ಬೆಂಗಳೂರು: 'ರಸ್ತೆ ಗುಂಡಿಗಳ ಹಬ್ಬ'ದೊಂದಿಗೆ ಆಮ್ ಆದ್ಮಿ ಪಕ್ಷದಿಂದ ವಿನೂತನ ಪ್ರತಿಭಟನೆ
ರಸ್ತೆ ಗುಂಡಿಗಳ ಹಬ್ಬದೊಂದಿಗೆ ಆಮ್ ಆದ್ಮಿ ಪಕ್ಷ ಬುಧವಾರ ನಗರದ ವಿವಿಧೆಡೆ ಆಯೋಜಿಸಿದ್ದ ವಿನೂತನ ರೀತಿಯ ಪ್ರತಿಭಟನೆಯಲ್ಲಿ ನಾಗರಿಕರು ಪಾಲ್ಗೊಂಡಿದ್ದರು.
Published: 21st October 2021 12:57 PM | Last Updated: 21st October 2021 06:21 PM | A+A A-

ಆಮ್ ಆದ್ಮಿ ಪಕ್ಷದಿಂದ ವಿನೂತನ ರೀತಿಯ ಪ್ರತಿಭಟನೆ
ಬೆಂಗಳೂರು: ರಸ್ತೆ ಗುಂಡಿಗಳ ಹಬ್ಬದೊಂದಿಗೆ ಆಮ್ ಆದ್ಮಿ ಪಕ್ಷ ಬುಧವಾರ ನಗರದ ವಿವಿಧೆಡೆ ಆಯೋಜಿಸಿದ್ದ ವಿನೂತನ ರೀತಿಯ ಪ್ರತಿಭಟನೆಯಲ್ಲಿ ನಾಗರಿಕರು ಪಾಲ್ಗೊಂಡಿದ್ದರು.
ರಂಗೋಲಿ, ಹೂಗಳಿಂದ ಅಲಂಕರಿಸಲಾದ ರಸ್ತೆ ಗುಂಡಿಗಳಿಗೆ ಪೂಜೆ ಸಲ್ಲಿಸಲಾಯಿತು. ಹದಗೆಟ್ಟ ರಸ್ತೆಗಾಗಿ ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿನ ರಸ್ತೆಗಳ ದುರಸ್ತಿಗಾಗಿ ರಾಜ್ಯ ಸರ್ಕಾರ 20 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದೆ. ಆದಾಗ್ಯೂ, ರಸ್ತೆ ಗುಂಡಿಗಳು ಹಾಗೆಯೇ ಇವೆ. ಹಳ್ಳ ಬಿದ್ದ ಗುಂಡಿಗಳಿಂದಾಗಿ ಅಪಘಾತ, ಸಾವುಗಳು ಸರ್ವೆ ಸಾಮಾನ್ಯ ಎಂಬಂತಾಗಿದೆ ಎಂದು ಎಎಪಿ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಹೇಳಿದರು.
ರಸ್ತೆಗಳ ಗುಂಡಿಗಾಗಿ ಎಷ್ಚು ವೆಚ್ಚವಾಗಿದೆ ಎಂಬುದರ ಬಗ್ಗೆ ಸರ್ಕಾರ ಲೆಕ್ಕ ನೀಡಬೇಕಾಗಿದೆ. ಯಾವ ರಸ್ತೆಗಾಗಿ ಎಷ್ಟು ಹಣ ವೆಚ್ಚ ಮಾಡಲಾಗಿದೆ. ಕೆಲಸ ನೀಡಿದ ಅಧಿಕಾರಿ ಹಾಗೂ ಗುತ್ತಿಗೆದಾರರ ಹೆಸರು ಹಾಗೂ ಪ್ರತಿಯೊಂದು ರಸ್ತೆಯಲ್ಲಿ ಯಾವ ರೀತಿಯ ಭರವಸೆ ನೀಡಲಾಗಿದೆ ಎಂಬುದರ ಬಗ್ಗೆ ಸರ್ಕಾರ ಶ್ವೇತ ಪತ್ರ ಹೊರಡಿಸಬೇಕೆಂದು ಅವರು ಆಗ್ರಹಿಸಿದರು.
Glimpses from the 'Pothole Habba (festival)’ oragnised by @AAPBangalore to highlight the bad condition of roads in #Bengaluru. “₹20,000 crore of our tax money has gone into this. Where has the money gone?" @AAPKarnataka convenor @aapkaprithvi asked. pic.twitter.com/m3YA3TPPih
— Ralph Alex Arakal (@ralpharakal) October 20, 2021
ಸ್ಥಳೀಯ ಶಾಸಕರು ಹಾಗೂ ಕಾರ್ಪೋರೇಟರ್ ಗಳ ಬೆಂಬಲವಿಲ್ಲದೆ ಇಲ್ಲತಂಹ ಕೆಲಸಗಳು ನಡೆಯಲು ಸಾಧ್ಯವಿಲ್ಲ. ಇವರೆಲ್ಲರ ಪಾತ್ರದ ಬಗ್ಗೆ ತನಿಖೆ ನಡೆಯಬೇಕಾಗಿದೆ. ಈ ಎಲ್ಲಾ ಕೆಲಸಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ಮೇಲ್ವಿಚಾರಣೆಯಲ್ಲಿ ಸರ್ಕಾರ ಕೂಡಲೇ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೀಡಿರುವ ಸಮಯಾವಕಾಶ ಶೀಘ್ರದಲ್ಲಿಯೇ ಮುಕ್ತಾಯಗೊಳ್ಳಲಿದ್ದು, ನ್ಯಾಯಕ್ಕಾಗಿ ಎಎಪಿಯಿಂದ ನ್ಯಾಯಾಲದ ಮೊರೆ ಹೋಗಲಾಗುವುದು ಎಂದು ರೆಡ್ಡಿ ಹೇಳಿದರು. ವಿಜಯನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಗಾಂಧಿನಗರ, ಯಲಹಂಕ, ಬೊಮ್ಮನಹಳ್ಳಿ, ಮಲ್ಲೇಶ್ವರಂ, ಪುಲಿಕೇಶಿನಗರ ಹಾಗೂ ಮಹಾದೇವಪುರದಲ್ಲಿ ಪ್ರತಿಭಟನೆ ನಡೆಯಿತು.