ಬೆಂಗಳೂರು: ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದ ಹದಿನಾರು ವರ್ಷದ ಬಾಲಕಿಯೊಬ್ಬಳಿಗೆ ಗರ್ಭಪಾತಕ್ಕೆ ಹೈಕೋರ್ಟ್ ಗುರುವಾರ ಅನುಮತಿ ನೀಡಿದೆ.
ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಹೈಕೋರ್ಟ್‌ನ ನ್ಯಾಯಮೂರ್ತಿ ಎನ್.ಎಸ್.ಸಂಜಯಗೌಡ ಅವರಿದ್ದ ಏಕಸದಸ್ಯ ನಿನ್ನೆ ವಿಚಾರಣೆ ನಡೆಸಿದ್ದು, ‘ವೈದ್ಯಕೀಯ ಗರ್ಭಪಾತ ಕಾಯ್ದೆ–1971ರ ಕಲಂ 3ರ ಅಡಿಯಲ್ಲಿ 16 ವರ್ಷದ ಅತ್ಯಾಚಾರ ಸಂತ್ರಸ್ತೆಯ ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ ಮುಕ್ತಾಯಗೊಳಿಸಲು ಅನುಮತಿ ನೀಡಿದೆ.
ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಬೆಳಗಾವಿಯ ಜಿಲ್ಲಾ ಆರೋಗ್ಯ ಶಸ್ತ್ರಚಿಕಿತ್ಸಕರಿಗೆ ನಿರ್ದೇಶನ ನೀಡುವಂತೆ ಕೋರಿ ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡುವಾಗ ನ್ಯಾಯಾಲಯ ಈ ಆದೇಶವನ್ನು ನೀಡಿದೆ.
‘ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ವೈದ್ಯಕೀಯ ಗರ್ಭಪಾತ ಕಾಯ್ದೆಯಲ್ಲಿ ಕೆಲವು ಶಾಸನಬದ್ಧ ಮಿತಿಗಳಿದ್ದರೂ, ಅವು ವೈದ್ಯರಿಗೆ ಮಾತ್ರ ಅನ್ವಯಿಸುತ್ತವೆ. ವೈದ್ಯಕೀಯವಾಗಿ ಗರ್ಭಧಾರಣೆ ಅಂತ್ಯಗೊಳಿಸುವ ಅನಿವಾರ್ಯತೆಯನ್ನು ನ್ಯಾಯಾಲಯಗಳು ಭಿನ್ನ ರೀತಿಯಲ್ಲಿ ಪರಿಗಣಿಸಬೇಕು’
‘ಅಪ್ರಾಪ್ತೆಯನ್ನು ಬಲವಂತವಾಗಿ ಹೆರುವಂತೆ ಮಾಡಿದರೆ ಅದು ಅಪರಾಧದ ಹೊರೆಯನ್ನು ಹೊರಲು ಬಲವಂತ ಮಾಡಿದಂತಾಗುತ್ತದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಮಹಿಳೆ ತನ್ನ ದೈಹಿಕ ಸಮಗ್ರತೆ ರಕ್ಷಿಸಿಕೊಳ್ಳುವ ಪವಿತ್ರ ಹಕ್ಕನ್ನು ಹೊಂದಿರುತ್ತಾಳೆ ಎಂಬುದನ್ನು ಮರೆಯಬಾರದು’ ಎಂದು ನ್ಯಾಯಪೀಠ ಹೇಳಿದೆ.
Advertisement