ಆಂಧ್ರ-ಕರ್ನಾಟಕ ಗಡಿ ಭಾಗದ ಈ ಶಾಲೆ ಶಿಥಿಲಾವಸ್ಥೆಯಲ್ಲಿ: ವಿದ್ಯಾರ್ಥಿಗಳ ಜೀವ ಅಪಾಯದಲ್ಲಿ...

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿನ ಆಂಧ್ರಪ್ರದೇಶ-ಕರ್ನಾಟಕ ಗಡಿ ಭಾಗದಲ್ಲಿರುವ ಓಬಳಾಪುರದ ಸರ್ಕಾರಿ ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ವಿದ್ಯಾರ್ಥಿಗಳು ಜೀವಭಯದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. 
ಶಿಥಿಲಾವಸ್ಥೆಯಲ್ಲಿರುವ ಶಾಲೆ
ಶಿಥಿಲಾವಸ್ಥೆಯಲ್ಲಿರುವ ಶಾಲೆ
Updated on

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿನ ಆಂಧ್ರಪ್ರದೇಶ-ಕರ್ನಾಟಕ ಗಡಿ ಭಾಗದಲ್ಲಿರುವ ಓಬಳಾಪುರದ ಸರ್ಕಾರಿ ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ವಿದ್ಯಾರ್ಥಿಗಳು ಜೀವಭಯದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. 

ಶಾಲೆಯ ಕಟ್ಟಡದ ಛಾವಣಿ ಹಾನಿಗೊಳಗಾಗಿದ್ದು, ಗೋಡೆಗಳು ಉರುಳುವ ಸ್ಥಿತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಜೀವ ಭಯದಿಂದ ಕಟ್ಟಡದ ಹೊರಭಾಗದಲ್ಲಿ ಪಾಠ ಕೇಳುವಂತಾಗಿದೆ.

ಚಳ್ಳಕೆರೆಯಿಂದ 42 ಕಿ.ಮೀ ಹಾಗೂ ಆಂಧ್ರದ ಅನಂತಪುರ ಜಿಲ್ಲೆಯ ಕಲ್ಯಾಣದುರ್ಗ, ರಾಯದುರ್ಗದಿಂದ 30 ಕಿ.ಮೀ ದೂರವಿರುವ ಓಬಳಾಪುರದ ಶಾಲೆಯ ಈ ಸ್ಥಿತಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವನ್ನು ತೋರುತ್ತಿದ್ದು, ಎಸ್ ಡಿಎಂಸಿಯ ನಿರಂತರ ಮನವಿಗೂ ಯಾವುದೇ ರೀತಿಯ ಸ್ಪಂದನೆ ಈ ವರೆಗೂ ದೊರೆತಿಲ್ಲ.

1-8 ನೇ ತರಗತಿವರೆಗೂ ತರಗತಿಗಳು ಲಭ್ಯವಿರುವ ಈ ಗಡಿ ಭಾಗದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಸುವ ಉತ್ತಮ ಗುಣಮಟ್ಟ ಹೊಂದಿದ್ದ ಶಾಲೆ ಇದೊಂದೇ ಆಗಿದ್ದು, ಓಬಳಾಪುರ, ದಾಸರಲಹಳ್ಳಿ, ಕೋಡಿಹಟ್ಟಿ, ಪಡಪ್ಪನಗುಡಿ, ಚಿಕ್ಕಬಡೇಹಳ್ಳಿ, ದೊಡ್ಡಬಡೇಹಳ್ಳಿಗಳ ವಿದ್ಯಾರ್ಥಿಗಳಿಗೆ ಆಧಾರವಾಗಿದೆ. 

ಈ ಶಾಲೆಯಲ್ಲಿ 270 ವಿದ್ಯಾರ್ಥಿಗಳು ಪಾಠ ಕಲಿಯುತ್ತಿದ್ದು, ಶತಮಾನದ ಹಿಂದಿನ ಶಾಲೆಗೆ ಮೂಲಸೌಕರ್ಯ ಹಾಗೂ ಸೌಲಭ್ಯಗಳ ಅಗತ್ಯವಿದೆ.   

ಶಾಲೆಯಲ್ಲಿ ಕೊಠಡಿಗಳ ನವೀಕರಣವಷ್ಟೇ ಅಲ್ಲದೇ ಶೌಚಾಲಯ, ಕಾಂಪೌಂಡ್ ಸಹ ಅಗತ್ಯವಿದೆ. ಶಾಲೆಯಲ್ಲಿ ಮೂಲಸೌಕರ್ಯದ ಜೊತೆಯಲ್ಲಿ ಶಿಕ್ಷಕರ ಕೊರತೆಯೂ ಕಾಡುತ್ತಿದೆ.

ಓಬಳಾಪುರ ಚಳ್ಳಕೆರೆ ತಾಲ್ಲೂಕಿನಲ್ಲಿರಬಹುದು ಆದರೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿದ್ದು ಬುಡಕಟ್ಟು ಕಲ್ಯಾಣ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು ಪ್ರತಿನಿಧಿಸುತ್ತಿರುವ ಕ್ಷೇತ್ರವಾಗಿದೆ. ಗ್ರಾಮಸ್ಥರು ಸಚಿವರು ಈ ಸ್ಥಳಕ್ಕೆ ಭೇಟಿ ನೀಡಿ ಶಾಲೆಯ ಪರಿಸ್ಥಿತಿಯನ್ನು ಪರಿಶೀಲಿಸಿ ಅಭಿವೃದ್ಧಿ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ. 

ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಸ್ಥಳೀಯ ನಿವಾಸಿ ದೇವಪುತ್ರ ಒಬಳಾಪುರ, ವಿಶೇಷ ಅನುದಾನದ ಮೂಲಕ ಶಾಲೆಯನ್ನು ಪುನರುಜ್ಜೀವನಗೊಳಿಸಬೇಕಿದೆ. ಓಬಳಾಪುರ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಇಲ್ಲಿಗೆ ಹಲವಾರು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಬರುತ್ತಾರೆ. ಆದರೆ ನಿರ್ಲಕ್ಷ್ಯದಿಂದ ಶಾಲೆ ಕಟ್ಟಡ ಶಿಥಿಲಗೊಂಡಿದ್ದು, ಗಡಿ ಭಾಗದಲ್ಲಿರುವ ಕನ್ನಡ ಶಾಲೆಯನ್ನು ಉಳಿಸಬೇಕಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com