಲ್ಲಿ (ಎಂಆರ್ ಪಿ) ತೆರಿಗೆಯ ಭಾಗ) ಗಮನಿಸಿದಾಗ ಸಿಗರೇಟ್‌ಗಳಿಗೆ ಕೇವಲ 52.7%, ಬೀಡಿಗಳಿಗೆ 22% ಮತ್ತು ಹೊಗೆರಹಿತ ತಂಬಾಕಿಗೆ 63.8%ರಷ್ಟು ತೆರಿಗೆ ವಿಧಿಸಿರುವುದನ್ನು ಕಾಣಬಹುದು. ವಿಶ್ವ ಆರೋಗ್ಯ ಸಂಸ್ಥೆಯ (WHO) ಎಲ್ಲ ತಂಬಾಕು ಉತ್ಪನ್ನಗಳ ಮೇಲೆ ಅವುಗಳ ಚಿಲ್ಲರೆ ಬೆಲೆಯ ಕನಿಷ್ಠ ಶೇ. 75% ರಷ್ಟು ತೆರಿಗೆ ಹೊರೆ ವಿಧಿಸಬೇಕೆಂಬ ಶಿಫಾರಸ್ಸಿಗೆ ಹೋಲಿಸಿದರೆ ಇದು ತುಂಬಾ ಕಡಿಮೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ತೆರಿಗೆ ಹೆಚ್ಚಳದ ಮೂಲಕ ತಂಬಾಕು ಉತ್ಪನ್ನಗಳ ಬೆಲೆ ಹೆಚ್ಚಿಸುವುದು ತಂಬಾಕು ಬಳಕೆಯನ್ನು ಕಡಿಮೆ ಮಾಡಲು ಇರುವ ಅತ್ಯಂತ ಪರಿಣಾಮಕಾರಿ ನೀತಿ. ದುಬಾರಿ ತಂಬಾಕು ಬೆಲೆ ಕೊಳ್ಳುವ ಶಕ್ತಿಯನ್ನು ಕುಗ್ಗಿಸಿ, ತಂಬಾಕನ್ನು ತ್ಯಜಿಸಲು ಪ್ರೋತ್ಸಾಹಿಸುತ್ತದೆ ಮತ್ತು ವ್ಯಸನಿಗಳಲ್ಲಿ ಸೇವನೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ತಂಬಾಕು ಬಳಕೆದಾರರಲ್ಲದವರು ಅದರ ಬಳಕೆಯನ್ನು ಪ್ರಾರಂಭಿಸುವುದನ್ನು ತಡೆಗಟ್ಟುತ್ತದೆ.
“ಧೂಮಪಾನ ನನಗೆ ಬಹಳಷ್ಟು ವ್ಯಥೆ ಮತ್ತು ದುಃಖ ಉಂಟು ಮಾಡಿದೆ. ಧೂಮಪಾನದ ಅಭ್ಯಾಸವು ನನ್ನ ತೀವ್ರವಾದ ಕೋವಿಡ್ ಸೋಂಕಿಗೆ ಕಾರಣವಾಗಿದೆ ಎಂದು ನನಗೆ ಅರ್ಥವಾಗುವಷ್ಟರಲ್ಲಿ ತಡವಾಗಿತ್ತು. ಇದರಿಂದ ನನ್ನ ಕುಟುಂಬವೂ ಸಾಕಷ್ಟು ಬಳಲುತ್ತಿದೆ. ತಂಬಾಕು ಉತ್ಪನ್ನಗಳ ಬೆಲೆಯನ್ನು ಎಷ್ಟು ದುಬಾರಿ ಮಾಡಬೇಕೆಂದರೆ ಅವು ಕೈಗೆಟುಕದಂತಿರಬೇಕು ಹಾಗು ಜನರನ್ನು ಅವುಗಳ ವ್ಯಸನದಿಂದ ಮುಕ್ತಗೊಳಿಸಬೇಕು ಎಂದು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ,” ಎಂದು ಹೇಳುತ್ತಾರೆ.
ತಂಬಾಕು ಬಳಕೆದಾರರ ಪಟ್ಟಿಯಲ್ಲಿ ಜಾಗತಿಕವಾಗಿ ಭಾರತ ಎರಡನೇ ಸ್ಥಾನದಲ್ಲಿದ್ದು (268 ಮಿಲಿಯನ್), ಪ್ರತಿವರ್ಷ 13 ಲಕ್ಷ ಮಂದಿ ತಂಬಾಕು ಸಂಬಂಧಿತ ಖಾಯಿಲೆಗಳಿಂದ ಮೃತಪಡುತಿದ್ದಾರೆ. ಭಾರತದಲ್ಲಿನ ಎಲ್ಲ ವಿಧದ ಕ್ಯಾನ್ಸರ್ ಗಳಿಗೆ ತಂಬಾಕು ಬಳಕೆ ಶೇ. 27%ರಷ್ಟು ಕಾರಣವಾಗಿದೆ. ಯಾವುದೇ ಬಗೆಯ ತಂಬಾಕು ಬಳಕೆಗೂ (ಧೂಮಪಾನ/ಜಗಿಯುವುದು) ಕೋವಿಡ್-19 ಸಂಬಂಧಿತ ಸಾವು-ನೋವುಗಳಿಗೂ ನಿಕಟ ನಂಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ. 2017-18ರಲ್ಲಿ ತಂಬಾಕು ಸಂಬಂದಿತ ಖಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ 177,341 ಕೋಟಿ ರೂಪಾಯಿಗಳನ್ನು ವ್ಯಯಿಸಿದ್ದು, ಇದು ಭಾರತದ ಜಿಡಿಪಿಯ ಶೇ. 1% ರಷ್ಟಾಗಿದೆ. ಇದು ಕೋವಿಡ್-19 ನಂತರ ಮತ್ತಷ್ಟು ಹೆಚ್ಚಾಗಲಿದೆ.
Advertisement