ಲಕ್ಷ ಕಂಠಗಳ ಗಾಯನದಲ್ಲಿ ಮಿಂದೆದ್ದ ಸಂಚಾರಿ ಪೊಲೀಸರು: ಮಾತಾಡ್ ಮಾತಾಡ್ ಕನ್ನಡ ಅಭಿಯಾನಕ್ಕೆ ಸಾಥ್

ಜನರಿಗೆ ಮಾರ್ಗದರ್ಶಕರಾಗಿ ರಸ್ತೆ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸುವ ಜೊತೆಗೆ ಕಾಲ ಕಾಲಕ್ಕೆ  ಥರಹೇವಾರಿ ವಿಭಿನ್ನ ಯೋಜನೆಗಳ ಮೂಲಕ ಗಮನ ಸೆಳೆಯುವ ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಮಾತಾಡ್ ಮಾತಾಡ್ ಕನ್ನಡ ಅಭಿಯಾನದಲ್ಲಿ ಕೈಜೋಡಿಸಿದರು.
ಟ್ರಾಫಿಕ್ ಪೊಲೀಸರ ಗಾಯನ
ಟ್ರಾಫಿಕ್ ಪೊಲೀಸರ ಗಾಯನ
Updated on

ಬೆಂಗಳೂರು: ಲಕ್ಷ ಕಂಠಗಳ ಗಾಯನ ಕಾರ್ಯಕ್ರಮದಡಿ ಸರ್ಕಾರದ ವಿವಿಧ ಇಲಾಖೆಗಳ ಸಿಬ್ಬಂದಿ ವರ್ಗ ಏಕ ಕಾಲಕ್ಕೆ ರಾಜ್ಯಾದ್ಯಂತ ನಾಡ ಗೀತೆ, ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ ಮತ್ತು ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ಹಾಡುಗಳನ್ನು ಹಾಡುವುದರ ಮೂಲಕ ಲಕ್ಷ ಕಂಠಗಳ ಗಾಯನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದು ಈಗ ಇತಿಹಾಸ.

ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಇಂಧನ, ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾದ ವಿ. ಸುನಿಲ್ ಕುಮಾರ್ ನೇತೃತ್ವದಲ್ಲಿ ಮೂಡಿ ಬಂದ ಈ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಸಂಚಾರಿ ಪೊಲೀಸರೂ ವಿದ್ಯುಕ್ತವಾಗಿ ಪಾಲ್ಗೊಂಡು ಅಭಿಯಾನದ ಕಳೆ ಹೆಚ್ಚಿಸಿದ್ದಾರೆ. ಟ್ರಾಫಿಕ್ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ರವಿಕಾಂತೇ ಗೌಡ ಅವರ ಮುಂದಾಳತ್ವದಲ್ಲಿ, ಬೆಂಗಳೂರು ನಗರ ಸಂಚಾರಿ ಪೊಲೀಸರು ಕನ್ನಡ ಗೀತೆಗಳ ಲಕ್ಷ ಕಂಠ ಗಾಯನದಲ್ಲಿ ಪಾಲ್ಗೊಂಡರು. 

ಜನರಿಗೆ ಮಾರ್ಗದರ್ಶಕರಾಗಿ ರಸ್ತೆ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸುವ ಜೊತೆಗೆ ಕಾಲ ಕಾಲಕ್ಕೆ  ಥರಹೇವಾರಿ ವಿಭಿನ್ನ ಯೋಜನೆಗಳ ಮೂಲಕ ಗಮನ ಸೆಳೆಯುವ ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಮಾತಾಡ್ ಮಾತಾಡ್ ಕನ್ನಡ ಅಭಿಯಾನದಲ್ಲಿ ಕೈಜೋಡಿಸಿದ್ದಾರೆ.

ಉಚಿತ ಹೆಲ್ಮೆಟ್ ಹಂಚುವಿಕೆ, ಕೊರೊನಾ ಸಮಯದಲ್ಲಿ ಮಾಸ್ಕ್ ಧರಿಸುವಂತೆ ಸವಾರರಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ಹತ್ತು ಹಲವು ವಿನೂತನ ಅಭಿಯಾನಗಳಲ್ಲಿ ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಭಾಗಿಯಾಗಿದ್ದರು. ಇತ್ತೀಚಿಗಷ್ಟೆ ಕೆಲ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವ ಮೂಲಕ ಟ್ರಾಫಿಕ್ ಪೊಲೀಸರು ಕರ್ತವ್ಯ ನಿಷ್ಟೆಯ ಜೊತೆ ನಾಗರಿಕ ಜವಾಬ್ದಾರಿಯನ್ನೂ ಮೆರೆದಿದ್ದರು.

ಕರ್ನಾಟಕ ರಾಜ್ಯ ಸರ್ಕಾರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ 'ಮಾತಾಡ್ ಮಾತಾಡ್ ಕನ್ನಡ' ಅಭಿಯಾನದಡಿ ಲಕ್ಷ ಕಂಠಗಳ ಗಾಯನ ಎನ್ನುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲೇ ಮಾತನಾಡುವುದು, ಕನ್ನಡದಲ್ಲೇ ಬರೆಯುವುದು, ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುವುದು, ಕನ್ನಡ ನಾಡಲ್ಲಿ ವಾಸವಿರುವ ಕನ್ನಡೇತರ ಬಂಧುಗಳಿಗೆ ಪ್ರೀತಿಯಿಂದ ಕನ್ನಡ ಕಲಿಸುವುದು ಇವಿಷ್ಟೂ ಕಾರ್ಯಕ್ರಮದ ಆಶಯವಾಗಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com