ಮುಂಬೈ ಕರ್ನಾಟಕ ಇನ್ಮುಂದೆ ಕಿತ್ತೂರು ಕರ್ನಾಟಕ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಹೈದರಾಬಾದ್-ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕವಾಗಿ ಮರುನಾಮಕರಣ ಮಾಡಿದ ರೀತಿಯಲ್ಲಿಯೇ ಉತ್ತರ ಕರ್ನಾಟಕ ಭಾಗದ ಬಹುದಿನಗಳ ಬೇಡಿಕೆಯಾಗಿರುವ ಮುಂಬೈ-ಕರ್ನಾಟಕ ಪ್ರಾಂತ್ಯವನ್ನು...
ಮಾಧುಸ್ವಾಮಿ
ಮಾಧುಸ್ವಾಮಿ

ಬೆಂಗಳೂರು: ಹೈದರಾಬಾದ್-ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕವಾಗಿ ಮರುನಾಮಕರಣ ಮಾಡಿದ ರೀತಿಯಲ್ಲಿಯೇ ಉತ್ತರ ಕರ್ನಾಟಕ ಭಾಗದ ಬಹುದಿನಗಳ ಬೇಡಿಕೆಯಾಗಿರುವ ಮುಂಬೈ-ಕರ್ನಾಟಕ ಪ್ರಾಂತ್ಯವನ್ನು ‘ಕಿತ್ತೂರು ಕರ್ನಾಟಕ’ ಎಂದು ನಾಮಕರಣ ಮಾಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಇಷ್ಟು ದಿನ ಮುಂಬೈ ಕರ್ನಾಟಕ ಎಂದು ಕರೆಸಿಕೊಳ್ಳುತ್ತಿದ್ದ ಉತ್ತರ ಕರ್ನಾಟಕದ ಉತ್ತರ ಕನ್ನಡ, ಬೆಳಗಾವಿ, ವಿಜಯಪುರ, ಗದಗ, ಧಾರವಾಡ, ಬಾಗಲಕೋಟೆ, ಹಾವೇರಿ ಜಿಲ್ಲೆಗಳನ್ನು ಇನ್ನು ಮುಂದೆ ‘ಕಿತ್ತೂರು ಕರ್ನಾಟಕ’ ಎಂದು ಮುಕರೆಯಲಾಗುವುದು ಎಂದರು.

ಈ ಏಳೂ ಜಿಲ್ಲೆಗಳಿಗೆ ‘ಕಿತ್ತೂರು ಕರ್ನಾಟಕ’ ಎಂದು ಮರು ನಾಮಕರಣ ಮಾಡಲಾಗಿದೆ ಎಂದು ಜೆ.ಸಿ.ಮಾಧುಸ್ವಾಮಿ ಅವರು ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಭಾಗಶಃ ಪ್ರದೇಶವು ಮಳೆಯಾಶ್ರಿತ ಪ್ರದೇಶವಾಗಿದ್ದು, ಯಾವುದೇ ನೀರಾವರಿ ಸೌಲಭ್ಯವಿಲ್ಲದೇ ಬರಡು ಪ್ರದೇಶವಾಗಿರುತ್ತದೆ. ಈ ಹೋಬಳಿಯ ಹಲವು ಗ್ರಾಮಗಳಲ್ಲಿ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ನಡೆಸಲು ಮಳೆಯ ನೀರಿಗೆ ಅವಲಂಬಿತರಾಗಿದ್ದಾರೆ. ಅಕ್ಕಿಹೆಬ್ಬಾಳು ಹೋಬಳಿಯ ಸುಮಾರು 11 ಕೆರೆಗಳು ಸಕಾಲದಲ್ಲಿ ಮಳೆಯಾದರೆ ಮಾತ್ರ ತುಂಬುತ್ತವೆ. ಈ ನಿಟ್ಟಿನಲ್ಲಿ ಸದರಿ ಕೆರೆಗಳು ತುಂಬಿ ಬಹಳ ವರ್ಷಗಳೇ ಕಳೆದಿವೆ. ಈ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಅಂತರ್ಜಲ ಮಟ್ಟವು ಸುಮಾರು 600 ರಿಂದ 700 ಅಡಿಗಳವರೆಗೆ ಕುಸಿದಿರುತ್ತದೆ. ಈ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ತಾಲ್ಲೂಕಿನ 11 ಕೆರೆಗಳಿಗೆ ನೀರು ತುಂಬಿಸುವುದರಿಂದ ಈ ಕೆರೆಗಳ ಸುತ್ತಮುತ್ತಲಿನ ಗ್ರಾಮದ ಜನರಿಗೆ ಹಾಗೂ ದನಕರುಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದು ಹಾಗೂ ಈ ಭಾಗದ ಅಂತರ್ಜಲ ಮಟ್ಟ ಏರಿಕೆಯಾಗುವುದರಿಂದ 22.50 ಕೋಟಿ ಮೊತ್ತದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

ವಿಶೇಷ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ-ಆಲೂರು ಪಿಟ್ಲಳ್ಳಿ ಗ್ರಾಮಗಳ ಮಧ್ಯೆ ವೇದಾವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸುವ ಕಾಮಗಾರಿಯ ರೂ.15.66 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ರಾಜ್ಯ ಸಚಿವರ ಸಂಪುಟ ಇಂದು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಸಚಿವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com